ಆಪರೇಷನ್ ಕಮಲ: ಅಮಿತ್ ಶಾ ಪಿತಾಮಹ, ಮೋದಿ ಮೌನಿ ಬಾಬಾ
ಬಳ್ಳಾರಿ, ಜುಲೈ 13: ಈಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನ, ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿ ವರಿಷ್ಠರ ಕೈವಾಡವಿದೆ ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಆರೋಪಿಸಿದರು.
ಆಪರೇಷನ್ ಕಮಲಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಪಿತಾಮಹ. ಎಲ್ಲವೂ ತಮ್ಮ ನೇರದಲ್ಲಿ ನಡೆಯುತ್ತಿದ್ದರೂ, ಪ್ರಧಾನಿ ಮೋದಿ 'ಮೌನಿಬಾಬಾ' ಆಗಿದ್ದಾರೆಂದು ಉಗ್ರಪ್ಪ, ಬಿಜೆಪಿ ವಿರುದ್ದ ಕಿಡಿಕಾರಿದರು.
ಗೋವಾದಲ್ಲಿ ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೊಮ್ಮೆ ನೋಡಿ, ಈ ಎಲ್ಲಾ ಬೆಳವಣಿಗೆಗಳು ಅಮಿತ್ ಶಾ ನಿರ್ದೇಶನದಲ್ಲಿ ನಡೆಯುತ್ತಿದೆ ಎಂದು ಉಗ್ರಪ್ಪ ಆಪಾದಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಗ್ರಪ್ಪ, ಶಾಸಕರನ್ನು ಕೋಟಿ ಕೋಟಿ ಕೊಟ್ಟು ಖರೀದಿಸುತ್ತಿದ್ದಾರೆ, ಕೇಂದ್ರದ ಆದಾಯ ತೆರಿಗೆ, ಇಡಿ ಇಲಾಖೆಗಳು ಕಣ್ಮುಚ್ಚಿ ಕೂತಿದೆ ಎಂದು ಉಗ್ರಪ್ಪ ಬೇಸರ ವ್ಯಕ್ತ ಪಡಿಸಿದರು.
ಸಿದ್ದಾಂತ, ಪ್ರಜಾಪ್ರಭುತ್ವದ ಬಗ್ಗೆ ದೊಡ್ಡದೊಡ್ಡ ಮಾತನಾಡುವ ಮೋದಿಯವರು ಮೌನಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉಗ್ರಪ್ಪ ಹೇಳಿದರು.
ಯಡಿಯೂರಪ್ಪನವರಿಗೆ ವಿಶ್ವಾಸಮತ ಸಾಬೀತು ಪಡಿಸಲು ಸಾಧ್ಯವಾಗದ ನಂತರ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿರುವುದು ಎನ್ನುವುದನ್ನು ಬಿಜೆಪಿಯವರು ಮೊದಲು ಅರಿಯಲಿ ಎಂದು ಉಗ್ರಪ್ಪ ಹೇಳಿದರು.












Click it and Unblock the Notifications