ಕೊರ್ಲಗುಂದಿ: ಮತಗಟ್ಟೆಯಲ್ಲೇ ಹೆರಿಗೆ, ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಬಳ್ಳಾರಿ, ಮೇ, 10: ರಾಜ್ಯದೆಲ್ಲೆಡೆ ಇಂದು ವಿಧಾನಸಭೆ ಚುನಾವಣೆಯ ಮತದಾನ ನಡೆದಿದೆ. ಅಲ್ಲದೆ ಹಲವೆಡೆ ಗರ್ಭಿಣಿಯರು ಕೂಡ ಮತ ಚಲಾವಣೆ ಮಾಡಿ ಗಮನ ಸೆಳೆದಿದ್ಧಾರೆ. ಅದೇ ರೀತಿ ಮತದಾನ ಮಾಡಲು ಆಗಮಿಸಿದ ತುಂಬು ಗರ್ಭಿಣಿಗೆ ಮತ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾದ ಅಪರೂಪದ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ ನಡೆದಿದೆ.
ಕೊರ್ಲಗುಂದಿ ಗ್ರಾಮದ ಮಣಿಲಾ ಎನ್ನುವ ತುಂಬಿದ ಗರ್ಭಿಣಿ ಬೆಳಗ್ಗೆ 10 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ನಂತರ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಮತದಾನ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ತಾಯಿ ಮತ್ತು ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ದಾಖಲಿಲಾಗಿತ್ತು. ಇದೀಗ ತಾಯಿ, ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಸೆಕ್ಟರ್ ಅಧಿಕಾರಿ ವೆಂಕಟೇಶ್ ರಾಮಚಂದ್ರಪ್ಪ ಅವರು, ಮತದಾನ ಕೇಂದ್ರದಲ್ಲಿಯೇ ಸಹಜ ಹೆರಿಗೆ ಆಗಿದೆ. ಚುನಾವಣಾ ಸಿಬ್ಬಂದಿ ಮತ್ತು ಮತದಾನಕ್ಕೆ ಬಂದಿದ್ದ ಮಹಿಳೆಯರು ಹೆರಿಗೆ ಮಾಡಿಸಲು ಸಹಕರಿಸಿದ್ದು, ಹೆರಿಗೆಯಾದ ಕೂಡಲೇ ತಾಯಿ ಮಗುವನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ದಾಖಲಿಸಲಾಗಿತ್ತು. ಸದ್ಯ ತಾಯಿ, ಮಗು ಆರೋಗ್ಯ ಕೇಂದ್ರದಲ್ಲಿಯೇ ಉಳಿದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಒ ಆದಿಲಕ್ಷ್ಮಿ, ಗ್ರಾಮಲೆಕ್ಕಾಧಿಕಾರಿ ಮಧುಕುಮಾರ್ ಇದ್ದರು.












Click it and Unblock the Notifications