ಬಳ್ಳಾರಿ; ಜಿಲ್ಲೆಯಲ್ಲಿ 11,52,411 ಮತದಾರರು, 1,222 ಮತಗಟ್ಟೆ
ಬಳ್ಳಾರಿ, ಮೇ 7; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮೇ 10ರ ಬುಧವಾರ ನಡೆಯಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 11,52,411 ಮತದಾರರು ಈ ಬಾರಿ ಹಕ್ಕು ಚಲಾವಣೆ ಮಾಡಲು ಅರ್ಹರು. ಜಿಲ್ಲೆಯಲ್ಲಿ 1,222 ಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿದ್ದು, ಮತಗಟ್ಟೆ ಕಾರ್ಯಗಳಿಗೆ 5,815 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಮತದಾನದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಕಂಪ್ಲಿ, ಸಿರಗುಪ್ಪ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ ಮತ್ತು ಸಂಡೂರು ಸೇರಿ 5 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮೇ 13ರ ಶನಿವಾರದಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯಂತೆ ಜಿಲ್ಲೆಯಲ್ಲಿ 5,67,319 ಪುರುಷ, 5,84,920 ಮಹಿಳೆ ಮತ್ತು 172 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 11,52,411 ಮತದಾರರು ಇದ್ದಾರೆ. ಇವರಲ್ಲಿ 39,359 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಯುವ ಮತದಾರರನ್ನು ನೋಂದಾಯಿಸಿದ ಕೀರ್ತಿ ಬಳ್ಳಾರಿ ಜಿಲ್ಲೆಯದ್ದು.
ಮತಗಟ್ಟೆಗಳ ವಿವರ; ಬಳ್ಳಾರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 1,222 ಮತಗಟ್ಟೆಗಳಿಗೆ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್)ಗಳನ್ನು ಬಳಸಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 676, ನಗರ & ಪಟ್ಟಣ ಪ್ರದೇಶದಲ್ಲಿ 515 ಮತಗಟ್ಟೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

ಕಂಪ್ಲಿಯಲ್ಲಿ 240, ಸಿರಗುಪ್ಪದಲ್ಲಿ 227, ಬಳ್ಳಾರಿ ಗ್ರಾಮೀಣದಲ್ಲಿ 242, ಬಳ್ಳಾರಿ ನಗರದಲ್ಲಿ 262 ಹಾಗೂ ಸಂಡೂರು ಕ್ಷೇತ್ರದಲ್ಲಿ 251 ಮತಗಟ್ಟೆಗಳಿವೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 295 ಸೂಕ್ಷ್ಮ ಹಾಗೂ 73 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುತ್ತದೆ.
ಬೇಸಿಗೆಯ ಸುಡು ಬಿಸಿಲಿನ ಹಿನ್ನಲೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಕುಳಿತುಕೊಳ್ಳಲು ಬೆಂಚ್ ಹಾಗೂ ನೆರಳಿಗೆ ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಯ ಸಿಬ್ಬಂದಿಗೆ ಎರಡು ಬಾರಿ ತರಬೇತಿ ನೀಡಲಾಗಿದ್ದು, ಮೇ 9ರಂದು ಕೂಡ ಅಗತ್ಯ ಮಾಹಿತಿ, ತರಬೇತಿ ನೀಡಲಾಗುತ್ತದೆ.
ಭದ್ರತಾ ವ್ಯವಸ್ಥೆ ಮಾಹಿತಿ; ಮತದಾನದ ದಿನ ಚುನಾವಣಾ ಕಾರ್ಯಕ್ಕಾಗಿ 316 ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. 184 ಬಸ್, 62 ಮಿನಿ ಬಸ್, 60 ಟ್ರ್ಯಾಕ್ಸ್ ಮತ್ತು ಇತರೆ ವಾಹನ ಬಳಸಲಾಗುತ್ತಿದ್ದು, ಇವಿಎಂ ಸಾಗಿಸಲು ಒಟ್ಟು 10 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಮತದಾನದ ದಿನ ಕರ್ತವ್ಯ ನಿರ್ವಹಿಸಲು 1,457 ಪಿ. ಆರ್. ಒ, 1,483 ಎ. ಪಿ. ಆರ್. ಒ, 2,875 ಪಿ. ಓ ಹಾಗೂ ಹೆಚ್ಚುವರಿಯಾಗಿ 99 ಸಿಬ್ಬಂದಿ ಸೇರಿ ಒಟ್ಟು 5,815 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಕಂಪ್ಲಿ ಕ್ಷೇತ್ರಕ್ಕೆ 1137, ಸಿರಗುಪ್ಪ 1093, ಬಳ್ಳಾರಿ ಗ್ರಾಮೀಣ 1172, ಬಳ್ಳಾರಿ ನಗರ 1226 ಹಾಗೂ ಸಂಡೂರು ಕ್ಷೇತ್ರದಲ್ಲಿ 1187 ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ಬುಧವಾರ ಮತದಾನ ಪೂರ್ಣಗೊಂಡ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರವಾದ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಮೇ 13ರಂದು ಮತ ಎಣಿಕೆ ಕಾರ್ಯ ಇದೇ ಕಾಲೇಜಿನಲ್ಲಿ ನಡೆಯಲಿದೆ.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಮಾತನಾಡಿ, "ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಹಾಗೂ ಭದ್ರತೆಗೆ ಒಟ್ಟು 1,738 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಭದ್ರತಾ ಕಾರ್ಯಕ್ಕೆಂದೇ ಸುಮಾರು 3500 ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications