ಜನವರಿ 1ರಿಂದ ಕಸ ಸಂಗ್ರಹಕ್ಕೆ ಶುಲ್ಕ ಕಟ್ಟಬೇಕು
ಬಳ್ಳಾರಿ, ಡಿಸೆಂಬರ್ 11: "ಜನವರಿಯಿಂದ ನಗರದಲ್ಲಿರುವ ಹೋಟೆಲ್ ಮತ್ತು ವಾಣಿಜ್ಯ ಮಳಿಗೆಗಳಿಂದ ಮಹಾನಗರ ಪಾಲಿಕೆಯು ಕಸ ನಿರ್ವಹಣೆ ಶುಲ್ಕವನ್ನು ವಸೂಲಿ ಮಾಡಲಿದೆ" ಎಂದು ಆಯುಕ್ತೆ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ.
2021ರ ಜನವರಿ 1ರಿಂದ ಕಸ ನಿರ್ವಹಣೆ ಶುಲ್ಕವನ್ನು ಪಾವತಿ ಮಾಡಬೇಕಿದೆ. ಮೊದಲ ಹಂತದಲ್ಲಿ ಉದ್ದಿಮೆದಾರರಿಂದ ಕಸ ಸಂಗ್ರಹ ಶುಲ್ಕವನ್ನು ವಸೂಲು ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಮನೆಗಳಿಂದಲೂ ಶುಲ್ಕ ವಸೂಲು ಮಾಡಲು ನಿರ್ಧರಿಸಲಾಗಿದೆ.
"ಬಳ್ಳಾರಿ ನಗರದಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿಲ್ಲ. ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು ರಾತ್ರಿ ರಸ್ತೆಗೆ ಕಸ ತಂದು ಸುರಿಯುತ್ತಾರೆ. ಅದನ್ನು ಬೆಳಗ್ಗೆ ಪೌರಕಾರ್ಮಿಕರು ವಿಲೇವಾರಿ ಮಾಡುತ್ತಾರೆ. ಇದು ಸದ್ಯದ ಅವ್ಯವಸ್ಥೆಯಾಗಿದೆ" ಎಂದು ಆಯುಕ್ತರು ಹೇಳಿದರು.

ನಗರದ ವಿವಿಧ ಪ್ರದೇಶಗಳಲ್ಲಿ ಕಸ ಹೇಗೆ ಸಂಗ್ರಹವಾಗುತ್ತಿದೆ?, ವಿಲೇವಾರಿ ಹೇಗೆ ನಡೆದಿದೆ? ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸದ್ಯ ಕಸ ನಿರ್ವಹಣೆಗೆ ಮಾನವ ಸಂಪನ್ಮೂಲಕ್ಕಿಂತಲೂ ಯಂತ್ರಗಳು ಮತ್ತು ವಾಹನಗಳು ಹೆಚ್ಚು ಬೇಕಾಗಿವೆ. ಮನೆಗಳಿಗಂದ ಕಸ ಸಂಗ್ರಹಿಸಲು 100 ವಾಹನಗಳು ಬೇಕಾಗಿದ್ದು, ಸದ್ಯ 62 ವಾಹನಗಳಿವೆ.
ದಂಡ ಕಟ್ಟಬೇಕು: ನಗರದಲ್ಲಿ ಕಸವನ್ನು ಪಾಲಿಕೆ ಸಿಬ್ಬಂದಿಗೆ ನೀಡದೆ ಎಲ್ಲೆಂದರಲ್ಲಿ ಎಸೆದರೆ ದಂಡ ಹಾಕಲಾಗುತ್ತದೆ. ಕಸ ವಿಂಗಡಣೆ ಮಾಡದೇ ಇದ್ದರೂ ಸಹ ದಂಡ ವಿಧಿಸಲು ಅವಕಾಶವಿದೆ. ಈ ನಿಯಮಗಳನ್ನು ಬಳ್ಳಾರಿ ಮಹಾನಗರ ಪಾಲಿಕೆ ಜಾರಿಗೆ ತರಲಿದೆ.
ಬಳ್ಳಾರಿ ನಗರದಲ್ಲಿ ಬೆಳಗ್ಗೆ 6 ರಿಂದ 9ರವರೆಗೆ ಕಳೆದ ಒಂದು ವಾರದಿಂದ ನಗರ ಪ್ರದಕ್ಷಿಣೆಯನ್ನು ಆಯುಕ್ತರು ಮಾಡುತ್ತಿದ್ದಾರೆ. ಇದರಿಂದಾಗಿ ನಗರದ ಸಮಸ್ಯೆಗಳು ಚೆನ್ನಾಗಿ ತಿಳಿಯುತ್ತಿವೆ. ಕಸದ ರಾಶಿ, ಬೀದಿಬದಿ ವ್ಯಾಪಾರಿಗಳ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಡ್ರೈನೆಜ್ ಬ್ಲಾಕ್ ಸೇರಿದಂತೆ ಅನೇಕ ಸಮಸ್ಯೆ ಬಗ್ಗೆ ಜನರು ದೂರು ನೀಡುತ್ತಿದ್ದಾರೆ.












Click it and Unblock the Notifications