ಹಂಪಿ ಉತ್ಸವ : ವಿಜಯನಗರ ವೈಭವ ಪ್ರದರ್ಶನ
ಹೊಸಪೇಟೆ, ಜ.6:ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರು-ಬಳ್ಳಾರಿ ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ಜ.10ರಿಂದ 12 ರವರೆಗೆ 'ಹಂಪಿ ಉತ್ಸವ-2014'ನ್ನು ಆಯೋಜಿಸಲಾಗಿದೆ. ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡಿ ಇಂದಿನ ಪೀಳಿಗೆಗೆ ವಿಜಯನಗರ ಅರಸದ ವೈಭವವನ್ನು ಪ್ರದರ್ಶಿಸುವುದು ಹಂಪಿ ಉತ್ಸವ ಉದ್ದೇಶವಾಗಿದೆ.
ಜ.10ರ ಸಂಜೆ 5 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆ (ಗಾಯಿತ್ರಿಪೀಠ ಹತ್ತಿರದ ಮೈದಾನ)ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರೂ ಆಗಿರುವ ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸೇರಿದಂತೆ ಲೋಕಸಭಾ ಸದಸ್ಯರು, ಶಾಸಕರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಜ.11ರ ಸಂಜೆ 5ಗಂಟೆಗೆ ನಡೆಯುವ ಸನ್ಮಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ನೆರವೇರಿಸಲಿದ್ದು ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಜ. 12ರ ಸಂಜೆ 5ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾಡಲಿದ್ದಾರೆ.
ವಸತಿ ಸಚಿವ ಅಂಬರೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಗ್ರಾಮೀಣ ಕ್ರೀಡೆ, ಕುಸ್ತಿ ಪಂದ್ಯಾವಳಿ, ವರ್ಣಚಿತ್ರ ಸ್ಪರ್ಧೆ, ಆಗಸದಲ್ಲಿ ಹಂಪಿ, ವಿಕಲಚೇತನರ ಕ್ರೀಡಾಕೂಟ, ಮಹಿಳಾ ಉತ್ಸವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಜ.10ರ ಬೆಳಗ್ಗೆ ಸಚಿವೆ ಉಮಾಶ್ರೀ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹಂಪಿ ಉತ್ಸವ ಸ್ಪರ್ಧೆಗಳು
ಆಗಸದಲ್ಲಿ ಹಂಪಿ (ಹಂಪಿ ಬೈ ನೈಟ್ - (ಇದು ವಿವಾದಕ್ಕೀಡಾಗಿದೆ)), ಪಾರಂಪರಿಕ ಗ್ರಾಮ (ಇ ಗ್ರಾಮ), ಕಾಲ್ನಡಿಗೆಯಲ್ಲಿ ಹಂಪಿ ವಿಹಂಗಮ ನೋಟ, ಆಹಾರ ಮೇಳ (ಹಂಪಿ ಬೈ ಪುಡ್), ಶೋಭಾ ಯಾತ್ರೆ, ಹಂಪಿ ಕ್ರೀಡೆಗಳು, ಸಾಹಸ ಕ್ರೀಡೆಗಳು, ಎಕ್ಸ್ಟ್ರೀಮ್ ಹಂಪಿ, ವಿನೋದ ಹಂಪಿ (ಫನ್ ಹಂಪಿ), ಹಂಪಿ ಪುಸ್ತಕ ಪ್ರದರ್ಶನ, ಹಂಪಿ ವಿಹಂಗಮ ನೋಟ (ಹಂಪಿ ಛಾಯಾಚಿತ್ರ ಪ್ರದರ್ಶನ), ವರ್ಣ ಚಿತ್ರ ರಚನಾ ಸ್ಪರ್ಧೆ, ಶಿಲ್ಪಕಲಾ ಸ್ಪರ್ಧೆ

ಹಂಪಿ ಉತ್ಸವಕ್ಕೆ ಅನುದಾನ ಅಗತ್ಯವಿದೆ
ಉತ್ಸವಕ್ಕೆ 6 ಕೋಟಿ ರೂ. ಅನುದಾನದ ಅಗತ್ಯವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1.5 ಕೋಟಿ ರೂ, ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನ್ನು ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ ಹೇಳಿದ್ದಾರೆ

ಕಾರ್ಯಕ್ರಮ ವೀಕ್ಷಣೆಗೆ ಹೆಚ್ಚು ಶುಲ್ಕ
ಪ್ರಮುಖ ವೇದಿಕೆಯಲ್ಲಿ ನಡೆಯುವ ರಾಷ್ಟ್ರೀಯ ,ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮಗಳ ವೀಕ್ಷಣೆಗೆ ಪ್ಲಾಟಿನಂ ಕಾರ್ಡ್‌ಗೆ ರೂ. 3000 ಮತ್ತು ಗೋಲ್ಡ್ ಕಾರ್ಡ್ ದರ ರೂ. 2,000 ನಿಗದಿಪಡಿಸಿದ್ದು ತಲಾ 3000 ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಇನ್ನೊಂದು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ಪ್ಲಾಟಿನಂ ಕಾರ್ಡ್‌ಗೆ ರೂ. 2000 ಮತ್ತು ಗೋಲ್ಡ್ ಕಾರ್ಡ್ ದರ ರೂ. 1,000 ನಿಗದಿಪಡಿಸಿದ್ದು ತಲಾ 1000 ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ

ಸಾಮಾನ್ಯ ಜನರಿಗೆ ನಿಲುಕದಂತಾಗಿವೆ
ಹಂಪಿ ಉತ್ಸವ ಜನರ ಉತ್ಸವವಾಗುವ ಉದ್ದೇಶದಿಂದ ಆರಂಭಿಸಲಾಗಿತ್ತು. ಆದರೆ, ಉತ್ಸವದ ಅಂಗವಾಗಿ ಪ್ರತಿಯೊಂದರಲ್ಲೂ ಶುಲ್ಕ ವಿಧಿಸುವ ಮೂಲಕ ಉತ್ಸವದ ಕೆಲ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ಸಾಮಾನ್ಯ ಜನರಿಗೆ ನಿಲುಕದಂತಾಗಿವೆ

ಹಂಪಿ ಬೈ ನೈಟ್ ಯೋಜನೆ
ವಿಜಯನಗರ ಅರಸರ ರಾಜಧಾನಿ ಹಂಪಿಯ ಸ್ಮಾರಕಗಳನ್ನು ಪ್ರವಾಸಿಗರು ರಾತ್ರಿವೇಳೆಯಲ್ಲೂ ವೀಕ್ಷಿಸಲು ಅನುಕೂಲವಾಗುವಂತೆ ಲೈಟಿಂಗ್ ವ್ಯವಸ್ಥೆ ಮಾಡುವುದೇ ಹಂಪಿ ಬೈ ನೈಟ್ ಯೋಜನೆಯಾಗಿತ್ತು. 2010 ರಲ್ಲಿ ರಾಜ್ಯ ಸರ್ಕಾರ 'ಹಂಪಿ ಬೈ ನೈಟ್' ಯೋಜನೆ ಕಾಮಗಾರಿ ಗುತ್ತಿಗೆಯನ್ನು ಬೆಂಗಳೂರು ಮೂಲದ ಇನೋವೆಟಿವ್ ಲೈಟಿಂಗ್ ಸಿಸ್ಟಮ್ಸ್ ಕಂಪೆನಿಗೆ ನೀಡಿ ಆದೇಶ ಹೊರಡಿಸಿತ್ತು.
ಅದರೆ, ಕಂಪೆನಿ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿದೆ ಮತ್ತು ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಹ ಕಾಮಗಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ












Click it and Unblock the Notifications