ಬಳ್ಳಾರಿ; ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕನ ಸಂಬಂಧಿ ಶವ ಪತ್ತೆ
ಬಳ್ಳಾರಿ, ನವೆಂಬರ್ 26 : ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಸಂಬಂಧಿ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಮೂರು ದಿನಗಳಿಂದ 10 ವರ್ಷದ ಬಾಲಕ ನಾಪತ್ತೆಯಾಗಿದ್ದ.
ಮೃತಪಟ್ಟ ಬಾಲಕನನ್ನು ಹೊಸಪೇಟೆಯ ಮೃತ್ಯುಂಜಯ ನಗರದ ನಿವಾಸಿ ಹಲಗಾ ನಾಯ್ಕ್ ಹಿರಿಯ ಪುತ್ರ ಸುನೀಲ್ (10) ಎಂದು ಗುರುತಿಸಲಾಗಿದೆ. 10 ನೇ ತರಗತಿ ಓದುತ್ತಿದ್ದ ಸುನೀಲ್ ಮೂರು ದಿನಗಳಿಂದ ಕಾಣೆಯಾಗಿದ್ದ.
ಮಂಗಳವಾರ ಕಾಲುವೆಯಲ್ಲಿ ಸುನೀಲ್ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಹತ್ಯೆ ಮಾಡಿ ಇಬ್ರಾಹಿಂಪುರ ಬಳಿಯ ಕಾಲುವೆಗೆ ಶವವನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಟ್ಯೂಷನ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.

ಟ್ಯೂಷನ್‌ಗೆ ಹೋಗಿದ್ದ ಬಾಲಕ ಮನೆಗೆ ವಾಪಸ್ ಬಾರದೇ ಇದ್ದಾಗ ಮನೆಯವರು ಎಲ್ಲಾ ಕಡೆ ಹುಡುಕಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಇಂದು ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಸುನೀಲ್ ಎಂಬುದು ತಿಳಿದುಬಂದಿದೆ. ಪೊಲೀಸರು ಮಹಜರು ನಡೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ನವೆಂಬರ್ 23ರಂದು ಸುನೀಲ್ ಸಹಪಾಠಿಗಳ ಜೊತೆ ಜಗಳವಾಡಿದ್ದ. ಮನೆಯಲ್ಲಿ ಇದೇ ವಿಚಾರದಲ್ಲಿ ಆತನಿಗೆ ಬೈದಿದ್ದರು. ಸಹಪಾಠಿಗಳು ಕೊಲೆ ಮಾಡಿದ್ದಾರೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications