ಚುನಾವಣಾ ಖರ್ಚು ವೆಚ್ಚ: ಸನ್ನಿ ಡಿಯೋಲ್ ಗೆ ಆಯೋಗದಿಂದ ನೋಟಿಸ್
ಚಂದೀಗಢ, ಜೂನ್ 19: ಹಿಂದಿ ಚಿತ್ರರಂಗದ ಹಿರಿಯ ನಟ, ಗುರ್ ದಾಸ್ಪುರ್ ಸಂಸದ ಸನ್ನಿ ಡಿಯೋಲ್ ಅವರಿಗೆ ಚುನಾವಣಾ ಆಯೋಗದಿಂದ ಬುಧವಾರ (ಜೂನ್ 19) ದಂದು ನೋಟಿಸ್ ಜಾರಿಯಾಗಿದೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿದ ಮೊತ್ತ ಮಿತಿ ಮೀರಿದ್ದರಿಂದ ಸನ್ನಿ ಡಿಯೋಲ್ ಗೆ ನೋಟಿಸ್ ನೀಡಲಾಗಿದೆ.
ಅಭ್ಯರ್ಥಿಗೆ ಚುನಾವಣಾ ಖರ್ಚು ವೆಚ್ಚದ ಮಿತಿ 70 ಲಕ್ಷ ರು ಎಂದು ಆಯೋಗ ನಿಗದಿ ಪಡಿಸಲಾಗಿತ್ತು. ಆದರೆ, ಸನ್ನಿ ಡಿಯೋಲ್ ಅವರು ನಿಗದಿತ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಈ ಬಗ್ಗೆ ಪ್ರಶ್ನಿಸಿ ನೋಟಿಸ್ ಕಳಿಸಲಾಗಿದೆ ಎಂದು ಗುರ್ ದಾಸ್ಪುರ್ ಜಿಲ್ಲಾ ಅಧಿಕಾರಿ ವಿಪುಲ್ ಉಜ್ವಲ್ ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆ 2019ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ 59 ವರ್ಷ ವಯಸ್ಸಿನ ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಜಖಾರ್ ಅವರನ್ನು 82,459 ಮತಗಳಿಂದ ಸೋಲಿಸಿ ಮೊದಲ ಪ್ರಯತ್ನದಲ್ಲೇ ಸಂಸದರಾಗಿ ಆಯ್ಕೆಯಾದರು.

ಸನ್ನಿ ಡಿಯೋಲ್ ಅವರ ಚುನಾವಣಾ ಖರ್ಚು ವೆಚ್ಚ 86 ಲಕ್ಷ ರುಗೂ ಅಧಿಕವಾಗಿದೆ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ವಿವರಗಳನ್ನು ಜಿಲ್ಲಾಧಿಕಾರಿ ಉಜ್ವಲ್ ಸದ್ಯಕ್ಕೆ ಹಂಚಿಕೊಂಡಿಲ್ಲ.
ಜೂನ್ 22 ಹಾಗೂ 23ರೊಳಗೆ ಈ ನೋಟಿಸ್ ಗೆ ಉತ್ತರ ನೀಡಲು ಸನ್ನಿ ಡಿಯೋಲ್ ಗೆ ಸೂಚಿಸಲಾಗಿದೆ. ಫ್ಯಾನ್ ಆಫ್ ಸನ್ನಿ ಡಿಯೋಲ್ ಎಂಬ ಫೇಸ್ ಬುಕ್ ಪುಟದ ಮೂಲಕ ಚುನಾವಣಾ ಪ್ರಚಾರ ನಡೆಸಿದ್ದರ ಬಗ್ಗೆ ಈ ಮುಂಚೆ ಪ್ರಶ್ನಿಸಲಾಗಿತ್ತು.












Click it and Unblock the Notifications