ಆಂಧ್ರಪ್ರದೇಶ; ಸ್ಯಾನಿಟೈಸರ್ ಕುಡಿದು 9 ಜನರು ಸಾವು
ಅಮರಾವತಿ, ಜುಲೈ 31 : ಮದ್ಯದ ಅಂಗಡಿಗಳು ಬಂದ್ ಆಗಿರುವ ಕಾರಣ ಸ್ಯಾನಿಟೈಸರ್ ಕುಡಿದ 9 ಜನರು ಮೃತಪಟ್ಟ ಘಟನೆ ಆಂಧ್ರಪ್ರದೇಶಲ್ಲಿ ನಡೆದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರದೇಶದಲ್ಲಿ ಸಿಕ್ಕ ಸ್ಯಾನಿಟೈಸರ್‌ಗಳನ್ನು ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ.
ಪ್ರಕಾಶಂ ಜಿಲ್ಲೆಯ ಕುರಿಚೇಡು ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಕಳೆದ 10 ದಿನಗಳಿಂದ ಇಪ್ಪತ್ತಕ್ಕೂ ಅಧಿಕ ಜನರು ಸ್ಯಾನಿಟೈಸರ್ ಕುಡಿದಿದ್ದು, 9 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ಮೊದಲ ಸಾವು ದಾಖಲಾಗಿತ್ತು. ಗುರುವಾರ ಮೂವರು ಮೃತಪಟ್ಟಿದ್ದರು. ಶುಕ್ರವಾರ ಬೆಳಗ್ಗೆ 6 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತಪಟ್ಟವರೆಲ್ಲಾ 25 ರಿಂದ 60 ವರ್ಷ ವಯೋಮಿತಿಯವರು.

ಕುರಿಚೇಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ವೈರಸ ಸೋಂಕಿನ ಪ್ರಕರಣಗಳು ಹೆಚ್ಚಿವೆ. ಆದ್ದರಿಂದ, ಸರ್ಕಾರ 10 ದಿನಗಳಿಂದ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಮದ್ಯದಂಗಡಿಗಳು ಮುಚ್ಚಿವೆ.
ಮದ್ಯ ಸಿಗದ ಕಾರಣ ಜನರು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ. ಸ್ಥಳೀಯವಾಗಿ ಸಿಕ್ಕ ಸ್ಯಾನಿಟೈಸರ್‌ಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಪರೀಕ್ಷೆಗೆ ಕಳುಹಿಸಿದ್ದಾರೆ.
ಸ್ಯಾನಿಟೈಸರ್ ಕುಡಿದ ಕೆಲವೇ ಕ್ಷಣಗಳಲ್ಲಿ ಎಲ್ಲರೂ ಪ್ರಜ್ಞೆ ತಪ್ಪಿ ಬಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಷ್ಟು ಸ್ಯಾನಿಟೈಸರ್ ಕುಡಿದಿದ್ದಾರೆ? ಎಂಬುದು ತಿಳಿದಿಲ್ಲ.
ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ 54 ದಿನಗಳ ಕಾಲ ಮದ್ಯದ ಅಂಗಡಿಗಳು ಬಂದ್ ಆಗಿದ್ದವು. ಆಗಲೂ ಸ್ಯಾನಿಟೈಸರ್ ಕುಡಿದ ಪ್ರಕರಣಗಳು ಹಲವು ರಾಜ್ಯಗಳಲ್ಲಿ ಬೆಳಕಿಗೆ ಬಂದಿತ್ತು.
ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 1,30,557ಕ್ಕೆ ಏರಿಕೆಯಾಗಿದೆ. 1,281 ಜನರು ಇದುವರೆಗೂ ರಾಜ್ಯದಲ್ಲಿ ಮೃತಪಟ್ಟಿದ್ದಾರೆ.












Click it and Unblock the Notifications