ಈರುಳ್ಳಿ ಬೇಕಾ ಈರುಳ್ಳಿ ಕಿ.ಲೋ 9 ರು ಮಾತ್ರ
ಬೆಂಗಳೂರು, ಸೆ.6: ಭಾರತದಲ್ಲಿ ಈರುಳ್ಳಿ ಮೂಟೆ ಹೊಂದಿರುವವರನ್ನು ಲಕ್ಷಾಧೀಶ, ಕೋಟ್ಯಧಿಪತಿ ಸಾಲಿನಲ್ಲಿ ನೋಡುವ ಸಂದರ್ಭದಲ್ಲಿ ಈರುಳ್ಳಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಸುದ್ದಿ ಬಂದಿದೆ. ವೆಬ್ ಸೈಟ್ ವೊಂದು ಆನ್ ಲೈನ್ ಶಾಪಿಂಗ್ ಮೂಲಕ ಈರುಳ್ಳಿ ಖರೀದಿಸಿದರೆ ಕೇವಲ 9 ರು ಗೆ 1 ಕೆಜಿ ಈರುಳ್ಳಿ ನೀಡುತ್ತಿದೆ.
ಗ್ರೂಪ್ ಆನ್ ಇಂಡಿಯಾ ಎಂಬ ಶಾಪಿಂಗ್ ವೆಬ್ ತಾಣ ಇಂಥದ್ದೊಂದು ಭರ್ಜರಿ ಆಫರ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಯಾರಿಗುಂಟು ಯಾರಿಗಿಲ್ಲ ಎಂಬಂತೆ ಜನ ಕೂಡಾ ಮುಗಿ ಬಿದ್ದು ಈರುಳ್ಳಿ ಖರೀದಿಸುತ್ತಿದ್ದಾರೆ. ದೆಹಲಿ ಮೂಲದ ಈ ಸಂಸ್ಥೆ ಹೋಲ್ ಸೆಲ್ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಮುಂದಾಗಿದೆ.

ಈ ಅಮೋಘ ಕೊಡುಗೆ ಕೇವಲ ದೆಹಲಿ ಮಾತ್ರ ಸೀಮಿತವಾಗಿಲ್ಲ.ಸುಮಾರು 78 ನಗರಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ. ಗುರುವಾರದಿಂದ ಈ ಆಫರ್ ಆರಂಭಗೊಂಡಿದ್ದು ಒಂದಕಿ ಬೆಲೆಯಲ್ಲಿ ಈರುಳ್ಳಿ ಕೊಳ್ಳುವ ಸಾರ್ವಜನಿಕರ ಕನಸು ನನಸಾಗಲಿದೆ.
ಇದೊಂದು ಸರಳವಾದ ಡೀಲ್. ಈರುಳ್ಳಿ ಬೆಲೆ ಗಗನವನ್ನು ಚುಂಬಿಸುವಾಗ ನಾವು 9 ರು ಗೆ ಕೆಜಿ ಈರುಳ್ಳಿ ಅದೂ ಒಳ್ಳೆ ಸರಕು ಸಿಗುತ್ತದೆ ಎಂದರೆ ಜನ ಖಂಡಿತವಾಗಿಯೂ ಆಫರ್ ಒಪ್ಪಿಕೊಳ್ಳುತ್ತಾರೆ. ಆನ್ ಲೈನ್ ಬುಕ್ಕಿಂಗ್ ನಂತರ ಈರುಳ್ಳಿಯನ್ನು ಮನೆ ಮನೆಗೂ ತಲುಪಿಸಲಾಗುತ್ತದೆ. ಎಂದು ಗ್ರೂಪಾನ್ ಇಂಡಿಯಾದ ಸಿಇಒ ಅಂಕುರ್ ವಾರಿಕೂ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಒಮ್ಮೆ ಬುಕ್ಕಿಂಗ್ ಮಾಡಿದ ಮೇಲೆ ಈರುಳ್ಳಿ ನಿಮ್ಮ ಮನೆ ತಲುಪಲು 10 ದಿನ ಕಾಯಬೇಕಾಗುತ್ತದೆ. ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ. ಹೋಲ್ ಸೆಲ್ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಹಕರಿಗೆ ನೇರ ಮಾರಾಟ ಮಾಡುವ ಯೋಜನೆಯೇ ಹೊರತು ಅಂಗಡಿಗಳಿಗೆ ಅಲ್ಲ.
ದಿನಕ್ಕೆ 3,000 ಕೆಜಿ ಈರುಳ್ಳಿಯನ್ನು ಮಾತ್ರ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಈರುಳ್ಳಿಗಳನ್ನು ತೇವ ರಹಿತ ಪ್ಯಾಕೇಟ್ ಗಳಲ್ಲಿ ಸಂಗ್ರಹಿಸಿಡಲಾಗಿದೆ. ಸರಕು ಸಾಗಾಣಿಕೆಯ ಗುಣಮಟ್ಟ ಕೂಡಾ ಮುಖ್ಯ ಒಂದು ಆಫರ್ ನಲ್ಲಿ ಗ್ರಾಹಕರ ಮನ ಗೆದ್ದು ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದೇವೆ. ಬ್ಲೂ ಡಾರ್ಟ್ ಸಂಸ್ಥೆಗೆ ಸರಕು ಸಾಗಾಣಿಕೆ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ನಿಮ್ಮ ಈರುಳ್ಳಿ ನಿಮಗೆ ಸುರಕ್ಷಿತವಾಗಿ ತಲುಪುತ್ತದೆ ಎಂದು ಸಿಇಒ ಅಂಕುರ್ ಭರವಸೆ ನೀಡಿದ್ದಾರೆ.
ಗ್ರೂಪಾನ್ ವೆಬ್ ತಾಣದಲ್ಲಿ ನೋಂದಾಯಿತ ಗ್ರಾಹಕರು ಮಾತ್ರ ಈರುಳ್ಳಿ ಬುಕ್ಕಿಂಗ್ ಮಾಡಬಹುದಾಗಿದೆ. ಪ್ರತಿ ಗ್ರಾಹಕರಿಗೆ ಒಮ್ಮೆ ಮಾತ್ರ ಡೀಲ್ ಮಾಡಲು ಸಾಧ್ಯ. ಕಡಿಮೆ ದರದಲ್ಲಿ ಈರುಳ್ಳಿ ಪಡೆಯಲು ಏನಿಲ್ಲವೆಂದರೂ 20,000ಕ್ಕೂ ಅಧಿಕ ಜನ ವೆಬ್ ಸೈಟ್ ಗೆ ಮುಗಿ ಬೀಳುತ್ತಾರೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಇದು ಹೋಲ್ ಸೆಲ್ ಅಥವಾ ಕನಸಿನ ಈರುಳ್ಳಿ ಕಥೆಯಾದರೆ ರೀಟೆಲ್ ಕ್ಷೇತ್ರದಲ್ಲಿ ಈರುಳ್ಳಿ ಬೆಲೆ 1 ಕೆಜಿge 80 ರು ದಾಟಿದೆ. ಕಳೆದ ಒಂದೂವರೆ ತಿಂಗಳಿನಿಂದ ಈರುಳ್ಳಿ ಬೆಲೆ ಏರುತ್ತಲೇ ಇದೆ.
ಸುಮಾರು 48 ದೇಶಗಳಲ್ಲಿ ಫ್ರಾಂಚೈಸಿಗಳನ್ನು ಹೊಂದಿರುವ ಗ್ರೂಪಾನ್ ಗ್ಲೋಬಲ್ ಅಂಗ ಸಂಸ್ಥೆಯಾಗಿ ಗ್ರೂಪಾನ್ ಇಂಡಿಯಾ ಕಾರ್ಯ ನಿರ್ವಹಿಸುತ್ತಿದೆ. ಜಾಗತಿಕವಾಗಿ ಗ್ರೂಪಾನ್ ಸುಮಾರು 200 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, 5 ಬಿಲಿಯನ್ ಡಾಲರ್ ಗೂ ಅಧಿಕ ವಾರ್ಷಿಕ ಮಾರಾಟ ದಾಖಲೆ ಹೊಂದಿದೆ. (ಪಿಟಿಐ)












Click it and Unblock the Notifications