ಅಮೆರಿಕದಲ್ಲಿ 'ಹಿಂದೂ ಬೃಹತ್ ವಿಶ್ವಕೋಶ' ಲೋಕಾರ್ಪಣೆ
ವಾಷಿಂಗ್ಟನ್, ಆ.25: ಒಂದು ಸಾವಿರಕ್ಕೂ ಹೆಚ್ಚು ದಾರ್ಶನಿಕರು ಕಳೆದ 25 ವರ್ಷಗಳಿಂದ ಆಳವಾದ ಅಧ್ಯಯನ ನಡೆಸಿ ಶ್ರಮವಹಿಸಿ ಹೊರ ತಂದಿರುವ ಹಿಂದೂ ಧರ್ಮದ ಬೃಹತ್ ವಿಶ್ವಕೋಶ ಸೋಮವಾರ ಲೋಕಾರ್ಪಣೆಗೊಳ್ಳುತ್ತಿದೆ.
ಭಾರತೀಯ ಅಧ್ಯಯನದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ ಎಂದೇ ಭಾವಿಸಲಾಗಿರುವ ಈ ವಿಶ್ವಕೋಶ 11 ಸಂಪುಟಗಳನ್ನು ಒಳಗೊಂಡಿದೆ. ಹಿಂದೂ ನಾಗರೀಕತೆ ಇತಿಹಾಸ, ಭಾಷೆ, ತತ್ವಜ್ಞಾನ, ಕಲೆ, ಸಂಗೀತ, ನೃತ್ಯ, ಔಷಧಿ, ಆಧ್ಯಾತ್ಮಿಕತೆ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಮಹಿಳೆಯರ ಪಾತ್ರ ಕುರಿತಂತೆ ಸಾವಿರಕ್ಕೂ ಹೆಚ್ಚು ದಾರ್ಶನಿಕರ 7000ಕ್ಕೂ ಹೆಚ್ಚು ಪ್ರಬಂಧಗಳನ್ನು ಈ ವಿಶ್ವಕೋಶ ಹೊಂದಿದೆ.
ಇದರೊಂದಿಗೆ ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿ ಉಳಿದು ಬೆಳೆದುಕೊಂಡಿರುವ ಬಗೆಗಿನ ಒಂದು ಸಾವಿರಕ್ಕೂ ರೇಖಾ ಚಿತ್ರಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವದಲ್ಲೇ ಮೂರನೆ ಬೃಹತ್ ಧರ್ಮ ಎಂಬ ಖ್ಯಾತಿಗೆ ಒಳಗಾಗಿರುವ ಹಿಂದೂ ಸಂಸ್ಕೃತಿ ಕುರಿತ ಈ ಮಹಾನ್ ಗ್ರಂಥ ನಾಳೆ ಅಮೆರಿಕದ ಸೌತ್ ಕರೋಲಿನಾ ವಿಶ್ವವಿದ್ಯಾಲಯದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಕೆ.ಪಚೌರಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಸ್ವಾಮಿ ಚಿದಾನಂದ ಸರಸ್ವತಿ, ಡಾ.ಮೀರಾ ನರಸಿಂಹನ್ ಮತ್ತಿತರರು ಹಾಜರಿರಲಿದ್ದಾರೆ.
ಇಂಡಿಯಾ ಹೆರಿಟೇಜ್ ರಿಸರ್ಚ್ ಫೌಂಡೇಶನ್ ಸಂಕಲನದೊಂದಿಗೆ ಹೊರ ಬರುತ್ತಿರುವ ಈ ವಿಶ್ವಕೋಶವನ್ನು ಮಂಡಲಾ ಪಬ್ಲಿಕೇಷನ್ ಹೊರ ತರುತ್ತಿದೆ. ಸೋಮವಾರ ದಿನಪೂರ್ತಿ ನಡೆಯುವ ಸಮಾರಂಭದಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ಅಂತರ್ ಸರ್ಕಾರಿ ನಿಯೋಗದ ಮುಖ್ಯಸ್ಥರಾಗಿರುವ ನೊಬೆಲ್ ಶಾಂತಿ ಪಾರಿತೋಷಕ ವಿಜೇತ ರಾಜೇಂದ್ರ ಕೆ ಪಚೌರಿ ಅವರು ಉಪನ್ಯಾಸ ನೀಡಲಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹಿಂದೂ ಸಂಸ್ಕೃತಿ, ಆಧಾತ್ಮ ವಿಷಯದ ಬಗ್ಗೆ ನಿಖರವಾಗಿ ಅಧ್ಯಯನ ನಡೆಸಲು ಬಯಸುವವರಿಗೆ ಈ ವಿಶ್ವಕೋಶ ಆಕರ ಗ್ರಂಥವಾಗಲಿದೆ. ಸಾವಿರಾರು ವರ್ಣ ಚಿತ್ರಗಳು, ಉದಾಹರಣೆಗಳೊಂದಿಗೆ ಹೊರ ಬಂದಿರುವ ವಿಶ್ವಕೋಶ ಸಾಮಾನ್ಯ ಓದುಗರ ಕುತೂಹಲವನ್ನು ತಣಿಸಲಿದೆ ಎಂದು ಯುಎಸ್ ಸಿ ಸ್ಕೂಲ್ ಆಫ್ ಮೆಡಿಸನ್ ನಲ್ಲಿ ಉಪ ಡೀನ್ನರ ಮನಃಶಾಸ್ತ್ರಜ್ಞ ವಿಭಾಗದ ಮುಖ್ಯಸ್ಥೆ ಆಗಿರುವ ಪ್ರೊ. ಮೀರಾ ನರಸಿಂಹನ್ ಹೇಳಿದ್ದಾರೆ.
ಮೊದಲ ಪ್ರಕಟಣೆಯಲ್ಲಿ 3000 ಕಾಪಿಗಳನ್ನು ಹೊರ ಬಿಡಲಾಗುತ್ತಿದೆ. ಸುಮಾರು 7000 ಪುಟಗಳನ್ನು ವಿಶ್ವಕೋಶ ಹೊಂದಿದೆ ಎಂದು ಪ್ರೊ ಹಾಲ್ ಫ್ರೆಂಚ್ ಹೇಳಿದ್ದಾರೆ.
ಹಿಂದೂ ಧರ್ಮ ವಿಶ್ವದಲ್ಲಿ ಮೂರನೇ ಅತಿದೊಡ್ಡ ಧರ್ಮವಾಗಿದೆ. ಕ್ರಿಶ್ಚಿಯನ್ಸ್ 2.2 ಬಿಲಿಯನ್, ಮುಸ್ಲಿಂ 1.6 ಬಿಲಿಯನ್ ಇದ್ದರೆ ಹಿಂದೂಗಳು 1 ಬಿಲಿಯನ್ ನಷ್ಟಿದ್ದಾರೆ ಎಂದು Pew ಸಂಶೋಧನಾ ಕೇಂದ್ರ ಇತ್ತೀಚೆಗೆ ವರದಿ ಮಾಡಿದೆ. (ಪಿಟಿಐ)













Click it and Unblock the Notifications