ಭಾರತ ಕಂಪ್ಯೂಟರ್,ಕಾಂಗ್ರೆಸ್ ಅದರ ಡಿಫಾಲ್ಟ್ ಪ್ರೋಗ್ರಾಂ
ನವದೆಹಲಿ, ಆ 23: ಒಂದು ವೇಳೆ ಭಾರತ ಕಂಪ್ಯೂಟರ್ ಆದರೆ, ಕಾಂಗ್ರೆಸ್ ಡಿಫಾಲ್ಟ್ ಪ್ರೋಗ್ರಾಂ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಸೋಶಿಯಲ್ ಮೀಡಿಯಾ ಸಂಬಂಧ ನಡೆದ ಕಾರ್ಯಾಗಾರದಲ್ಲಿ ರಾಹುಲ್ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
ಯುವ ಕಾಂಗ್ರೆಸ್ ಘಟಕ ಮತ್ತು NSUI ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ದೇಶ ಪ್ರಚೋದನಾಕಾರಿ ಹೇಳಿಕೆ ಮತ್ತು ಮನೋಭಾವವನ್ನು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ರಾಹುಲ್, ನೀವು ಬಳಸುವ ಭಾಷೆಯಲ್ಲಿ ತೂಕವಿರಲಿ, ಸತ್ಯಾಂಶವನ್ನು ಜನರಿಗೆ ಮನದಟ್ಟು ಮಾಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಭಾರತ ಕಂಪ್ಯೂಟರ್, ಕಾಂಗ್ರೆಸ್ ಅದರ ಡಿಫಾಲ್ಟ್ ಪ್ರೋಗ್ರಾಂ. ನೈಸರ್ಗಿಕ ಆಸ್ತಿಯಂತೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಬೇರೂರಿದೆ. ಇಲ್ಲಿ ಶಾಂತಿ ಮತ್ತು ಸೌಜನ್ಯತೆ ಮುಖ್ಯ. ಜನರನ್ನು ತಪ್ಪು ದಾರಿಗೆ ಎಳೆಯುವ ಹೇಳಿಕೆಗಳು ಭಾರತದಲ್ಲಿ ನಡೆಯುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಸುಮಾರು ಇಪ್ಪತ್ತು ನಿಮಿಷದ ಭಾಷಣದಲ್ಲಿ ವಿರೋಧ ಪಕ್ಷದ ನಾಯಕರ ಟೀಕೆಗೆ ಸುಮ್ಮನಿರ ಬೇಡಿ. ಬದಲಾಗಿ ದಾಖಲೆ ಸಮೇತ ಅವರ ಬಾಯಿಯನ್ನು ಮುಚ್ಚಿಸುವ ಪ್ರಯತ್ನ ಮಾಡಿ ಎಂದು ರಾಹುಲ್ ಗಾಂಧಿ ಪಕ್ಷದ ಯುವ ಕಾರ್ಯಕರ್ತರಿಗೆ ಕಿವಿಮಾತನ್ನು ಹೇಳಿದ್ದಾರೆ.
ಕಾರ್ಯಾಗಾರದಲ್ಲಿ ಪಕ್ಷದ ಸಂಪರ್ಕ ವಿಭಾಗದ ಮುಖ್ಯಸ್ಥ ಅಜಯ್ ಮೇಕನ್ ಹಾಜರಿದ್ದರು.












Click it and Unblock the Notifications