ಅಮರನಾಥ ಗುಹೆಯಲ್ಲಿ ಶಿವನ ಲಿಂಗ ಕರಗಿ ಹೋಗಿದೆ
ಜಮ್ಮು, ಜುಲೈ 15: ಪುರಾಣ ಪ್ರಸಿದ್ಧ ಅಮರನಾಥ ಗುಹೆಯಲ್ಲಿನ ಶಿವನ ಬೃಹತ್ ಲಿಂಗ ಬಹುತೇಕ ಕರಗಿ ಹೋಗಿದೆ. ಅಮರನಾಥ ಯಾತ್ರೆ ಕೊನೆಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿಯಿರುವಾಗ, ನಿಸರ್ಗ ಸಹಜವಾಗಿ ರೂಪಿತವಾಗುವ ಹಿಮಲಿಂಗದ ದರ್ಶನಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇನ್ನೂ ಅಮರನಾಥ ಕ್ಷೇತ್ರದತ್ತ ಧಾವಿಸಿ ಬರುತ್ತಿರುವಾಗಲೇ ಮಂಜಿನ ಶಿವ ಲಿಂಗ ಕರಗಿ ಹೋಗಿದೆ.
ಇದರಿಂದ ಭಕ್ತರು ತೀವ್ರ ನಿರಾಶೆಗೊಳಗಾಗಿದ್ದಾರೆ. ವಾಸ್ತವವಾಗಿ ಯಾತ್ರೆ ಆರಂಭಕ್ಕೂ ಮುನ್ನವೇ (ಜೂನ್ 28) ಲಿಂಗ ಕರಗುತ್ತಿತ್ತು. ಆದರೆ ಕಳೆದ 15 ದಿನಗಳಲ್ಲಿ ತಾಪಮಾನ ಏರಿಕೆಯಾಗಿ ಲಿಂಗ ಸಂಪೂರ್ಣವಾಗಿ ಕರಗುತ್ತಿದೆ. ಶ್ರೀನಗರದ ಹವಾಮಾನ ಇಲಾಖೆ ವರದಿಯ ಪ್ರಕಾರ ಲವಲೇಶವೂ ಇಲ್ಲದಂತೆ ಶಿವನ ಲಿಂಗ ಪೂರ್ತಿ ಕರಗಿಹೋಗಲಿದೆ ಎಂದು ತಿಳಿದುಬಂದಿದೆ.

ಅಮರನಾಥ ಗುಹೆಯಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು, ಭದ್ರತೆಗಾಗಿ ನಿಯೋಜಿತರಾದ ಯೋಧರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಅಂತಿಮವಾಗಿ ಆದರೆ ಬಹು ಮುಖ್ಯವಾಗಿ ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಅವಧಿಗೆ ಮುನ್ನ ಶಿವನ ಲಿಂಗ ಕರಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಅಂದಹಾಗೆ ಈ ಬಾರಿ ಮಂಜಿನ ರೂಪಿ ಶಿವಲಿಂಗ 8 ಅಡಿ ಎತ್ತರದಲ್ಲಿ ಕಂಗೊಳಿಸಿತ್ತು. ಪ್ರತಿ ವರ್ಷವೂ ಅಮರನಾಥ ಯಾತ್ರೆ ಆಗಸ್ಟ್ 21ಕ್ಕೆ ಮುಕ್ತಾಯಗೊಳ್ಳುತ್ತದೆ. ಇದುವರೆಗೂ ಪ್ರಸಕ್ತ ಋತುವಿನಲ್ಲಿ 2 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಶಿವಲಿಂಗ ದರ್ಶನ ಪಡೆದಿದ್ದಾರೆ ಎಂದು Shri Amarnath Shrine Board ಧರ್ಮದರ್ಶಿಗಳು ತಿಳಿಸಿದ್ದಾರೆ.
ಆದರೆ ಹಿಮಾಲಯದ ದಕ್ಷಿಣ ಕಾಶ್ಮೀರದ ಭಾಗದಲ್ಲಿ 3880 ಮೀಟರ್ ಎತ್ತರದ ಗುಹಾಂತರ ದೇಗುಲದಲ್ಲಿ ಈಗ ಲಿಂಗ ಕರಗಿ ಮಾಯವಾಗಿರುವುದರಿಂದ ಅಮರನಾಥ ಕ್ಷೇತ್ರದತ್ತ ಮುಖ ಮಾಡಿರುವ ಭಕ್ತರು ತಮ್ಮ ಯಾತ್ರೆಯನ್ನು ಮೊಟಕುಗೊಳಸಿ ವಾಪಸಾಗುತ್ತಾರಾ ಅಥವಾ ಗುಹೆಯವರೆಗೂ ಸಾಗಿ, ಖಾಲಿ ಸ್ಥಳಕ್ಕೆ ಕೈಮುಗಿದು ಬರುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications