ಸಿಎಂ ಸಿದ್ದು ಅಕ್ಕಿ ಯೋಜನೆ ಚಿತ್ರಾನ್ನ; ಹಾಲೂ ಹುಳಿ!

ಏನಪ್ಪಾ ಅಂದರೆ ಮುಂದಿನ ಸೋಮವಾರದಿಂದ (ಜುಲೈ 1) ಶಾಲಾ ಮಕ್ಕಳಿಗೆ ಕುಡಿಯಲು ಹಾಲು ನೀಡುವುದಾಗಿ ಸಿಎಂ ಸಿದ್ದು ಜನಪ್ರಿಯ ಯೋಜನೆ ಘೋಷಿಸಿದ್ದಾರೆ. ಆದರೆ ಹಾಲು ಯೋಜನೆ ಆಗಲೇ ಹುಳಿಯಾಗತೊಡಗಿದೆ. ಸಿದ್ದರಾಮಯ್ಯನವರ ಲೆವಿ ಗುಮ್ಮ ಕೇಳಿ ವ್ಯಾಪಾರಿಗಳು/ಗಿರಣಿ ಮಾಲೀಕರು ಬೆಚ್ಚಿಬಿದ್ದಿದ್ದಾರೆ.
ಸಾಧಕ-ಬಾಧಕಗಳನ್ನು ಆಲೋಚಿಸದೆ/ಸಮಾಲೋಚಿಸದೆ ಕುಳಿತಲ್ಲಿಂದಲೇ ದಿಢೀರನೆ ಅಗ್ಗದ ಯೋಜನೆ ಘೋಷಿಸುವ ಸಿಎಂ ಸಿದ್ದುಗೆ ಹಾಲು ವಿತರಣೆ ಎಷ್ಟು ಕಷ್ಟ ಎಂಬುದು ತಿಳಿದಂತಿಲ್ಲ. ಬೇಗನೇ ಹಾಳಾಗುವ ಹಾಲು ದಿನಾಲೂ ಬರೋಬ್ಬರಿ 65 ಲಕ್ಷ ಮಕ್ಕಳಿಗೆ ತಲುಪಬೇಕು. ಇದಕ್ಕೆ ತಕ್ಕ ಮೂಲಸೌಕರ್ಯ ಒದಗಿಸಿಕೊಂಡಿದ್ದಾರಾ? ಅಂದ್ರೆ ಉಹು> ಅದರ ಊಸಾಬರಿಗೆ ಹೋಗಿಲ್ಲ.
ಸಿಎಂ ಸಾಹೇಬ್ರು ಹೇಳಿದ್ದಾರೆ, ಹಾಲು ವಿತರಣೆಯಾಗಬೇಕು ಅಷ್ಟೇ! ಹಾಲಿನ ಉತ್ಪಾದನೆಯೇನೂ ಹೆಚ್ಚಾಗಿದೆ. ಹಾಲು ಹೇರಳ ಪ್ರಮಾಣದಲ್ಲಿ ಲಭ್ಯವಿದೆ. ಆದರೆ ಉಳಿದ ಪರಿಕರಗಳು? ಹಾಲಿನ ತಾಜಾತನ ಕಾಯ್ದುಕೊಳ್ಳುವುದು ಹೇಗೆ? ಪ್ರತಿ ದಿನವೂ ಟೆಟ್ರಾ ಪ್ಯಾಕುಗಳಲ್ಲಿ ಒದಗಿಸಲಾಗುವುದೇ? ಮಕ್ಕಳಿಗೆ ವಿತರಣೆ ಮಾಡುವುದು ಹೇಗೆ?
ಹಾಲು ನಿಂತುಹೋಗಿ; ಹಾಲಿನ ಪುಡಿ ವಿತರಣೆ?: ರಾಜ್ಯಾದ್ಯಂತ 59 ಸಾವಿರ ಶಾಲೆಗಳಲ್ಲಿ ಓದುತ್ತಿರುವ 65 ಲಕ್ಷ ಮಕ್ಕಳಿಗೆ ಹಾಲು ತಲುಪಿಸಬೇಕು. ಅದು ದುಸ್ಸಾಧ್ಯದ ಮಾತು. ಹಾಗಾಗಿ ಹಾಲಿನ ಬದಲು ಹಾಲಿನ ಪುಡಿ ವಿಯತರಿಸಿದರೆ ಹೇಗೆ? ಎಂಬ ಆಲೋಚನೆ ಈಗ ಸುಳಿದಾಡುತ್ತಿದೆ.
ದಿನಂಪ್ರತಿ 20 ಲಕ್ಷ ಲೀಟರ್ ಹಾಲು ಹೆಚ್ಚಳವಾಗಿ ನಾಡಿನಲ್ಲಿ ಲಭ್ಯವಾಗುತ್ತಿದೆ. ನಮ್ಮದೇ ಶಾಲಾ ಮಕ್ಕಳಿಗೆ ಈ ಹಾಲು ವಿತರಣೆ ಮಾಡುವುದು ಉಚಿತ ಆಲೋಚನೆಯೇ. ಆದರೆ ಅದನ್ನು ಸಾಧ್ಯವಾಗಿಸುವುದಾದರೂ ಹೇಗೆ? ಎಂಬುದೇ ಬೃಹತ್ ಪ್ರಶ್ನೆಯಾಗಿದೆ.


Click it and Unblock the Notifications
