ಕಾವೇರಿ ವಿವಾದದ ಕಡತಗಳನ್ನು ಓದಿ : ಗೌಡರು

ಮಂಡ್ಯದಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆ ನಡೆಸಿದ ಗೌಡರು, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರು ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದಕ್ಕಿಸಲು ಸಕಲ ಪ್ರಯತ್ನಗಳನ್ನು ಮಾಡಿದ್ದೇನೆ. ಸರ್ಕಾರಿ ಕಡತದಲ್ಲಿ ಅವುಗಳು ದಾಖಲಾಗಿವೆ. ನನ್ನನ್ನು ಟೀಕಿಸುವ ಮಹಾನ್ ನಾಯಕರು ಆ ಕಡತಗಳನ್ನು ಒಮ್ಮೆ ಪರಿಶೀಲಿಸಲಿ ಎಂದು ಅವರು ಸವಾಲೆಸೆದರು.
ಕರುಣಾನಿಧಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕಕ್ಕೆ ಆಹ್ವಾನಿಸಿ ಗಗನಚುಕ್ಕಿ ಮತ್ತು ಭರಚುಕ್ಕಿ ನಡುವೆ ಅಣೆಕಟ್ಟೆಯೊಂದನ್ನು ನಿರ್ಮಿಸುವ ಕುರಿತು ಚರ್ಚೆ ನಡೆಸಿದ್ದೆ.
ತಮಿಳುನಾಡಿಗೆ ಅಗತ್ಯವಿದ್ದಾಗ ಡ್ಯಾಂನಿಂದ ನೀರು ಬಳಸಿಕೊಳ್ಳಲು ಹಾಗೂ ಉಳಿದ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಮಾತುಕತೆಗಳು ನಡೆದಿದ್ದವು ಎಂದರು. ಇದಕ್ಕೆ ಕರುಣಾನಿಧಿ ಸಹ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಆದರೆ, ನಂತರ ಯೋಜನೆ ಜಾರಿಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೋಜಿಗಾಗಿ ಮಾಡಿಲ್ಲ : ಕಾವೇರಿ ನದಿಯ ಕುರಿತು ಸಾಕ್ಷ್ಯಚಿತ್ರ ಚಿತ್ರೀಕರಣ ಮಾಡಿರುವುದು ಮೋಜಿಗಾಗಿ ಅಲ್ಲ. ಈ ಸಾಕ್ಷ್ಯಚಿತ್ರವನ್ನು ಎಲ್ಲಾ ಪಕ್ಷದ ರಾಜಕಾರಣಿಗಳು ವೀಕ್ಷಿಸಬೇಕು. ಕಾವೇರಿ ನೀರಿನ ಸಮಸ್ಯೆ ಏನೆಂದು ತಿಳಿಯದವರು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಕಾವೇರಿ ಐತೀರ್ಪು ಅಧಿಸೂಚನೆಯಾಗಿ ಹೊರಬಿದ್ದಾಗ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನನಗೆ ಹುಟ್ಟು ಹಬ್ಬದ ಉಡುಗೊರೆ ಸಿಕ್ಕಿತು ಎಂದು ಸಂಭ್ರಮಿಸಿದರು. ಆದರೆ, ಕರ್ನಾಟಕ ಯಾವ ರಾಷ್ಟ್ರೀಯ ಪಕ್ಷಗಳು ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಭಟಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಕಾವೇರಿ ರಾಜ್ಯದ ಆಸ್ತಿ. ಅದನ್ನು ಹೋರಾಟದ ಮೂಲಕವೇ ಉಳಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳಿಂದ ರಾಜ್ಯಕ್ಕೆ ನ್ಯಾಯ ದೊರಕಲು ಸಾಧ್ಯವಿಲ್ಲ. ಆದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಶಕ್ತಿ ನೀಡುವಂತೆ ಅವರು ಮನವಿ ಮಾಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications