ಜಾಮೀನು ಪಡೆದ ವಿಶ್ವನಾಥನಿಗೆ ಧರ್ಮೇಂದ್ರ ಸಾಥ್

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆ ಮರೆತಿಲ್ಲ. ನನ್ನ ಮತದಾರರು ಎಂದಿಗೂ ನನ್ನ ಕೈಬಿಡಲ್ಲ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು. ನಕಲಿ ದಾಖಲೆ ಸೃಷ್ಟಿಸಿ ಜಮೀನು ಪರಭಾರೆ ಮಾಡಿರುವ ಆರೋಪ ಸುಳ್ಳು ಎಂದು ವಿಶ್ವನಾಥ್ ಹೇಳಿದರು.
ವಿಶ್ವನಾಥ್ ಜೊತೆಗೆ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್ ಅವರು ಮತ ಕೇಳಿದರು. ಕ್ಷೇತ್ರದ ಗ್ರಾಮೀಣ ಭಾಗವಾದ ಪುಟ್ಟೇನಹಳ್ಳಿ, ಹಾರೋಹಳ್ಳಿ, ಸೊಂಡೆಕೊಪ್ಪ, ಮಾದನಾಯಕನಹಳ್ಳಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಲಾಯಿತು.
ವಿಶ್ವನಾಥ್ ಕೇಸ್ : ಬೆಂಗಳೂರು ಸಮೀಪದ ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಮಾರಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿಗೆ ಅರ್ಜಿ ವಜಾಗೊಂಡಿತ್ತು.
ಬೆಂಗಳೂರಿನ ಯಲಹಂಕ ಬಳಿಯ ಮಾದಪ್ಪನ ಹಳ್ಳಿಯ ಸರ್ವೇ ನಂಬರ್ 62 ರಲ್ಲಿನ 32.04 ಎಕರೆ ಸರ್ಕಾರಿ ಭೂಮಿಯನ್ನು ಡಿಸಿ ಅಯ್ಯಪ್ಪ ಅವರು ಸ್ಥಳೀಯ ಶಾಸಕ ವಿಶ್ವನಾಥ್ ಅವರ ಸಂಬಂಧಿ ನರಸಿಂಹಯ್ಯ ಅವರಿಗೆ ಪರಭಾರೆ ಮಾಡಿಕೊಡಲು ಯತ್ನಿಸಿದ್ದರು.
ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಕೆ ಅಯ್ಯಪ್ಪ, ಕಂದಾಯ ನೋಂದಣಾಧಿಕಾರಿ ರವಿಕುಮಾರ್, ವಿಶೇಷ ತಹಶೀಲ್ದಾರ್ ಗೋಪಾಲಸ್ವಾಮಿ ಮತ್ತು ಕಂದಾಯ ಇಲಾಖೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ಬಂಧಿಸಿದ್ದರು.
ವಿಶ್ವನಾಥ್ ಸುಮಾರು 40 ಕೋಟಿ ರು. ಆಸ್ತಿವಂತರಾಗಿದ್ದಾರೆ. ಇನ್ನು, ಪತ್ನಿಯ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಮತ್ತಿತರ ಆಸ್ತಿ ಮಾಡಿದ್ದಾರೆ. ಬೇನಾಮಿಯಾಗಿ ವಿದೇಶಿ ಕಾರು ಹೊಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ವರದಿ ಹೇಳುತ್ತದೆ.












Click it and Unblock the Notifications