ಕಬ್ಬಿಣದ ಸರಳು ಎಣಿಸುತ್ತಾ 31 ಡಿಗ್ರಿ ಸಂಪಾದಿಸಿದ ವೈದ್ಯ

ಹೌದು, ಸಾಮಾನ್ಯವಾಗಿ ಜೈಲು ಶಿಕ್ಷೆಗೀಡಾದರೆ ಕಬ್ಬಿಣದ ಸರಳುಗಳು ಎಣಿಸುವುದಕ್ಕೆ ಹೋಗಿದ್ದಾನೆ ಎಂಬ ಮಾತು ಕೇಳಿಬರುತ್ತದೆ. ಆದರೆ ಈ ವ್ಯಕ್ತಿ ಕಬ್ಬಿಣದ ಸರಳುಗಳನ್ನು ಎಣಿಸುತ್ತಾ ತನ್ನ ಬಾಳನ್ನು ವ್ಯರ್ಥ ಮಾಡಿಕೊಳ್ಳದೆ 'ಸರಳಿಗೊಂದು ಡಿಗ್ರಿ ಎಂಬ ಸರಳ ಸೂತ್ರ' ಅಳವಡಿಸಿಕೊಂಡು ಜೈಲಿನಲ್ಲಿದ್ದಾಗ ಬರೋಬರೀ 31 ಪದವಿಗಳನ್ನು ಅರ್ಹವಾಗಿ ಗಳಿಸಿದ್ದಾರೆ.
ಆತ ವೈದ್ಯ ಮಹಾಶಯ. ಪೊಲೀಸರು ಯಾವುದೋ ನೆಪವೊಡ್ಡಿ ಆತನನ್ನು ಜೈಲಿಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆ ವೈದ್ಯ ಶಿಕ್ಷೆ ಅನುಭವಿಸುತ್ತಲೇ ಸುಶಿಕ್ಷಿತನಾಗಿ ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ ಈ ಕಥಾನಕದ ನಾಯಕನ ಹೆಸರು ಭಾನು ಪಟೇಲ್. ವಯಸ್ಸು 57.
ಇವರ ಮೇಲಿದ್ದ ಗುರುತರ ಆರೋಪವೆಂದರೆ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆ. ಹಾಗಾಗಿ 2005ರ ಜನವರಿಯಿಂದ 2011ರ ಡಿಸೆಂಬರ್‌ವರೆಗೆ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಗಮನಾರ್ಹವೆಂದರೆ ಶ್ರೀಮಂತ ವರ್ಗಕ್ಕೆ ಸೀಮಿತವಾದ ಈ FERA ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ಬಹುತೇಕ ಮಂದಿ ಕಾನೂನಿಗೆ ಮಣ್ಣೆರಚಿ, ಶಿಕ್ಷೆಯಿಂದ ಪಾರಾಗುವುದೇ ಹೆಚ್ಚು. ಆದರೂ ಈ ಒಬ್ಬ ಭಾನುಪಟೇಲ್ ಶಿಕ್ಷೆ ಅನುಭವಿಸುತ್ತಾ ...Unique World Records and Asia Book of Records ಹಾಗೂ Limca Book of Recordsಗೆ ದಾಖಲಾಗುವಷ್ಟು ಸಾಧನೆ ಮಾಡಿದ್ದಾರೆ.
ವೃತ್ತಿಯಿಂದ ವೈದ್ಯರಾಗಿರುವ ಭಾನು ಪಟೇಲ್ ಜೈಲಿನಲ್ಲಿ ಕೈದಿಯಾಗಿದ್ದುಕೊಂಡು 31 ಪದವಿಗಳನ್ನು ಪಡೆದಿದ್ದಾರೆ. ಜೈಲುಶಿಕ್ಷೆ ಅವಧಿಯಲ್ಲಿ ಹೀಗೆ ಭಾರಿ ಪ್ರಮಾಣದಲ್ಲಿ ಪದವಿಗಳನ್ನು ಗಳಿಸಿದ ಮೊದಲ ವ್ಯಕ್ತಿ ಎಂಬುದು ಇವರ ದಾಖಲೆಯಾಗಿದೆ.
ಸಬರಮತಿ ಸ್ಥಳ ಮಹಾತ್ಮೆ:
ಸಬರಮತಿ ಜೈಲಿನಲ್ಲಿ ಶಿಕ್ಷೆ ಅನುಭವಿಸುವಾಗ ಅಧಿಕಾರಿಗಳು ತಮಗೆ ಜೈಲಿನಲ್ಲಿರುವ ಆಸ್ಪತ್ರೆ ಮತ್ತು ಗ್ರಂಥಾಲಯದಲ್ಲಿ ಕೆಲಸ ಮಾಡಲು ಅವಕಾಶ ನೀಡಿದರು. ಇಂಗ್ಲಿಷ್ ಭಾಷೆಯ ಮೇಲೆ ನನಗಿದ್ದ ಹಿಡಿತವನ್ನು ಗಮನಿಸಿದ ಅಧಿಕಾರಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮುಕ್ತ ವಿವಿಯಲ್ಲಿ (BAOU) ವಿವಿಧ ಪದವಿಗಳನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸಿದರು. ಹೀಗಾಗಿ 6 ವರ್ಷದ ಜೈಲು ಶಿಕ್ಷೆಯ ಅವಧಿಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಕೋರ್ಸ್ ಸೇರಿದಂತೆ ಎಂಎಸ್ಸಿ, ಎಂಕಾಂ ಪದವಿ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಭಾನು ಪಟೇಲ್.












Click it and Unblock the Notifications