ತಿಮ್ಮಪ್ಪನಿಗೆ ಚಿನ್ನದ ಬಿಸ್ಕತ್ತು ಅರ್ಪಿಸಿದ ಮಲ್ಯ

ಸದಾ ಕಾಲ ರಂಗು ರಂಗಿನ ಪಾರ್ಟಿ ಮೂಲಕ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಮಲ್ಯ ಅವರು ಈಗ ದೇವರ ಮೊರೆ ಹೊಕ್ಕಿದ್ದಾರೆ. ತಿರುಪತಿಯಲ್ಲಿ ದೇವರ ಸನ್ನಿಧಿಯಲ್ಲಿದ್ದೇನೆ ನನ್ನ ಹುಟ್ಟುಹಬ್ಬಕ್ಕೆ ಹಾರೈಸಿದವರಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
Vijay Mallya @TheVijayMallya : I am overwhelmed n humbled by ur birthday greetings n good wishes.Thank u from d bottom of my heart.Am in Tirupati.May Balaji bless us all
ವಿಜಯ್ ಮಲ್ಯ ಹುಟ್ಟುಹಬ್ಬದ ಅಂಗವಾಗಿ ತಿರುಪತಿ ವೆಂಕಟೇಶ್ವರ ಸ್ವಾಮಿಜಿಗೆ ಸುಮಾರು 3 ಕೆಜಿ ತೂಗುವ ಚಿನ್ನದ ಬಿಸ್ಕತ್ತುಗಳನ್ನು ಅರ್ಪಿಸಿದ್ದಾರೆ ಎಂಬ ಸುದ್ದಿಯಿದೆ. ಎಷ್ಟು ಬಿಸ್ಕತ್ತು ನೀಡಿದರು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ.
ನಂತರ ವಿಜಯ್ ಮಲ್ಯ ಹಾಗೂ ಅವರ ಪತ್ನಿ ರೇಖಾ ಮಲ್ಯ ಅವರನ್ನು ಸಾಂಪ್ರದಾಯಿಕವಾಗಿ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಸತ್ಕರಿಸಿದೆ. ದೇವರ ಪ್ರಸಾದ ಸ್ವೀಕರಿಸಿದ ಮಲ್ಯ ಅವರ ಜೊತೆಗೆ ಟಿಟಿಡಿ ಮಾಜಿ ಟ್ರಸ್ಟಿ ಆದಿಕೇಶವಲು ಅವರು ಕಾಣಿಸಿಕೊಂಡಿದ್ದು ವಿಶೇಷ.
ಮಲ್ಯ ಅವರು ಯಾವುದೇ ಮಾಧ್ಯಮದವರ ಜೊತೆಗೆ ಮಾತನಾಡಲು ಇಚ್ಛಿಸಿಲ್ಲ ಎಂದು ತಿಳಿದು ಬಂದಿದೆ. ಈ ಹಿಂದೆ ಮಲ್ಯ ಅವರು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಸರಾಂತ ದೇಗುಲಕ್ಕೆ ಭೇಟಿ ನೀಡಿದ್ದರು. ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಎರಡೂವರೆ ಕೆಜಿ ಚಿನ್ನದಲ್ಲಿ ನಿರ್ಮಿಸಿದ ಚಿನ್ನದ ಬಾಗಿಲು ಅರ್ಪಿಸಿದ್ದರು.
ಸಂಕಟ ಬಂದಾಗ ವೆಂಕಟರಮಣ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಲ್ಯ ಅವರು ಪ್ರತಿ ವರ್ಷ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವುದು ಮಾಮೂಲಿಯಾದರೂ ಈ ವರ್ಷದ ಭೇಟಿ ಮಹತ್ವದ್ದಾಗಿದೆ.
ಆರ್ಥಿಕ ಸಂಕಷ್ಟದಿಂದ ತಿಮ್ಮಪ್ಪ ಪಾರು ಮಾಡುತ್ತಾನೆ ಎಂದು ಮಲ್ಯ ನಂಬಿದ್ದಾರೆ. ನಿನ್ನೆ ಇನ್ನೂ ಕಿಂಗ್ ಫಿಷರ್ ವಿಮಾನ ಹಾರಾಟಕ್ಕೆ 425 ಕೋಟಿ ಮತ್ತೆ ಹೂಡಿಕೆ ಮಾಡುವುದಾಗಿ ಹೂಡಿಕೆದಾರರಿಗೆ ಮಲ್ಯ ಭರವಸೆ ನೀಡಿದ್ದರು.
ಹಂತ ಹಂತವಾಗಿ ಕಿಂಗ್ ಫಿಷರ್ ವಿಮಾನಗಳು ಕಾರ್ಯಾರಂಭ ಮಾಡಲಿದೆ. ಯಾವುದೇ ಬ್ಯಾಂಕಿನ ನೆರವು ಪಡೆಯುತ್ತಿಲ್ಲ ಎಂದು ಮಲ್ಯ ಹೇಳಿದ್ದರು.
ಅಬುದಾಬಿ ವಿಮಾನಯಾನ ಕಂಪನಿಯ ಸಹಾಯ ಹಸ್ತ ಪಡೆದು ಸಂಭ್ರಮಿಸಿದ್ದ ಮಲ್ಯರಿಗೆ ಮತ್ತೆ ಹೊಡೆತ ಬಿದ್ದಿತ್ತು. ತೆರಿಗೆ ವಿಳಂಬವಾದ ಕಾರಣಕ್ಕೆ ಕಿಂಗ್ ಫಿಷರ್ ಸಂಸ್ಥೆಯ 7 ವಿಮಾನಗಳನ್ನು ಜಪ್ತಿ ಮಾಡಲಾಗಿತ್ತು.
ಸುಮಾರು 7,524 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಸುಮಾರು 8000 ಕೋಟಿ ರು ನಷ್ಟು ನಷ್ಟ ಅನುಭವಿಸಿದೆ. 17 ಬ್ಯಾಂಕ್ ಗಳಿಂದ ಸಾಲ ಪಡೆದಿದೆ. ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ.
ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ.
ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.












Click it and Unblock the Notifications