ಅಲ್ಪಸಂಖ್ಯಾತರ ವಿವಿಗೆ ಟಿಪ್ಪು ಹೆಸರು ಬೇಡ: ಚಿಮೂ
ಕೇಂದ್ರ ಅಲ್ಪಸಂಖ್ಯಾತರ ಇಲಾಖೆ ಸಚಿವ ರೆಹಮಾನ್ ಖಾನ್ ಅವರು ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರ ವಿವಿ ಆರಂಭಿಸಲಾಗುವುದು ಅದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲಾಗುವುದು ಎಂದು ನೀಡಿರುವ ಹೇಳಿಕೆಯನ್ನು ಚಿದಾನಂದ ಮೂರ್ತಿ ಅವರು ಮಂಗಳವಾರ(ನ.20) ಖಂಡಿಸಿದ್ದಾರೆ.
ಟಿಪ್ಪು ಕನ್ನಡ ವಿರೋಧಿ: ಅಲ್ಪಸಂಖ್ಯಾತರ ವಿವಿ ಸ್ವಾಗತಾರ್ಹ ಬೆಳವಣಿಗೆ. ಆದರೆ, ಅದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದನ್ನು ಸಹಿಸಲು ಸಾಧ್ಯವಿಲ್ಲ. ಆತ ಕ್ರೂರಿ, ಅನ್ಯಧರ್ಮ ದ್ವೇಷಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ವಿರೋಧಿಯಾಗಿದ್ದ ಎಂದು ಚಿದಾನಂದ ಮೂರ್ತಿ ಹೇಳಿದ್ದಾರೆ.
ಮೈಸೂರು ಮಹಾರಾಜರ ಕಾಲದಲ್ಲಿದ್ದ ಆಡಳಿತ ಭಾಷೆ ಕನ್ನಡವನ್ನು ಟಿಪ್ಪು ಸುಲ್ತಾನ್ ಬದಲಾವಣೆ ಮಾಡಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿದ.
ಆತನ ಕಾಲದ ಎಲ್ಲಾ ಅಧಿಕೃತ ಪತ್ರಗಳು, ಐತಿಹಾಸಿಕ ಶಾಸನಗಳಲ್ಲಿ ಕನ್ನಡ ಮಾಯವಾಗಿದೆ ಇದು ಆತನ ಕನ್ನಡ ವಿರೋಧಿತನ ತೋರಿಸುತ್ತದೆ. ಮೈಸೂರು ಮಹಾರಾಜರ ಕೈಯಿಂದ ಕಸಿದು ಕೊಂಡ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ ಮಾತ್ರಕ್ಕೆ ಆತ ಸ್ವಾತಂತ್ರ್ಶ ಹೋರಾಟಗಾರ ಎನಿಸುವುದಿಲ್ಲ. ಆತನದು ಸ್ವಾರ್ಥ ಹೋರಾಟ ಎಂದು ಚಿದಾನಂದ ಮೂರ್ತಿ ಹೇಳಿದ್ದಾರೆ.
ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಮಠ, ನಂಜನಗೂಡು ದೇಗುಲಗಳಿಗೆ ದಾನ ದತ್ತಿ ನೀಡಿರುವ ಹಿಂದೆ ರಾಜಕೀಯ ಉದ್ದೇಶವಿತ್ತು. ಹೀಗಾಗಿ ಆತನ ಹೆಸರು ವಿವಿಗೆ ಇಡಬಾರದು ಎಂದು ಚಿದಾನಂದ ಮೂರ್ತಿ ಆಗ್ರಹಿಸಿದ್ದಾರೆ.
ಟಿಪ್ಪು ಹೆಸರಿನ ಬದಲು ಅಬ್ದುಲ್ ಕಲಾಂ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವುದು ಸೂಕ್ತ ಎಂದು ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಟಿಪ್ಪು ಅವರನ್ನು ಹೊಗಳುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ. ಆತ ಕನ್ನಡಿಗರ ಪರ ಇರಲಿಲ್ಲ. ವ್ಯಾಪಾರಿ ಮನೋಭಾವದಿಂದ ಸಮಾಜ ಸುಧಾರಣೆ ಮುಂದಾಗಿದ್ದ ಅಷ್ಟೇ. ಆತನ ಸಚಿವ ಸಂಪುಟದಲ್ಲಿ ಒಬ್ಬ ಬ್ರಾಹ್ಮಣ ಇದ್ದ(ದಿವಾನ್ ಪೂರ್ಣಯ್ಯ) ಎಂದ ಮಾತ್ರಕ್ಕೆ ಆತ ಹಿಂದೂ ಪರ ಎಂದು ಹೇಳಲಾಗದು ಎಂದು ವಿಧಾನಪರಿಷತ್ ಸದಸ್ಯ ಗೋ ಮಧುಸೂಧನ್ ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.












Click it and Unblock the Notifications