ಕರ್ನಾಟಕ ವಿಧಾನಸಭೆಯೊಳಗೊಂದು ಇಣುಕು ನೋಟ
ಕರ್ನಾಟಕ ವಿಧಾನಸಭೆಯ ಅರವತ್ತರ ಹುಟ್ಟುಹಬ್ಬಕ್ಕಾಗಿ ವಿಧಾನಸೌಧ ಸಿಂಗಾರಗೊಳ್ಳುತ್ತಿದೆ. ವಜ್ರ ಮಹೋತ್ಸವಕ್ಕೆ ಅಣಿಯಾಗುತ್ತಿರುವ ವಿಧಾನಸಭೆಯ ಇಣುಕು ನೋಟ ಇಲ್ಲಿದೆ. ಸಭಾಧ್ಯಕ್ಷ ಸ್ಥಾನವನ್ನು ಯಾರ್ಯಾರು ಅಲಂಕರಿಸಿದ್ದಾರೆ, ಎಲ್ಲೆಲ್ಲಿ ವಿಧಾನಸಭೆ ಅಧಿವೇಶನಗಳು ನಡೆದಿವೆ, ಇತಿಹಾಸದ ಯಾವ ಪುಟಗಳಲ್ಲಿ ವಿಧಾನಸಭೆ ದಾಖಲಾಗಿದೆ... ಕೆಲ ಅಂಕಿಅಂಶಗಳು ನಿಮಗಾಗಿ.

* ಈ ವರೆಗೆ 13 ಬಾರಿ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆದಿವೆ. ಐದನೇ ವಿಧಾನಸಭೆಯ ಅವಧಿ ಗರಿಷ್ಠ ಅಂದರೆ 5 ವರ್ಷ 9 ತಿಂಗಳ ಅವಧಿಯದಾಗಿತ್ತು. ಅದು ಮಾರ್ಚ್ 24, 1972ರಿಂದ ಡಿಸೆಂಬರ್ 31, 1977ರ ವರೆಗೆ ಅಸ್ತಿತ್ವದಲ್ಲಿತ್ತು. ಏಳನೇ ವಿಧಾನಸಭೆಯು ಕನಿಷ್ಠ ಅವಧಿಗೆ ಅಂದರೆ ಕೇವಲ 1 ವರ್ಷ 6 ತಿಂಗಳ ಕಾಲ, ಅಂದರೆ ಜುಲೈ 24, 1983ರಿಂದ 2ನೇ ಜನವರಿ 1985ರ ವರೆಗೆ ಅಸ್ತಿತ್ವದಲ್ಲಿತ್ತು.
* ರಾಜ್ಯ ವಿಧಾನಸಭಾ ಅಧಿವೇಶನ ಒಂದು ವರ್ಷದಲ್ಲಿ ಅತಿಹೆಚ್ಚು ಅವಧಿ ಅಂದರೆ 98 ದಿನಗಳ ಕಾಲ ನಡೆದಿದೆ. ಇದು 1963ರಲ್ಲಿ ನಡೆದ ಅಧಿವೇಶನ. ಇದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ. ಅಂತೆಯೇ ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಕಡಿಮೆ ಎಂದರೆ ಕೇವಲ 17 ದಿನಗಳ ಕಾಲ 2008ರಲ್ಲಿ ನಡೆದಿದೆ. ಇದೂ ಒಂದು ದಾಖಲೆಯೇ.
* ಮೊದಲ ವಿಧಾನಸಭೆ ಅಧಿವೇಶನ ಜೂನ್ 18, 1952ರಂದು ಹಳೆಯ ಸಾರ್ವಜನಿಕ ಕಚೇರಿಗಳ ಕಟ್ಟಡ ಅಂದರೆ ಇಂದಿನ ಕರ್ನಾಟಕ ಉಚ್ಚ ನ್ಯಾಯಾಲಯ ಕಟ್ಟಡದಲ್ಲಿ ನಡೆಯಿತು. ವಿಧಾನಸೌಧದಲ್ಲಿ ಮೊದಲ ಬಾರಿಗೆ ವಿಧಾನಸಭೆ ಅಧಿವೇಶನ ನಡೆದಿದ್ದು, ಡಿಸೆಂಬರ್ 19, 1956.
* ರಾಜ್ಯ ವಿಧಾನಸಭಾ ಅಧಿವೇಶನ ಎರಡು ಬಾರಿ ಬೆಳಗಾವಿಯಲ್ಲಿ ನಡೆದಿದೆ. ಸೆಪ್ಟೆಂಬರ್ 25, 2006ರಿಂದ ಸೆಪ್ಟೆಂಬರ್ 29ರ 2006ರವರೆಗೆ ಮೊದಲ ಬಾರಿಗೆ ಬೆಳಗಾವಿ ಅಧಿವೇಶನ ನಡೆಯಿತು. ಎರಡನೇ ಬಾರಿ 2009ರಲ್ಲಿ ಜನವರಿ 16ರಿಂದ 24ರವರೆಗೆ ಎಂಟು ದಿನಗಳ ಅವಧಿಗೆ ನಡೆಯಿತು.
* ಸಭಾಧ್ಯಕ್ಷರಾದವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದವರು : ಎಸ್.ಆರ್. ಕಂಠಿ ಹಾಗೂ ಎಸ್.ಎಂ. ಕೃಷ್ಣ
* ರಾಜ್ಯ ವಿಧಾನ ಸಭೆಯ ಏಕೈಕ ಮಹಿಳಾ ಸಭಾಧ್ಯಕ್ಷೆ- ಕೆ.ಎಸ್. ನಾಗರತ್ನಮ್ಮ
* ಸಚಿವರ ಹುದ್ದೆ ಅಲಂಕರಿಸಿದ ಸ್ಪೀಕರ್‌ಗಳು:
1. ಎಸ್.ಆರ್. ಕಂಠಿ
2. ಬಿ.ವೈಕುಂಠ ಬಾಳಿಗಾ
3. ಕೆ.ಎಚ್. ರಂಗನಾಥ್
4. ಡಿ.ಬಿ. ಚಂದ್ರೇಗೌಡ
5. ಎಸ್.ಎಂ. ಕೃಷ್ಣ
6. ವಿ.ಎಸ್. ಕೌಜಲಗಿ
7. ಜಗದೀಶ ಶೆಟ್ಟರ್
* ಈ ವರೆಗೆ ರಾಜ್ಯದಲ್ಲಿ ಐದು ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು.
1. 19-3-1971ರಿಂದ 20-3-1972
2. 31-12-1977ರಿಂದ 28-2-1978
3. 21-4-1989ರಿಂದ 30-11-1989
4. 09-10-2007ರಿಂದ 12-11-2007
5. 20-11-2007ರಿಂದ 29-5-2008
* ರಾಷ್ಟ್ರಪತಿ ಆಳ್ವಿಕೆಯ ಹಿನ್ನೆಲೆಯಲ್ಲಿ ಈ ವರೆಗೆ ಒಂದೇ ಒಂದು ಬಾರಿ 2008ರಲ್ಲಿ ಕರ್ನಾಟಕ ರಾಜ್ಯ ಆಯವ್ಯಯವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
* ವಿಧಾನ ಸಭೆಯ ಒಂದು ಅವಧಿಯಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರು ಡಿ. ದೇವರಾಜ ಅರಸು. ಅವರು 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ 5 ವರ್ಷ 9 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಅತಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ಬಿ.ಎಸ್. ಯಡಿಯೂರಪ್ಪ. ಅವರು ನವೆಂಬರ್ 12, 2007ರಿಂದ ನವೆಂಬರ್ 19, 2007ರವರೆಗೆ ಕೇವಲ ಏಳು ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದರು (ಮೊದಲ ಬಾರಿ ಮುಖ್ಯಮಂತ್ರಿಯಾದಾಗ).












Click it and Unblock the Notifications