• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ವಿಧಾನ ಸಭೆಗೆ ಅರುವತ್ತು : ಹಿನ್ನೋಟ

By * ಎಂ. ಸಹನಾ, ಸಹಾಯಕ ನಿರ್ದೇಶಕಿ, ವಾರ್ತಾ ಇಲಾಖ
|

'ಸರಕಾರದ ಕೆಲಸ ದೇವರ ಕೆಲಸ' ಎಂದು ಕೆತ್ತಲಾಗಿರುವ 56 ವರ್ಷ ಹಳೆದ ಕಲ್ಲಿನ ಕಟ್ಟಡ ವಿಧಾನಸೌಧದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಜನಪ್ರತಿನಿಧಿಗಳು ದಶಕಗಳಿಂದ ರಾಜ್ಯಭಾರ ಮಾಡುತ್ತ ಬಂದಿದ್ದಾರೆ. ನೂರಾರು ವಿಧಾನಸಭೆ ಅಧಿವೇಶನಗಳಿಗೆ ವಿಧಾನಸೌಧ ಸಾಕ್ಷಿಯಾಗಿದೆ. ಅನೇಕ ಏಳುಬೀಳು, ಸತ್ವಯುತ ಚರ್ಚೆ, ಹೊಡೆದಾಟ, ಕಾನೂನು ರಚನೆ, ತಿದ್ದುಪಡಿ, ಅಸಹ್ಯಕರ ಚಿತ್ರವೀಕ್ಷಣೆಗಳಿಗೆ ಸಾಕ್ಷಿಯಾಗಿದೆ. ಈಗ ಇದೇ ವಿಧಾನಸಭೆಗೆ ಅರವತ್ತರ ಸಂಭ್ರಮ. ಈ ಸುಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಇತಿಹಾಸದ ಪುಟಗಳನ್ನು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರುವ ಎಂ. ಸಹನಾ ಅವರು ತಿರುವಿಹಾಕಿದ್ದಾರೆ.

Diamond Jubilee of Karnataka Legislative Assembly

ಜೂನ್ 18, 1952, ಬುಧವಾರ ಬೆಳಿಗ್ಗೆ 11 ಗಂಟೆ. ಬೆಂಗಳೂರಿನ ಹಳೆಯ ಸಾರ್ವಜನಿಕ ಕಚೇರಿಗಳ ಕಟ್ಟಡದ ಸಮ್ಮೇಳನ ಸಭಾಂಗಣ (ಇಂದಿನ ಉಚ್ಚ ನ್ಯಾಯಾಲಯದ ಕಟ್ಟಡ) ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಭಾರತೀಯ ಸಂವಿಧಾನದ ಆಶಯದಂತೆ ಚುನಾಯಿತ ಪ್ರತಿನಿಧಿಗಳಿಂದ ರಚನೆಗೊಂಡ ಮೊದಲ ವಿಧಾನಸಭೆಯ ಪ್ರಥಮ ಅಧಿವೇಶನ ಅಂದು ಪ್ರಾರಂಭವಾಯಿತು.

ಅಂದಿನ ಮೈಸೂರು ರಾಜ್ಯ ವಿಧಾನ ಸಭೆಯ ಮೊದಲ ಅಧಿವೇಶನದ ಮೊದಲ ಕಲಾಪ ನಡೆಸಿದ ಗೌರವ ಸಭಾಧ್ಯಕ್ಷರಾಗಿದ್ದ ಆಗಿದ್ದ ವಿ. ವೆಂಕಟಪ್ಪನವರದು. ಅವರು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರೂ ಸೇರಿದಂತೆ 94 ಮಂದಿ ವಿಧಾನಸಭಾ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮೈಸೂರು ವಿಧಾನ ಸಭೆಯ ಸಭಾನಾಯಕರಾಗಿ ಮುಖ್ಯಮಂತ್ರಿಯವರು ಕೆ. ಹನುಮಂತಯ್ಯ ಅವರ ನೇಮಕವನ್ನು ಘೋಷಿಸಿದರು. ನಂತರ ವಿಧಾನ ಸಭಾಧ್ಯಕ್ಷರ ಚುನಾವಣೆಯನ್ನೂ ನಡೆಸಿಕೊಟ್ಟರು. ಶಾಂತವೇರಿ ಗೋಪಾಲಗೌಡ ಹಾಗೂ ಎಚ್. ಸಿದ್ದಯ್ಯ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಎಚ್.ಸಿದ್ದಯ್ಯ 74 ಮತ ಗಳಿಸಿ ಸಭಾಧ್ಯಕ್ಷರಾಗಿ ಆಯ್ಕೆ ಆದರು. ಈ ಅಧಿವೇಶನದ ಮೊದಲ ಭಾಷಣ ಮಾಡಿದವರು ಕೆಂಗಲ್ ಹನುಮಂತಯ್ಯನವರು.

ವಿಧಾನಸಭೆಯ ಅಧಿವೇಶನಕ್ಕೆ ಈಗ ವಜ್ರ ಮಹೋತ್ಸವದ ಸಂಭ್ರಮ. ರಾಜ್ಯಕ್ಕೆ ವಿಧಾನ ಸಭೆ ಹಾಗೂ ಪ್ರಜಾಪ್ರಭುತ್ವದ ಪರಿಕಲ್ಪನೆ ಅಂದಿಗೇ ಏಳು ದಶಕದಷ್ಟು ಹಳೆಯದು! ಮೈಸೂರು ಮಹಾರಾಜರ ಅವಧಿಯಲ್ಲೇ 1881ರಲ್ಲಿ ಆರಂಭವಾದ ಮೈಸೂರು ಪ್ರಜಾ ಪ್ರತಿನಿಧಿ ಸಭೆಯಲ್ಲಿ ಇಂದಿನ ರಾಜ್ಯ ವಿಧಾನಸಭೆಯ ಬೇರುಗಳಿವೆ.

ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ತಮ್ಮ ಲೇಖನವೊಂದರಲ್ಲಿ ಸ್ವಾತಂತ್ರ್ಯಾನಂತರ ವಿಧಾನ ಸಭೆ ರೂಪುಗೊಂಡ ಹಿನ್ನೆಲೆಯನ್ನು ಹೀಗೆ ವಿವರಿಸುತ್ತಾರೆ: ಸ್ವಾತಂತ್ರ್ಯ ದೊರೆತಾಗ 1947ರಲ್ಲಿ ಮೈಸೂರು ರಾಜ್ಯ ಭಾರತ ದೇಶದಲ್ಲಿ ವಿಲೀನಗೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿತು. ಮೈಸೂರು ರಾಜ್ಯವು ರಕ್ಷಣೆ ಮತ್ತು ವಿದೇಶಾಂಗ ನೀತಿ ಹೊರತು ಪಡಿಸಿದರೆ ಉಳಿದಂತೆ ಸ್ವಾಯತ್ತ ರಾಜ್ಯವಾಗಿರುವುದು ಎಂದು ಅಂದಿನ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಭಾವಿಸಿದರು. ಅದಕ್ಕಾಗಿ ಮೈಸೂರು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ರಚನೆಗಾಗಿ ಅವರು ಶಾಸನ ಸಭೆಯ ನೇಮಕ ಮಾಡಿದರು. ಆದರೆ ಶಾಸನ ಸಭೆಯ ಬಹುತೇಕ ಸದಸ್ಯರು ಮೈಸೂರು ರಾಜ್ಯವೂ ಭಾರತೀಯ ಸಂವಿಧಾನವನ್ನೇ ಅನುಸರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟು ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಅಂಗೀಕರಿಸಿದ ಮಹಾರಾಜರು 1949ರ ನವೆಂಬರ್ 27ರಂದು ಮೈಸೂರು ಶಾಸನ ಸಭೆಯನ್ನೇ ಮಧ್ಯಂತರ ವಿಧಾನಸಭೆಯನ್ನಾಗಿ ಘೋಷಿಸಿದರು.

ಮೊದಲ ಬಾರಿಗೆ 1952ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಪ್ರಥಮ ವಿಧಾನಸಭೆ ಅಸ್ತಿತ್ವಕ್ಕೆ ಬಂತು. ಭಾರತೀಯ ಸಂವಿಧಾನದ ಆಶಯದಂತೆ ರಚನೆಯಾದ ಮೊದಲ ವಿಧಾನಸಭೆಯಲ್ಲಿ 99 ಚುನಾಯಿತ ಸದಸ್ಯರು ಹಾಗೂ ಸರ್ಕಾರದಿಂದ ನಾಮನಿರ್ದೇಶಿತರಾದ ಓರ್ವ ಸದಸ್ಯರಿದ್ದರು. ನಂತರ 1953ರಲ್ಲಿ ಆಂಧ್ರ ಪ್ರದೇಶ ರಾಜ್ಯ ರಚನೆಯಾಗಿ, ಬಳ್ಳಾರಿ ಜಿಲ್ಲೆ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದಾಗ ಇನ್ನೂ ಐವರು ರಾಜ್ಯ ವಿಧಾನಸಭಾ ಸದಸ್ಯರಾದರು. ತದನಂತರ 1956ರಲ್ಲಿ ಭಾಷಾವಾರು ರಾಜ್ಯಗಳ ರಚನೆಯಾದಾಗ ಮುಂಬೈ ರಾಜ್ಯದ ನಾಲ್ಕು ಜಿಲ್ಲೆಗಳು, ಹೈದರಾಬಾದ್‌ನ ಮೂರು ಜಿಲ್ಲೆಗಳು, ಹಳೆಯ ಮದ್ರಾಸ್ ರಾಜ್ಯದ ಒಂದು ಜಿಲ್ಲೆ ಮತ್ತು ಒಂದು ತಾಲ್ಲೂಕು, ಕೊಡಗು ರಾಜ್ಯ ಹಾಗೂ ಮಹಾರಾಜರ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ ಸೇರಿ ವಿಶಾಲ ಮೈಸೂರು ರಾಜ್ಯದ ಉದಯವಾಯಿತು. ವಿಧಾನಸಭಾ ಸದಸ್ಯರ ಸಂಖ್ಯೆ 1957ರಲ್ಲಿ 208ಕ್ಕೆ ಏರಿತು. ಪುನಃ 1967ರಲ್ಲಿ 216ಸ ಸದಸ್ಯ ಬಲ ಹೊಂದಿದ್ದ ರಾಜ್ಯ ವಿಧಾನಸಭೆ 1978ರ ನಂತರ 224 ಚುನಾಯಿತ ಸದಸ್ಯರು ಹಾಗೂ ಸರ್ಕಾರದಿಂದ ನಾಮನಿರ್ದೇಶಿತ ಓರ್ವ ಸದಸ್ಯ ಸೇರಿಂದತೆ ಒಟ್ಟು 225 ಸದಸ್ಯ ಬಲದ ಸದನವಾಯಿತು.

ಜನರಿಂದ, ಜನರಿಗಾಗಿ, ಜನರೇ ಆಡಳಿತ ನಡೆಸುವ ಪ್ರಜಾಪ್ರಭುತ್ವದಲ್ಲಿ ನೇರವಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಇರುವುದು ವಿಧಾನಸಭೆಯಲ್ಲಿ. ಜನರ ನೋವು ನಲಿವುಗಳಿಗೆ ಸ್ಪಂದಿಸುವ, ಅವರ ಶ್ರೇಯೋಭಿವೃದ್ಧಿಗೆ ಪೂರಕವಾದ ಶಾಸನ ರಚನೆ, ಹಿತ ಚಿಂತನೆ, ಫಲಪ್ರದ ಚರ್ಚೆಯ ತಾಣವಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಭೂ ಸುಧಾರಣೆ, ಹಿಂದುಳಿದ ವರ್ಗಗಳ ಮೀಸಲಾತಿ, 18 ವರ್ಷಕ್ಕೆ ಮತ ಚಲಾಯಿಸುವ ಹಕ್ಕು, ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಂತಹ ಹಲವು ಕ್ರಾಂತಿಕಾರಿ ಕಾಯ್ದೆಗಳನ್ನು ಅಂಗೀಕರಿಸಿ, ಜನರ ಬದುಕನ್ನು ಹಸನುಗೊಳಿಸುವತ್ತ ಮುನ್ನಡೆದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕರ್ನಾಟಕ ವಿಧಾನಸಭೆ ಸುದ್ದಿಗಳುView All

English summary
The first assembly came into existence 60 years back on June 18, 1952. A special session will be held on June 18, 2012 to mark the diamond jubilee of Karnataka legislative assembly. On the occasion of 60th birthday of assembly Sahana M, Information dept Deputy director recalls the history.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more