ಕುಮಾರ ತಾನು ಕಳ್ಳ ಪರರನ್ನು ನಂಬ: ಸಿದ್ದರಾಮಯ್ಯ

'ಈ ಆರೋಪದ ಬಗ್ಗೆ ಕುಮಾರಸ್ವಾಮಿ ಬಳಿ ಸಾಕ್ಷಿ ಇದ್ದರೆ ಅಥವಾ ನಾನು ನನ್ನ ಜೀವನದಲ್ಲಿ ಒಂದಾರೂ ಭ್ರಷ್ಟಾಚಾರ ಮಾಡಿದ್ದರೆ ಅವರು ಅದನ್ನು ಬಯಲು ಮಾಡಲಿ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಆತನಿಗೆ ಸುಳ್ಳು ಹೇಳುವ ಚಾಳಿ ಇದೆ. ಚಪಲಕ್ಕೆ ಅಂತ ಒಂದು ಸುಳ್ಳು ಹೇಳಿದ್ದಾರೆ ಅಷ್ಟೇ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸಮಾಧಾನ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಬರ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಕಳ್ಳ ಪರರನ್ನು ನಂಬ ಎನ್ನುವ ಗಾದೆಯಂತೆ ಕುಮಾರಸ್ವಾಮಿ ಮಾತನಾಡಿದರೆ ಹೇಗೆ? ಈ ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆ ಯಾವುದೇ ಸಾಕ್ಷ್ಯಗಳಿಲ್ಲದೆ, ಉಪ ಚುನಾವಣೆಯಲ್ಲಿ ತಟಸ್ಥವಾಗಿರಲು ಹಣ ಪಡೆದೆ ಎನ್ನುವುದನ್ನು ಜನರ ಮುಂದೆ ಮಾತನಾಡಲು ಅವರಿಗೆ ಏನೂ ಅನ್ನಿಸುವುದಿಲ್ಲವೇ. ಅವರೇನು ಇಂತಹುದೇ ರಾಜಕಾರಣ ಮಾಡುತ್ತಿದ್ದಾರೇನು? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಯವರೇ, ಉಡುಪಿ ಚುನಾವಣೆಯಲ್ಲಿ ಏನು ಮಾಡಿದಿರಿ, ರಾಜ್ಯಸಭೆಗೆ ರಾಜೀವ ಚಂದ್ರಶೇಖರ ಅವರನ್ನು ಆರಿಸಲು ನೀವೇನು ಮಾಡಿದಿರಿ, ಯಾರ ಜತೆಯಲ್ಲಿ ಹೇಗೆ ಮತಗಳನ್ನು ಹಂಚಿಕೊಂಡಿರಿ ಅಲ್ಲಲ್ಲ ಹೊಂಚಿಕೊಂಡಿರಿ ಎನ್ನುವುದನ್ನು ನಾನು ಹೇಳಲು ಹೋಗುವುದಿಲ್ಲ. ಏಕೆಂದರೆ ಅಂತಹ ತಳವಿಲ್ಲದ ರಾಜಕಾರಣ ನಾನು ಮಾಡಲಾರೆ ಎಂದು ಸಿದ್ದು ವ್ಯಂಗ್ಯವಾಡಿದರು.
ಬಾಗಲಕೋಟದಲ್ಲಿಯೂ ಇದೇ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ 'ಕುಮಾರಸ್ವಾಮಿ ಆಧಾರ ರಹಿತ, ಮೂರ್ಖತನದ ಹೇಳಿಕೆ ನೀಡಿದ್ದಾರೆ. ಜೈಲು-ಕೋರ್ಟ್ ಅಲೆಯುವ ಕುಮಾರಸ್ವಾಮಿಯಂತ ಅಲ್ಪಾನುಭವಿಗೆ ಸ್ವಾಭಿಮಾನ ರಾಜಕಾರಣ ಮಾಡುತ್ತಿರುವ ತಮ್ಮ ಬಗ್ಗೆ ಏನು ಗೊತ್ತು?' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.












Click it and Unblock the Notifications