
ಬೆಂಗಳೂರು ಕಲ್ಯಾಣ ಮಂಟಪದಲ್ಲಿ ಸ್ಫೋಟ, ಬೆಂಕಿ
ಅಡುಗೆ ಅನಿಲ ಸ್ಫೋಟಗೊಂಡ ನಂತರ ಬೆಂಕಿ ಕಲ್ಯಾಣ ಮಂಟಪ ಹತ್ತಿಕೊಂಡು ಉರಿದಿದೆ. ಈ ಸ್ಫೋಟ ಮತ್ತು ಬೆಂಕಿಯಿಂದ ಕಟ್ಟಡ ಕುಸಿತ ಉಂಟಾಗಿ ನಾಲ್ವರಿಗೆಗಂಭೀರ ಸ್ವರೂಪದ ಗಾಯಗಳಾಗಿವೆ.
ಸಿಲಿಂಡರ್ ಸ್ಫೋಟದ ಪರಿಣಾಮ ಲಕ್ಷ್ಮಿ ವೆಂಕಟೇಶ್ವರ ಕನ್ವೇಷನ್ ಹಾಲ್ ನ ಒಂದು ಗೋಡೆ ಕುಸಿಯಿತು. ಗೋಡೆಯ ಅವಶೇಷಗಳಡಿಯಲ್ಲಿ ಕೆಲವು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 18 ವರ್ಷದ ಸರಿತಾ ಎಂಬ ಹೆಸರಿನ ಯುವತಿ ಹಾಗೂ ಸಣ್ಣ ಮಗುವೊಂದು ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ.
ಘಟನೆ ನಡೆದ ಸಮಯದಲ್ಲಿ ಕಲ್ಯಾಣಮಂಟಪದಲ್ಲಿ ಹೆಚ್ಚು ಜನರಿರಲಿಲ್ಲ. ಬೆಂಕಿ ನಂದಿಸುವ ವೇಳೆ ಗಾಯಗೊಂಡ ಅಗ್ನಿಶಾಮಕ ದಳದ ಆನಂದಯ್ಯ, ರಂಗಸ್ವಾಮಿ, ಗೋವಿಂದ ರಾಜು, ನಾಗೇಶ್ ಎಂಬುವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟದ ತೀವ್ರತೆಯಿಂದ ಅಕ್ಕ ಪಕ್ಕದ ಮನೆಗಳಿಗೂ ಹಾನಿ ಸಂಭವಿಸಿದೆ. ಕಲ್ಯಾಣ ಮಂಟಪದ ಪಕ್ಕದಲ್ಲಿ ಮೊಬೈಲ್ ಟವರ್ ಇದೆ. ಮೊಬೈಲ್ ಟವರ್ ಕುಸಿತದ ಭೀತಿ ಜನರಲ್ಲಿ ಆವರಿಸಿದೆ.
ಒಟ್ಟು 9 ಕ್ಕೂ ಅಧಿಕ ಅಗ್ನಿಶಾಮಕದಳದ ವಾಹನಗಳು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಕಟ್ಟಡ ಕುಸಿತದಿಂದ ಅಗ್ನಿಶಾಮಕದಳ ಸಿಬ್ಬಂದಿಗೂ ಗಾಯಗಳಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವರದಿಗಾಗಿ ನಿರೀಕ್ಷಿಸಲಾಗಿದೆ.