ಪೆಟ್ರೋಲ್ ಬೆಲೆ 5 ರು. ಹೆಚ್ಚಳ :ಐಒಸಿ

ಕಡೆಯ ಬಾರಿಗೆ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು ಜನವರಿಯಲ್ಲಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ, ಪೆಟ್ರೋಲ್ ಬೆಲೆ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಂಡಿದ್ದರೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿರಲಿಲ್ಲ. ಐದು ರಾಜ್ಯಗಳ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜಕೀಯ ಸೂಕ್ಷ್ಮ ಅರಿತ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆಯಾಗದಂತೆ ನೋಡಿಕೊಂಡಿತ್ತು. ಆದರೆ ಖಾಸಗಿ ಕಂಪನಿಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗಿಂತ ಈಗಾಗಲೇ ಐದಾರು ರು. ಹೆಚ್ಚು ಬೆಲೆಗೆ ಪೆಟ್ರೋಲ್ ಮಾರಾಟ ಮಾಡುತ್ತಿವೆ.
ಸದ್ಯ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಿಂದ 7 ರೂ. ನಷ್ಟ ಅನುಭವಿಸುತ್ತಿವೆ. ಇದನ್ನು ಸರಿದೂಗಿಸಿಕೊಳ್ಳಲು ಬೆಲೆ ಏರಿಕೆ ಮಾಡಲು ಮುಂದಾಗಿವೆ. ಈ ಕೆಲಸ ಚುನಾವಣೆ ಫಲಿತಾಂಶ ಹೊರಬೀಳುವ ಮೊದಲೇ ಆಗಲಿದೆ. ಈ ಸುಳಿವನ್ನು ಇಂಡಿಯನ್ ಆಯಿಲ್ ಕಂಪನಿಯ ಮುಖ್ಯಸ್ಥ ರಣಬೀರ್ ಸಿಂಗ್ ಬುಟೋಲಾ ಅವರೇ ನೀಡಿದ್ದಾರೆ.
ಕಂಪೆನಿಗಳ ಅಳಲು : 2010-11ರ ಸಾಲಿನಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ ಸರಾಸರಿ 100 ಡಾಲರಿನಂತೆ ಆಮದು ಮಾಡಿಕೊಳ್ಳಲಾಗಿದೆ. ಭಾರತ ತನ್ನ ಇಂಧನ ಅವಶ್ಯಕತೆಯ ಶೇ.80 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಗ್ರಾಹಕರಿಂದ ಪೂರ್ಣ ಪ್ರಮಾಣದಲ್ಲಿ ಈ ಹಣವನ್ನು ಪಡೆಯಲಾಗುತ್ತಿಲ್ಲ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ರು. ಗೂ ಹೆಚ್ಚು ತೆರಿಗೆ ಕಟ್ಟಬೇಕಿದೆ ಎಂದು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಹೇಳುತ್ತಿವೆ. ಒಟ್ಟಿನಲ್ಲಿ, ಯುಪಿಎ ಸರ್ಕಾರ ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬಿಸಿಯನ್ನು ಮುಟ್ಟಿಸಲಿದೆ.












Click it and Unblock the Notifications