• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲಾ 224 ಎಂಎಲ್ಲೆಗಳಿಗೆ ಪಿಂಕ್ ಸ್ಲಿಪ್?

By * ಶಾಮ್
|

Pink slip awaits 224 Karnataka MLAs
ಬೆಂಗಳೂರು, ಅ. 11 : ಕರ್ನಾಟಕಕ್ಕೆ ಇವತ್ತು ಸೋಮವಾರ ಕರಾಳ ದಿನ. ಒಂದು ಕಪ್ಪು ಚುಕ್ಕೆ. ರಾಜ್ಯದ ಕಚಡಾ ರಾಜಕೀಯ ಎತ್ತ ಸಾಗುತ್ತಿದೆ ಎಂದು ಸ್ಪಷ್ಟವಾಗಿ ಸಾರಿ ಹೇಳುತ್ತಿರುವ ದಿನ. ಭಾರತೀಯ ಜನತಾ ಪಕ್ಷ, ಜನತಾದಳ (ಜಾತ್ಯತೀತ) ಮತ್ತು ಕಾಂಗ್ರೆಸ್ ಪಕ್ಷಗಳು ಅಲ್ಲದೆ ಪಕ್ಷೇತರರಾಗಿ ಆರಿಸಿಬಂದ ಸಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹಾಗೂ ತಮ್ಮ ಮುಂದಿನ ಹೆಜ್ಜೆಗಳನ್ನು ಜಾಗರೂಕತೆಯಿಂದ ಇಡಬೇಕೆಂದು ತಮಗೆ ತಾವೇ ಸಲಹೆ ಕೊಟ್ಟುಕೊಳ್ಳಬೇಕಾದ ದಿನ. ಕಾರಣ ಸ್ಪಷ್ಟ. ಜನ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. "ನಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ" ಎನ್ನುವಂಥವರೂ ಕೂಡ ನಾಚಿಕೆಗೇಡಿನ ವಿದ್ಯಮಾನಗಳನ್ನು ಕಂಡು ರಾಜಕಾರಣಿ ಸಂಕುಲಕ್ಕೆ ಉಗಿದು ದಿಢೀರ್ ಉಪ್ಪಿನಕಾಯಿ ಹಾಕಲು ಆರಂಭಿಸಿದ್ದಾರೆ.

ಕಳೆದ ಒಂದು ವಾರದಿಂದ ಭಿನ್ನಮತೀಯ ಶಾಸಕರು ಹೊರರಾಜ್ಯದ ರೆಸಾರ್ಟ್ಗಳಲ್ಲಿ ಕುಳಿತುಕೊಂಡು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ವಿರುದ್ಧ ಮಸಲತ್ತು ಮಾಡುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿತು. ಕೆಲವರ ಕುಮ್ಮಕ್ಕಿನಿಂದ ಸ್ಫೂರ್ತಿಗೊಂಡ 16 ಶಾಸಕರು ಯಡಿಯೂರಪ್ಪ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ಕಾರಣ ಸರಕಾರದಲ್ಲಿ ಅಭದ್ರತೆ ತಲೆದೋರಿತು. ಹಾಗಾಗಿ, ರಾಜ್ಯಪಾಲರು ಸರಕಾರಕ್ಕೆ ಒಂದು ಆದೇಶ ಕೊಟ್ಟು ಬಹುಮತವನ್ನು ಅಕ್ಟೋಬರ್ 12ರ ಒಳಗಾಗಿ ಸಾಬೀತು ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಸೂಚನೆ ಕೊಟ್ಟರು. ಅದರಂತೆ ಯಡಿಯೂರಪ್ಪ ಇಂದು ಸೋಮವಾರ ಬೆಳಗ್ಗೆ 10 ಗಂಟೆಗೆ ವಿಶ್ವಾಸ ಮತಕೋರುವ ಅಧಿವೇಶನ ಮಂತ್ರ ಮಾಟ ಮಾಡಿಸಿಕೊಂಡಿದ್ದ ವಿಧಾನಸಭೆಯಲ್ಲಿ ಆರಂಭವಾಯಿತು. ನಂತರದ ವಿದ್ಯಮಾನಗಳು ನಿಮಗೆ ಚುಟುಕಾಗಿ, ನಿಜ್ಜವಾಗಿ :

* ಸೋಮವಾರ ಬೆಳ್ಳಂಬೆಳಗ್ಗೆ ಯಡಿಯೂರಪ್ಪನವರು 16 ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸುವ ಆದೇಶ ಹೊರಡಿಸಿದರು.

* ಅನರ್ಹವಾದರೂ ಕೂಡ ಪಕ್ಷೇತರರು, ಕಮಲ ಚಿನ್ಹೆಯಲ್ಲಿ ಗೆದ್ದಿದ್ದ ಬಿಜೆಪಿ ಬಂಡಾಯ ಶಾಸಕರು ಮತ್ತು ಯಾರ್ಯಾರೋ ವಿಧಾನಸಭೆಗೆ ನುಗ್ಗಿದರು.

* ಸಿಕ್ಕಾಪಟ್ಟೆ ತಳ್ಳಾಟ, ನೂಕಾಟ ಉಂಟಾಗಿ ಇದೇನು ಸಭೆಯೋ ಅಥವಾ ಫಿಶ್ ಮಾರ್ಕೆಟ್ಟೋ ಎಂಬಂಥ ವಾತಾವರಣ ನಿರ್ಮಾಣವಾಯಿತು.

* ಸಭಾಂಗಣದೊಳಗೆ ಕಾನೂನು ಮತ್ತು ಶಿಸ್ತು ಪಾಲನೆ ಮಾಡುವ ಮಾರ್ಷಲ್ ಗಳ ಮೇಲೆ ಕೆಲವು ಶಾಸಕರು ಹಲ್ಲೆ ಮಾಡಿದರು.

* ಸಮವಸ್ತ್ರ ಧರಿಸಿದ್ದ ಕಮಿಷನರ್ ಶಂಕರ್ ಬಿದರಿ ಮತ್ತು ಇತರ ಅಧಿಕಾರಿಗಳು ಸಭೆಯೊಳಗೆ ಪ್ರವೇಶಿಸಿದ್ದು ಶಾಸಕರನ್ನು ಕೆರಳಿಸಿತು.

* ಶಾಸಕರು ಪರಸ್ಪರ ಕೆಟ್ಟದಾಗಿ ಬೈದಾಡಿಕೊಂಡರು. ಗೂಳಿಹಟ್ಟಿ ಶೇಖರ್ ತರಹದವರು ಅಂಗಿ ಹರಿದುಕೊಂಡು ಎದ್ದು ಕುಣಿದಾಡಿದರು.

* ಅಷ್ಟುಹೊತ್ತಿಗೆ ಮುಖ್ಯಮಂತ್ರಿ ಮತ್ತು ಸಭಾಪತಿ ಕೆಜಿ ಬೋಪಯ್ಯ ಸದನಕ್ಕೆ ಬಂದರು. ಆಗಲೇ ಸದನ ದೆವ್ವದ ಮನೆಯಾಗಿತ್ತು.

* ಸಭಾಧ್ಯಕ್ಷರು ಧ್ವನಿಮತದಿಂದ ಸರಕಾರಕ್ಕೆ ವಿಶ್ವಾಸಮತ ಪ್ರಾಪ್ತವಾಗಿದೆ (ಬಿಜೆಪಿ 106, ವಿರೋಧ 0)ಎಂದು ಘೋಷಿಸಿದರು.

* ಇದರಿಂದ ಕುಪಿತಗೊಂಡ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಶಾಸಕರು ರಾಜ್ಯಪಾಲರಿಗೆ ದೂರು ಕೊಟ್ಟರು.

* ವಿಧಾನಸಭೆಯನ್ನು ಕೂಡಲೇ ವಿಸರ್ಜನೆ ಮಾಡುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ವಿರೋಧ ಪಕ್ಷದ ಧುರೀಣರು ಒತ್ತಾಯಿಸಿದರು.

* ಇದೇ ವೇಳೆ ಮಾರ್ಷಲ್ ಗಳ ಮೇಲೆ ಹಲ್ಲೆ ಮಾಡಿದ ಶಾಸಕರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾದವು.

* ಬಿಜೆಪಿ ಸರಕಾರ ಉರುಳಿಸಿದ್ದಕ್ಕೆ ಎಚ್ಡಿಕೆ ಸಂತಸ ವ್ಯಕ್ತಪಡಿಸಿದರು. ದುರ್ಯೋಧನ ಬಿರುದನ್ನು ಸಂತಸದಿಂದ ಸ್ವೀಕರಿಸಿದರು.

* ಬಿಜೆಪಿ ಶಾಸಕರು ಪುನಃ ನೆಲಮಂಗಲದ ರೆಸಾರ್ಟಿಗೆ ತೆರಳಿದರು.

* ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು, ಬಹುಮತ ಸಾಬೀತು ಪಡಿಸಲು ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡುವುದಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕೂಡಲೇ ಕೇಂದ್ರ ಸರಕಾರಕ್ಕೆ ಪತ್ರ ಬರೆದು ರಾಷ್ಟ್ರಪತಿ ಆಳ್ವಿಕೆ ತರವಂತೆ ಶಿಫಾರಸ್ಸು ಮಾಡಿದರು. ಈ ಮಧ್ಯೆ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಿನ್ನಮತೀಯ 16 ಶಾಸಕರು ಬೆಂಗಳೂರಿನಲ್ಲಿ ಉಚ್ಚನ್ಯಾಯಾಲಯದ ಮೆಟ್ಟಿಲು ಹತ್ತಿದರು. ಅರ್ಜಿಯನ್ನು ಕೋರ್ಟ್ ಇಂದೇ ವಿಚಾರಣೆಗೆ ಎತ್ತಿಕೊಂಡಿತು. ನಂತರ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಅತ್ತ, ಕರ್ನಾಟಕ ರಾಜ್ಯಪಾಲರ ಶಿಫಾರಸ್ಸನ್ನು ಅಧ್ಯಯನ ಮಾಡಲು ಸಂಜೆ 6.15ಕ್ಕೆ ನವದೆಹಲಿಯಲ್ಲಿ ಕಾಂಗ್ರೆಸ್ ಕೋರ್ ಕಮಿಟಿ ಸಭೆ ಕರೆಯಲಾಯಿತು. ಅಂತೆಯೆ, ಈ ಹಗರಣ ಕುರಿತು ಚರ್ಚಿಸಲು ನಾಳೆ ಮಂಗಳವಾರ ಕೇಂದ್ರ ಸಂಪುಟ ಸಭೆಯನ್ನು ಕರೆಯಲಾಗಿದೆ. ಕೇಂದ್ರ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡಿ.

ನಮ್ಮ ರಾಜಕೀಯ ತಜ್ಞರು ಹೇಳುವ ಪ್ರಕಾರ, ಕೇಂದ್ರ ಸರಕಾರ ಏಕಾಏಕಿ ತನ್ನ ನಿರ್ಧಾರ ಪ್ರಕಟಿಸುವುದಿಲ್ಲ. ಭಿನ್ನಮತೀಯರನ್ನು ಅನರ್ಹಗೊಳಿಸಿದ ಸಂಬಂಧದ ಅರ್ಜಿ ವಿಚಾರಣೆ ಮಾಡಿ ಕರ್ನಾಟಕ ಹೈಕೋರ್ಟ್ ತನ್ನ ನಿಲುವು ಪ್ರಕಟಿಸುವ ತನಕ ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರಕ್ಕೂ ಬರುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಊಹಿಸುವುದು ರಾಜಕೀಯ ಸೂಕ್ಷ್ಮಗಳನ್ನು ಬಲ್ಲ ಕಿಲಾಡಿಗಳಿಗೆ ಕಷ್ಟವಾಗುವುದಿಲ್ಲ.

ಕೇಂದ್ರ ಸರಕಾರದ ಕರೆಗಂಟೆಗೆ ಕಾಯುತ್ತಿರುವ ನಿಮಗೆ ಮುಖ್ಯವಾದ ವಿಷಯ ಹೇಳುವುದಿದೆ. ಅದೆಂದರೆ, 14ನೇ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಎಲ್ಲ ಪಕ್ಷಗಳ ಎಲ್ಲಾ ಎಂಎಲ್ಲೆಗಳೂ ಪಿಂಕ್ ಸ್ಲಿಪ್ ಪಡೆಯುವ ಕಾಲ ಸನ್ನಿಹಿತವಾಗಿದೆ. ಹ್ಯಾಪಿ ರಿಸೆಷನ್.

ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more