E & B Khata: ಇ - ಖಾತಾ, - ಬಿ ಖಾತಾ ಅಭಿಯಾನ: ಇನ್ನು ಎಷ್ಟು ದಿನ ಇರಲಿದೆ, ಇಲ್ಲಿದೆ ಸಂಪೂರ್ಣ ವಿವರ
E & B Khata: ಇ-ಖಾತಾ, ಹೊಸ ಖಾತಾ, ಬಿ ಖಾತಾ ದಿಂದ ಎ-ಖಾತಾ ಪರಿವರ್ತನೆಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ಇ-ಖಾತಾದಲ್ಲಾಗಿರುವ ತಪ್ಪುಗಳ ತಿದ್ದುಪಡಿಯನ್ನು ಸ್ಥಳದಲ್ಲೇ ಪರಿಶೀಲಿಸಿ ಅಂತಿಮ ಇ-ಖಾತಾಗಳನ್ನು ನಾಗರಿಕರಿಗೆ ವಿತರಿಸುವ ಕಾರ್ಯ "ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನದ 52 ಕೇಂದ್ರಗಳಲ್ಲಿ ನಡೆಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ "ಭೂ ಗ್ಯಾರಂಟಿ" ಯೋಜನೆಯಡಿ ಆರಂಭಿಸಿರುವ "ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನಕ್ಕೆ ಎಲ್ಲಾ ಕಡೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಯಾನ ಕೇಂದ್ರಗಳಲ್ಲಿ ನಾಗರಿಕರಿಗೆ ಸಹಾಯ ಕೇಂದ್ರಗಳು, ವಿಶೇಷ ಕೌಂಟರ್‌ಗಳು, ಆಸನ ವ್ಯವಸ್ಥೆ, ಇಂಟರ್‌ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್‌ಗಳು, ಸ್ಕ್ಯಾನರ್, ಪ್ರಿಂಟರ್ ಹಾಗೂ ಪಾವತಿ ನೆರವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅರ್ಜಿದಾರರಿಗೆ ಸ್ಥಳದಲ್ಲಿಯೇ ಮಾರ್ಗದರ್ಶನ ಹಾಗೂ ದಾಖಲೆ ಪರಿಶೀಲನೆ ನಡೆಸಿ ತ್ವರಿತ ಸೇವೆ ಒದಗಿಸುವ ಹಾಗೂ ಜನಸೇವಕರ ಮೂಲಕ ಹೊಸದಾಗಿ ಇ-ಖಾತಾಗೆ ಅರ್ಜಿ ಸಲ್ಲಿಸಲಾಯಿತು.

ಬೆಂಗಳೂರು ಪೂರ್ವ ನಗರ ಪಾಲಿಕೆ ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಆರಂಭವಾದ "ನನ್ನ ಇ-ಖಾತಾ, ನನ್ನ ಹಕ್ಕು" ಅಭಿಯಾನ ಕೇಂದ್ರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ, ಪ್ರಕ್ರಿಯೆಯನ್ನು ಪರಿಶೀಲಿಸಿದರು. ಆ ಬಳಿಕ ನಾಗರಿಕರ ಅಹವಾಲುಗಳನ್ನು ಆಲಿಸಿ, ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ನಾಗರಿಕರಿಗೆ ಅಂತಿಮ ಇ-ಖಾತಾ ವಿತರಣೆ
ಅಭಿಯಾನದಲ್ಲಿ ಅಂತಿಮ ಇ-ಖಾತಾ ಪಡೆಯುವ ನಾಗರಿಕರಿಗೆ ಸ್ಥಳದಲ್ಲಿಯೇ 125 ರೂ. ಪಾವತಿಸಿಕೊಂಡು ಅಂತಿಮ ಇ-ಖಾತಾ ಪ್ರತಿ ಹಾಗೂ ಉಪ ಮಖ್ಯಮಂತ್ರಿಗಳ ಸಂದೇಶವುಳ್ಳ ಪ್ರತಿಯನ್ನು ವಿತರಿಸಲಾಯಿತು.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ವಿಶೇಷ ಅವಕಾಶ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಆಸ್ತಿಗಳಿಗೆ ಸೀಮಿತ ಅವಧಿಗೆ (100 ದಿನಗಳು) ಅಂದರೆ ದಿನಾಂಕ:15.05.2026 ರಿಂದ 23.08.2026 ರವರೆಗೆ ಅನ್ವಯಿಸಿ 'ಬಿ' ಖಾತಾ ಯಿಂದ 'ಎ' ಖಾತಾ ಪರಿವರ್ತನೆ ಪ್ರಕ್ರಿಯೆಯಡಿಯಲ್ಲಿ ಏಕನಿವೇಶನಗಳ ವಿನ್ಯಾಸ ಅನುಮೋದನೆ ಸಂಬಂಧ ಪಾವತಿಸಿಕೊಳ್ಳಬೇಕಾದ ಶುಲ್ಕವನ್ನು ಆಸ್ತಿಯ ಮಾರ್ಗಸೂಚಿ ಬೆಲೆಯ ಶೇ.5 ಕ್ಕೆ ಬದಲಾಗಿ ಶೇ.2 ಕ್ಕೆ ಕಡಿತಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಈ ಸುವರ್ಣಾವಕಾಶವನ್ನು 7 ಲಕ್ಷ ಆಸ್ತಿ ಮಾಲೀಕರು ಸದ್ಬಳಕೆ ಮಾಡಿಕೊಂಡು ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಡಿ.ಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
E & B Khata: ಪ್ರತಿ ಶನಿವಾರ ಅಭಿಯಾನ
ನಾಗರಿಕ ಸೇವಾ ಸೌಲಭ್ಯ ಹಾಗೂ ಅಹವಾಲು ನಿವಾರಣೆಯನ್ನು ಮತ್ತಷ್ಟು ಬಲಪಡಿಸಲು ಇಂದಿನಿಂದ 100 ದಿನಗಳ ಕಾಲ ಪ್ರತಿ ಶನಿವಾರವೂ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ ನಡೆಯಲಿದ್ದು, ನಾಗರಿಕರು ತಮ್ಮ ಆಸ್ತಿ ದಾಖಲೆಗಳು, ಗುರುತಿನ ಚೀಟಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಅಭಿಯಾನ ಕೇಂದ್ರಗಳಿಗೆ ಭೇಟಿ ನೀಡಿ ಇ-ಖಾತಾ ಸೇವೆ ಪಡೆಯಲು ಮನವಿ ಮಾಡಿದೆ.
5 ನಗರ ಪಾಲಿಕೆಗಳಲ್ಲಿ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನದ ಕುರಿತ ವಿವರ
ಬೆಂಗಳೂರು ದಕ್ಷಿಣ ನಗರ ಪಾಲಿಕೆ
ದಕ್ಷಿಣ ನಗರ ಪಾಲಿಕೆ 12 ಸ್ಥಳಗಳಲ್ಲಿ ಅಭಿಯಾನ ನಡೆಸಲಾಗಿದ್ದು, ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಅವರು ಅರಕೆರೆಯ ಪುಟ್ಟೇನಹಳ್ಳಿ ಸರ್ಕಾರಿ ಶಾಲೆ ಹಾಗೂ ಬೊಮ್ಮನಹಳ್ಳಿಯ ಸದ್ಗುರು ಸಾಯಿಬಾಬ ಶಾಲೆಯಲ್ಲಿ ಆಯೋಜಿಸಿದ್ದ ಅಭಿಯಾನಕ್ಕೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿ ನಾಗರಿಕರಿಗೆ ಅಂತಿಮ ಇ-ಖಾತಾ ವಿತರಿಸಿದರು.
ಆಯುಕ್ತರಾದ ಕೆ.ಎನ್ ರಮೇಶ್ ಅವರಿಂದ 7 ಅಭಿಯಾನ ಕೇಂದ್ರಗಳಿಗೆ ಭೇಟಿ
ಅಭಿಯಾನದ ಕುರಿತು ಉತ್ತರಹಳ್ಳಿಯ ನಾಗರಿಕರೊಬ್ಬರು ಪ್ರತಿಕ್ರಿಯಿಸಿ, ಇದೊಂದು ಸುವರ್ಣಾವಕಾಶ, ಇ-ಖಾತಾ ಪಡೆಯಲು ಈ ಹಿಂದೆ ಇದ್ದ ಕಷ್ಟ ತಪ್ಪಿದೆ. ಸರ್ಕಾರ ನಮ್ಮ ಮನೆ ಬಾಗಿಲಿಗೆ ಆಯಾ ಪ್ರದೇಶದಲ್ಲೇ ಒಂದು ದೊಡ್ಡ ಆಂದೋಲನ ಏರ್ಪಡಿಸಿದೆ. ಈ ರೀತಿಯ ಕಾರ್ಯಕ್ರಮ ಬೆಂಗಳೂರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿದೆ ಎಂದರು.
ಅದಲ್ಲದೆ ಇನ್ನೂ ಕೆಲವು ನಾಗರಿಕರು ಕೇವಲ 5-10 ನಿಮಿಷಗಳಲ್ಲಿ ಇ-ಖಾತಾ ಲಭಿಸಿತು ಎಂದರೆ, ಮತ್ತೊಬ್ಬ ಆಸ್ತಿದಾರರು ಕೆಲವೇ ನಿಮಿಷಗಳಲ್ಲಿಇ-ಖಾತಾ ಪಡೆಯಲು ಅನುಕೂಲವಾಗುವಂತೆ ಮಾಡಿದ್ದಕ್ಕೆ ಪಾಲಿಕೆಗೆ ಧನ್ಯವಾದ ತಿಳಿಸಿದರು. ಮತ್ತೋರ್ವ ನಾಗರಿಕರು ತಮ್ಮ ಹಲವು ವರ್ಷಗಳ ಇ-ಖಾತಾ ಮಾಡಿಸಿಕೊಳ್ಳುವ ಇಚ್ಛೆ ತ್ವರಿತವಾಗಿ ಈಡೇರಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ
ಪುಲಕೇಶಿನಗರದ ಪಾಲಿಕೆಯ ಬಾಲಿಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಅಭಿಯಾನದ ಸ್ಥಳಕ್ಕೆ ಶಾಸಕರಾದ ಎ.ಸಿ ಶ್ರೀನಿವಾಸ್ ಅವರು ಭೇಟಿ ನೀಡಿ ಇ-ಖಾತಾ ವಿತರಿಸಿದರು. ಉತ್ತರ ನಗರ ಪಾಲಿಕೆ 12 ಸ್ಥಳಗಳಲ್ಲಿ ಅಭಿಯಾನ ನಡೆಸಿದ್ದು, ಮಾರುತಿ ಸೇವಾನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಆಯೋಜಿದ್ದ ಕೇಂದ್ರಕ್ಕೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಜಂಟಿ ಆಯುಕ್ತರು ಭೇಟಿ ನೀಡಿ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಇ-ಖಾತಾ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿರುವ ಸಲುವಾಗಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಾಗರಿಕರೊಬ್ಬರು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಹಲವಾರು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆ
ಪೂರ್ವ ನಗರ ಪಾಲಿಕೆ 6 ಸ್ಥಳಗಳಲ್ಲಿ ಅಭಿಯಾನ ನಡೆದಿದ್ದು, ಮಹದೇವಪುರ ಕ್ಷೇತ್ರದಲ್ಲಿ ಆಯೋಜಿಸಿದ್ದ ಮೂರೂ ಸ್ಥಳಗಳಿಗೂ ಶಾಸಕಿ ಮಂಜುಳಾ ಅರವಿಂದ ಲಿಂಬಾಬಳಿ ಅವರು ಭೇಟಿ ನೀಡಿ ನಾಗರಿಕೊಂದಿಗೆ ಒಡನಾಟ ನಡೆಸಿ ಅಂತಿಮ ಇ-ಖಾತಾಗಳನ್ನು ವಿತರಿಸಿದರು. ಹೆಚ್.ಎ.ಎಲ್ ನ ಎಸ್.ಟಿ.ಸಿ ಫಾಲಿಟೆಕ್ನಿಕ್ ಗೆ ರಾಜ್ಯ ಸಭಾ ಸದಸ್ಯರಾದ ನಾರಾಯಣಸ್ವಾಮಿ ಅವರು ಭೇಟಿ ನೀಡಿ ಅಂತಿಮ ಇ-ಖಾತಾ ವಿತರಿಸಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ
ಕೇಂದ್ರ ನಗರ ಪಾಲಿಕೆ 12 ಸ್ಥಳಗಳಲ್ಲಿ ಅಭಿಯಾನ ನಡೆದಿದ್ದುಈ ಅಭಿಯಾನದಿಂದ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಪ್ರಯೋಜನವಾಗಲಿದೆ. ಸರಕಾರದ ಆರನೇ ಗ್ಯಾರಂಟಿಯಾದ ಖಾತೆ ಪರಿವರ್ತನೆಯ ಸದುಪಯೋಗವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಸ್ತಿದಾರರೊಬ್ಬರು ಹೇಳಿದರು. ಗಾಂಧಿನಗರ ಕ್ಷೇತ್ರದ ಆರ್. ಗುಂಡೂರಾವ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಭೂ ಗ್ಯಾರಂಟಿ ಉಪಕ್ರಮದ "ನನ್ನ ಇ ಖಾತಾ, ನನ್ನ ಹಕ್ಕು" ಕಾರ್ಯಕ್ರಮವನ್ನು ಕೇಂದ್ರ ನಗರ ಪಾಲಿಕೆಯ ಕಂದಾಯ ಅಪರ ಆಯುಕ್ತರಾದ ರಂಗನಾಥ್ ಅವರ ನೇತೃತ್ವದಲ್ಲಿ ನಡೆಯಿತು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ಸ್ಥಳಗಳಲ್ಲಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯನಗರದ ಹಂಪಿನಗರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ ಇ-ಖಾತಾ ವಿತರಣೆ ಕಾರ್ಯಕ್ರಮದಲ್ಲಿ ವಿಜಯನಗರ ಶಾಸಕರಾದ ಎಂ. ಕೃಷ್ಣಪ್ಪರವರು ಆಸ್ತಿ ಮಾಲೀಕರಿಗೆ ಇ-ಖಾತಾ ವಿತರಿಸಿದರು. ಗೋವಿಂದರಾಜನಗರದ ಜ್ಞಾನಸೌಧದಲ್ಲಿ ಆಯೋಜಿಸಿದ ಇ-ಖಾತೆ ವಿತರಣೆ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಇ-ಖಾತಾ ವಿತರಿಸಿದರು.
ಮಹಾಲಕ್ಷ್ಮೀಪುರ ಕಂದಾಯ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಯ್ಯರವರು ಇ-ಖಾತಾ ವಿತರಿಸಿದರು. ಮಲ್ಲೇಶ್ವರಂನ ಕಂದಾಯ ಕಚೇರಿಯಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣರವರು ಇ-ಖಾತಾ ವಿತರಿಸಿದರು.
ಆಯುಕ್ತರುಗಳ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ಯಶಸ್ವಿ
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಆಯುಕ್ತರುಗಳ ಮೇಲ್ವಿಚಾರಣೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಪಾಲಿಕೆಯಿಂದ ಮಾಡಲಾಗಿದ್ದಂತಹ ಏಕ ಗವಾಕ್ಷಿ ವ್ಯವಸ್ಥೆಯನ್ನು ನಾಗರಿಕರು ಶ್ಲಾಘಿಸಿದರು ಮತ್ತು ಮೇಳದಲ್ಲಿ ಸಿಗುತ್ತಿರುವ ತ್ವರಿತ ಸೇವೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಗೆಹರಿಯದಿದ್ದ ಸಮಸ್ಯೆಗಳು ಮತ್ತು ಬಾಕಿ ಉಳಿದಿದ್ದ ಕೆಲಸಗಳು ಈ "ಇ-ಖಾತಾ ಮೇಳ"ದಲ್ಲಿ ಅತ್ಯಂತ ವೇಗವಾಗಿ ಬಗೆಹರಿದಿವೆ ಎಂದು ಹಲವು ನಾಗರಿಕರು ತಿಳಿಸಿದರು.
ಒಂದೇ ಸೂರಿನಡಿ ಯಾವುದೇ ಅಡಚಣೆಯಿಲ್ಲದೆ ಇ-ಖಾತಾಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತಿರುವುದಕ್ಕೆ ಸಾರ್ವಜನಿಕರಿಂದ "ಇ-ಖಾತಾ ಮೇಳ"ಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications