Bhadra Dam: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಪ್ರತಿದಿನ ನೀರು ಬಿಡುಗಡೆ
Bhadra Dam: ಇದೀಗ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಕೆಲವೆಡೆ ಈಗಾಗಲೇ ಕುಡಿಯುವ ನೀರಿನ ಅಭಾವ ಎದುರಾಗಿದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಸಹ ಕಂಡುಕೊಳ್ಳಲಾಗಿದೆ. ಈ ನಡುವೆಯೇ ಇದೀಗ ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿ ಪಾತ್ರದ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರನ್ನು ಪೂರೈಸಲು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲು ನಿರ್ಧರಿಸಲಾಗಿದೆ.
ತುಂಗಭದ್ರಾ ನದಿ ನೀರಿಗೆ ಅವಲಂಬಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಮೇ 18 ರಿಂದ 23ರ ವರೆಗೆ ಪ್ರತಿದಿನ 2,000 ಕ್ಯೂಸೆಕ್‌ನಂತೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲಾಗುವುದು. ನದಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಹಿನ್ನೆಲೆ ನದಿಯ ದಂಡೆಯ ಕೆಳಮಟ್ಟದಲ್ಲಿ ಸಾರ್ವಜನಿಕರ ಓಡಾಟಕ್ಕೆ ಕಡ್ಡಾಯವಾಗಿ ನಿಷೇಧ ಹೇರಲಾಗಿದೆ.


ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ
ನದಿ ಪಾತ್ರದಲ್ಲಿ ದನಕರುಗಳನ್ನು ಮೇಯಿಸುವುದು, ತೋಟಗಾರಿಕೆ ಮಾಡುವುದು ಮುಂತಾದ ಚಟುವಟಿಕೆಗಳನ್ನು ಮಾಡಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ನೀರು ಹರಿಸುವ ಈ ಅವಧಿಯಲ್ಲಿ ನದಿ ದಂಡೆಯ ಪ್ರದೇಶಗಳಲ್ಲಿ ರೈತರು ಅಳವಡಿಸಿರುವ ಪಂಪ್‌ಸೆಟ್‌ಗಳ ಮೂಲಕ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರು ಹಾಗೂ ರೈತರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕುಡಿಯುವ ನೀರಿಗಾಗಿ ಕಾಯುತ್ತಿದ್ದ ಈ ಭಾಗಗಳ ಜನರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಸಾರ್ವಜನಿಕರು ಮತ್ತು ರೈತರಿಗೆ ಪ್ರಮುಖ ಸೂಚನೆಗಳು
* ನದಿ ಪ್ರದೇಶಕ್ಕೆ ಪ್ರವೇಶ ನಿಷೇಧ: ನದಿ ದಂಡೆಯ ತಗ್ಗು ಪ್ರದೇಶಗಳಲ್ಲಿ ಸಾರ್ವಜನಿಕರು ಓಡಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
* ನದಿ ತೀರದಲ್ಲಿ ದನಕರುಗಳನ್ನು ಮೇಯಿಸುವುದು ಅಥವಾ ಯಾವುದೇ ತೋಟಗಾರಿಕೆ ಕೆಲಸಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
* ಪಂಪ್‌ಸೆಟ್ ಬಳಕೆ ನಿಷೇಧ: ನೀರು ಹರಿಸುವ ಅವಧಿಯಲ್ಲಿ ನದಿ ದಂಡೆಯ ಇಕ್ಕೆಲಗಳಲ್ಲಿ ರೈತರು ತಮ್ಮ ಪಂಪ್‌ಸೆಟ್‌ಗಳ ಮೂಲಕ ನೀರೆತ್ತುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.












Click it and Unblock the Notifications