ಜ್ಞಾನ ಭಾರತಿ ಬಳಿ ಬಿಎಂಟಿಸಿ ಬಸ್ ಭಸ್ಮ

ಮೆಜಿಸ್ಟಿಕ್ ನ ಕೆಂಪೇಗೌಡ ನಿಲ್ದಾಣ ದಿಂದ 19 ಎ ಫ್ಲಾಟ್ ಫಾರ್ಮ್ ನಿಂದ ದೊಡ್ಡಬಸ್ತಿ ಕಡೆಗೆ ಹೊರಟ್ಟಿದ್ದ 235 ಬಿ ಸಂಖ್ಯೆಯ ಬಿಎಂಟಿಸಿ ಬಸ್ ದುರಂತಕ್ಕೀಡಾದ ವಾಹನವಾಗಿದೆ. ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಆಡಳಿತ ಕಚೇರಿಯ ಮುಂದೆ ಚಲಿಸುತ್ತಿದ್ದಾಗ ಹೊಗೆ ಹಾಗೂ ಕಿಡಿ ಕಾಣಿಸಿಕೊಂಡ ಕಾರಣ, ಬಸ್ ಚಾಲಕ ಬಸ್ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಯಲು ಹೇಳಿದ್ದಾನೆ.
ಕಿಡಿ ಬಂದ ಕಾರಣ ತಿಳಿಯಲು ಚಾಲಕ ಹಾಗೂ ನಿರ್ವಾಹಕರಿಬ್ಬರು ಇಂಜಿನ್ ಬ್ಯಾನೆಟ್ ತೆರೆದು ನೋಡಿದ್ದಾರೆ. ಬೆಂಕಿಯ ಉರಿ ಹೆಚ್ಚುತ್ತಿರುವ ಸೂಚನೆ ಕಂಡು ಬಂದ ಕಾರಣ, ಇಬ್ಬರೂ ಕೆಳಗಿಳಿದಿದ್ದಾರೆ. ನಂತರ ಬೆಂಕಿ ಬಸ್ ಪೂರ್ತಿ ಆವರಿಸಿಕೊಂಡು ಸುಟ್ಟು ಕರಕಲಾಗಿದೆ. ಹತ್ತಿರದಲ್ಲೇ ಕ್ರಿಕೆಟ್ ಆಡುತ್ತಿದ್ದ ಯುವಕರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಅನಾಹುತದ ಬಗ್ಗೆ ತಿಳಿಸಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ದವರು ಬೆಂಕಿ ನಂದಿಸಿದ್ದಾರೆ. ಆದರೆ ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆಯಿಂದ ಸುಮಾರು 25 ಪ್ರಯಾಣಿಕರ ಜೀವ ಉಳಿದಿದೆ. 16 ನೇ ಡಿಪೋಗೆ ಸೇರಿದ ಬಸ್ ಭಸ್ಮವಾಗಲು ತಾಂತ್ರಿಕ ದೋಷವೇ ಕಾರಣ ಎಂದಿರುವ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.












Click it and Unblock the Notifications