• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಹಿತಾಕ್ಷನ ಮಾಸದ ವಿಮೋಚನಾ ಕಥೆ

By * ಅಶ್ರಫ್ ಮಂಜ್ರಾಬಾದ್. ಸಕಲೇಶಪುರ
|
ರಿಯಾದ್, ಜೂ.14: ಕಳೆದ ಎಂಟು ತಿಂಗಳಿಂದ ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಮಂಗಳೂರು ದೇರೆಬೈಲು ಕೊಂಚಾಡಿ ನಿವಾಸಿ ಲೋಹಿತಾಕ್ಷ ಮಂಗಳೂರು ಅಸೋಸಿಯೇಶನ್ ಫಾರ್ ಸೌದಿ ಅರೇಬಿಯಾ (MASA) ಮತ್ತು ಇತರ ಕೆಲವು ಸಮಾನ ಮನಸ್ಕ ಸಂಘಟನೆಗಳ ನೆರವಿನೊಂದಿಗೆ ಬಿಡುಗಡೆಗೊಂಡಿದ್ದಾರೆ.

ಕರ್ನಾಟಕದಲ್ಲಿ ನಡೆದ ಹಾಲಪ್ಪ, ನಿತ್ಯಾನಂದರ ರಾಸಲೀಲೆಗಳ ಸುದ್ದಿಗಳ ಭರಾಟೆಯಲ್ಲಿರುವ ಕನ್ನಡ ನಾಡಿನ ಪತ್ರಿಕೆಗಳಿಗೆ ಈ ವಿಷಯ ಒಂದು ದೊಡ್ಡ ಸುದ್ಧಿಯಾಗಿ ಕಾಣಲೇ ಇಲ್ಲ. ಗಲ್ಫ್ ನಾಡಿನಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿರುವ ಕನ್ನಡಿಗರ ಸಂಘಗಳು ಮಾಡಿದ ಈ ಕೆಲಸ ಅಷ್ಟು ಸುಲಭವಾಗಿ ತಳ್ಳಿಬಿಡುವಂತಹದ್ದಲ್ಲ.

ಗಲ್ಫ್ ನಾಡಿನಲ್ಲಿ ಸದಾ ಒತ್ತಡದ ನಡುವೆ ಬಿಡುವಿಲ್ಲದೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ವಿದೇಶಿಯರು ಸಂಘಟಿತರಾಗುವುದು ಅಷ್ಟೊಂದು ಸುಲಭವಲ್ಲ. ಹಾಗೇನಾದರೂ ಸಂಘಟಿತವಾಗಿದ್ದರೆ ಅದು ಹೆಚ್ಚಿನದಾಗಿ ಕೇರಳೀಯರು. ತಮ್ಮ ರಾಜ್ಯದ ಜನರಿಗೆ ಏನಾದರೂ ಆದರೆ ಅದಕ್ಕೆ ಅತೀ ಶೀಘ್ರ ಸ್ಪಂದಿಸುವ ಮಲಯಾಳಿ ಸಂಘಟನೆಗಳನ್ನು ನಾನು ನೋಡಿದ್ದೇನೆ.

ಸಂಘಟಿತ ಹೋರಾಟಕ್ಕೆ ಜಯ:ಅದೇ ರೀತಿ ಈಗ ಮಾಸಾದ ನೇತೃತ್ವದಲ್ಲಿ ಸೌದಿ ಅರೇಬಿಯಾ ಮತ್ತು ಯು.ಎ.ಇ. ಯ ಕೆಲವು ಸಂಘಟನೆಗಳು ಒಂದಾಗಿ ಲೋಹಿತಾಕ್ಷರನ್ನು ಬಿಡುಗಡೆ ಮಾಡಿಸಿದ್ದು ಕನ್ನಡಿಗರು ಒಂದಾದಲ್ಲಿ ಏನನ್ನೂ ಸಾಧಿಸಿಯಾರು ಎಂಬ ಸಂದೇಶವನ್ನು ಅಸಂಘಟಿತ ಗಲ್ಫ್ ಕನ್ನಡಿಗರ ಮುಂದೆ ಸಾಧಿಸಿ ತೋರಿಸುವುದರ ಜೊತೆಗೆ ಕನ್ನಡಿಗರನ್ನು ಸಂಘಟಿತರಾಗುವಂತೆ ಪ್ರೇರೇಪಿಸಿದೆ.

ಅಸಲಿಗೆ ಲೋಹಿತಾಕ್ಷರನ್ನು ಜೈಲಿಗೆ ತಳ್ಳಲು ಕಾರಣವೇನು ಎಂದು ನೋಡಿದರೆ ವಿದೇಶಿಯರ ಜೊತೆ ಇಲ್ಲಿ ಎಂತಹ ಅನ್ಯಾಯಗಳು ಕೆಲವೊಮ್ಮೆ ನಡೆಯುತ್ತವೆ ಎಂಬ ವಾಸ್ತವ ವಿಚಾರವನ್ನು ನಮ್ಮ ಮುಂದಿಡುತ್ತವೆ. ಕಳೆದ ಹದಿನೈದು ವರ್ಷಗಳಿಂದ ಸೌದಿ ಅರೇಬಿಯಾದ ಬಂದರು ನಗರ ದಮ್ಮಾಮಿನಲ್ಲಿ ವೃತ್ತಿಯಲ್ಲಿ ಕ್ರೇನ್ ಚಾಲಕರಾಗಿ ದುಡಿಯುತ್ತಿರುವ ಲೋಹಿತಾಕ್ಷ ತಮ್ಮ ಕಷ್ಟದ ಕೆಲಸದ ನಡುವೆಯೂ ನಿಷ್ಠೆಯಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು.

ಆದರೆ ಈ ಹದಿನೈದು ವರ್ಷದಲ್ಲಿ ನಡೆಯದ ಅನೀರೀಕ್ಷಿತ ಅಪಘಾತವೊಂದು ಅವರ ಜೀವನದಲ್ಲಿ ನಡೆಯಿತು. ಅವರು ನಿಯಂತ್ರಿಸುತ್ತಿದ್ದ ಕ್ರೇನ್ ಅಕಸ್ಮಾತ್ತಾಗಿ ಅವರ ನಿಯಂತ್ರಣ ತಪ್ಪಿ ಹೊಂಡವೊಂದಕ್ಕೆ ಬಿದ್ದು ಪುಡಿಪುಡಿಯಾಯಿತು.

ಏನೋ ದೇವರ ದಯೆ ಲೋಹಿತಾಕ್ಷ ಯಾವುದೇ ರೀತಿಯ ಅಪಾಯವಿಲ್ಲದೆ ಪಾರಾದರು. ಆದರೆ ಇಲ್ಲಿ ವಿಧಿ ಅವರ ಬೆನ್ನು ಬಿಡಲಿಲ್ಲ. ಮಾಲೀಕ ತನ್ನ ಕ್ರೇನ್ ಪುಡಿಯಾದ ಬಗ್ಗೆ ಇವರ ವಿರುದ್ಧವೇ ದೂರು ಕೊಟ್ಟ. ದೂರಿನ ಪ್ರಕಾರ ಹಿಂದು ಮುಂದು ನೋಡದೆ ಪೊಲೀಸರು ಇವರನ್ನು ಬಂಧಿಸಿ ಜೈಲಿಗೆ ತಳ್ಳಿದರು.

ಹರಕೆಯ ಕುರಿಯಾದ ಲೋಹಿತಾಕ್ಷ:ವಾಸ್ತವವಾಗಿ ನೋಡುವುದಾದರೆ ಈ ಅಪಘಾತದಲ್ಲಿ ಲೋಹಿತಾಕ್ಷರದೇನೂ ತಪ್ಪಿಲ್ಲ. ನಡೆಯಬೇಕಾಗಿದ್ದ ಒಂದು ದುರ್ಘಟನೆ ಅನೀರೀಕ್ಷಿತವಾಗಿ ನಡೆದು ಹೋಗಿತ್ತು. ಆದರೆ ಇದರಲ್ಲಿ ಸುಮ್ಮನೆ ಲೋಹಿತಾಕ್ಷ ಬಲಿಪಶುವಾದರು. ಆನಂತರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕ್ರೇನ್ ಮಾಲೀಕನಿಗೆ ಪರಿಹಾರವಾಗಿ ಲೋಹಿತಾಕ್ಷ ಹತ್ತು ಲಕ್ಷ ರೂಪಾಯಿ ಅಂದರೆ ಎಂಬತ್ತು ಸಾವಿರ ರಿಯಾಲ್ ಪರಿಹಾರ ಕೊಡಬೇಕೆಂದು ತೀರ್ಪಾಯಿತು.

ಹೇಳಿ ಕೇಳಿ ಲೋಹಿತಾಕ್ಷ ಕಡಿಮೆ ಸಂಬಳಕ್ಕೆ ದುಡಿಯುವ ಒಬ್ಬ ಬಡ ಕಾರ್ಮಿಕ . ಎಲ್ಲಿಂದ ಹೊಂದಿಸಿಯಾರು ಅಷ್ಟೊಂದು ದೊಡ್ಡ ಮೊತ್ತವನ್ನು ?. ಅದಲ್ಲದೆ ಎಂಟು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಇಂತಹವರಿಗೆ ಹತ್ತು ಲಕ್ಷ ರೂಪಾಯಿ ದಂಡ ಹಾಕಿದರೆ ಅವರು ಏನು ಮಾಡಿಯಾರು ? ಲೋಹಿತಾಕ್ಷ ಜೀವನದ ಆಸೆಯನ್ನೇ ಬಿಟ್ಟರು. ಒಮ್ಮೆ ಮನೆಗೆ ದೂರವಾಣಿ ಕರೆ ಮಾಡಿದ ಅವರು ತನ್ನ ಬರುವಿಕೆಯ ಬಗೆಗಿನ ಆಸೆಯನ್ನು ಬಿಟ್ಟುಬಿಡುವಂತೆ ಹೇಳಿದ್ದರಂತೆ.

ಆದರೆ ಈ ವಿಷಯ ತಿಳಿದ masa ದ ಅಧ್ಯಕ್ಷ ಮಾಧವ ಅಮೀನ್ ಜಾಗೃತರಾದರು.ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಸೇವೆಯಲ್ಲಿ ಸದಾ ಮುಂದೆ ನಿಲ್ಲುವ ಮಾಧವ ಅಮೀನ್ ತನ್ನ ಸಂಘಟನೆಯ ಉಪಾಧ್ಯಕ್ಷರಾದ ರವಿ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಹಾಗೂ ಪಧಾದಿಕಾರಿಗಳಾದ ಮಧುಕರ ದೇವಾಡಿಗ, ಬಾಬು ಕೋಟೆಬೆಟ್ಟು, ದಯಾನಂದ ಶ್ರೀಯಾನ್, ಅಲ್ ರಾಜಿ ಬ್ಯಾಂಕಿನ ವಸಂತ್ ಕುಮಾರ್ ಹೆಗ್ಡೆ ಅವರೊಂದಿಗೆ ಸೇರಿ ಈ ವಿಷಯದಲ್ಲಿ ಲೋಹಿತಾಕ್ಷರಿಗೆ ನೆರವಾಗಬೇಕೆಂದು ರಂಗಕ್ಕಿಳಿದರು.

ಜೊತೆಗೆ ಇವರು ತಮ್ಮ ಸಂಘಟನೆಯ ಪರವಾಗಿ ಸ್ವಲ್ಪ ಮಟ್ಟಿಗಿನ ಹಣವನ್ನು ಸಂಗ್ರಹಿಸಿದರು. ಇವರ ಈ ಕೆಲಸವನ್ನು ಗಮನಿಸಿದ ಕರಾವಳಿಯ ಜನತೆ ಹಾಗೂ ಸಂಘ ಸಂಸ್ಥೆಗಳು ಇವರ ಬೆಂಬಲಕ್ಕೆ ನಿಂತು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣ ಸಂಗ್ರಹಿಸಿ ಕೊಟ್ಟವು.

ರಿಯಾದ್ ಕರಾವಳಿ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ರೈ, ರಿಯಾದ್ ಬಂಟರ ಸಂಘದ ಮೋಹನದಾಸ್ ಶೆಟ್ಟಿ, ಭಟ್ಕಳ ಸಮಾಜದ ಅರ್ಶದ್, ಜುಬೈರ್, ಫಯಾಜ್, ಮಂಗಳೂರಿನ ರೋಯಿಸ್ತನ್ ಪ್ರಭು ಹಾಗೂ ಇತರರು ತಮ್ಮ ಕೈಲಾದ ನೆರವು ನೀಡುವುದರ ಜೊತೆಗೆ ಈ ಕಾರ್ಯದಲ್ಲಿ ತಮ್ಮ ಸಹಕಾರವನ್ನೂ ಕೊಟ್ಟರು. ಇತ್ತ ಸೌದಿ ಅರೇಬಿಯಾದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ ಅತ್ತ ಯು.ಎ.ಇ. ಯಲ್ಲಿ ಶೋಧನ್ ಪ್ರಸಾದ್ ಈ ವಿಷಯದಲ್ಲಿ ರಂಗಕ್ಕಿಳಿದಿದ್ದರು.

ಮಿತ್ರ ಅಫ್ರೋಜ್ ಅಸ್ಸಾದಿ ಜೊತೆ ನಮ್ಮ ತುಳುವೆರ್, ದೇವಾಡಿಗ ಸಂಘ ಈ ಕಾರ್ಯದಲ್ಲಿ ಇವರ ಬೆಂಬಲಕ್ಕೆ ನಿಂತವು. ಈ ಎಲ್ಲಾ ಸಹೃದಯರ ನೆರವಿನಿಂದ ಕೊನೆಗೂ ಜೂನ್ ಎಂಟರಂದು ಲೋಹಿತಾಕ್ಷರ ಬಿಡುಗಡೆಯಾಯಿತು. ಲೋಹಿತಾಕ್ಷರನ್ನು ಆದರದಿಂದ ಬರಮಾಡಿಕೊಂಡ MASA ಸಂಘಟನೆಯ ಪಧಾದಿಕಾರಿಗಳು ಅವರನ್ನು ಎರಡೇ ದಿನಗಳಲ್ಲಿ ತಾಯ್ನಾಡಾದ ಮಂಗಳೂರಿಗೆ ಬೀಳ್ಕೊಟ್ಟರು.

ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದ ಒಬ್ಬ ಅನಿವಾಸಿ ಕನ್ನಡಿಗನ ನೆರವಿಗೆ ಧಾವಿಸಿದ MASA ದ ಪದಾಧಿಕಾರಿಗಳಿಗೆ ಅವರ ಬೆಂಬಲಕ್ಕೆ ನಿಂತ ಕೊಲ್ಲಿ ರಾಷ್ಟ್ರದ ಅನಿವಾಸಿ ಕನ್ನಡ ಸಂಘ ಸಂಸ್ಥೆಗಳಿಗೆ ಮತ್ತು ನಾಗರೀಕರಿಗೆ, ಈ ವಿಷಯವನ್ನು ಜನರ ಮುಂದೆ ತಂದ ದಾಯ್ಜಿ ವರ್ಲ್ಡ್ ತಂಡಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನ ಕರ್ತವ್ಯ ಎಂದರೂ ತಪ್ಪಾಗಲಾರದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more