ವಿಶ್ವನಾಥನ್ ಆನಂದ್ ಗೆ ವಿಶ್ವ ಚೆಸ್ ಮುಕುಟ

6.5 ಪಾಯಿಂಟ್ ಗಳಿಸಿದ್ದ 40ರ ಹರೆಯದ ಆನಂದ್ ಮಂಗಳವಾರ ನಡೆದ ಅಂತಿಮ ಹಣಾಹಣಿಯಲ್ಲಿ ಬಲ್ಗೇರಿಯಾದ ಗ್ರಾಂಡ್ ಮಾಸ್ಟರ್ ವೆಸೆಲಿನ್ ಟೊಪಲೋವ್( 5.5 ಪಾಯಿಂಟ್) ಅವರನ್ನು ಸೋಲಿಸಿದರು. ಇದಕ್ಕೂ ಮೊದಲು ಈ ಇಬ್ಬರು ಆಟಗಾರರೂ ಕೂಡಾ 5.5 ಪಾಯಿಂಟ್ ಗಳೊಂದಿಗೆ ಫೈನಲ್ ತಲುಪಿದ್ದರು. ಹಾಗಾಗಿ ಸಮಬಲದ ಹೋರಾಟದ ನಿರೀಕ್ಷೆಯಿತ್ತು.
ಆದರೆ, ಕಪ್ಪುಕಾಯಿಗಳಿಂದ ಆಡಿದ ಆನಂದ್ ವಿರುದ್ಧ ಬಲ್ಗೇರಿಯಾದ ಆಟಗಾರ 56 ನೇ ನಡೆಯ ನಂತರ ಸೊಲೊಪ್ಪಿಕೊಂಡರು. ಈ ಚಾಂಪಿಯನ್‌ಶಿಪ್ 12 ಪಂದ್ಯಗಳನ್ನು ಒಳಗೊಂಡಿತ್ತು. ಆನಂದ್ ಎರಡು, ಮೂರು ಹಾಗೂ 12ನೇ ಪಂದ್ಯವನ್ನು ಗೆದ್ದುಕೊಂಡಿದ್ದರು. ಒಂದು ಹಾಗೂ ಎಂಟನೇ ಪಂದ್ಯ ಟಪಲೋವ್ ಪಾಲಾಗಿತ್ತು. ಉಳಿದ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು.
2000ರಲ್ಲಿ ಟೆಹರಾನ್ ನಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿದ್ದ ಆನಂದ್ ನಂತರ 2007ರಲ್ಲೂ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದರು. 2008ರಲ್ಲಿ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಭಾರತಕ್ಕೆ ಕೀರ್ತಿ ತಂದಿದ್ದರು. ಐಸ್ ಲ್ಯಾಂಡ್ ನಲ್ಲಿ ಜ್ವಾಲಾಮುಖಿಯಿಂದ ಉಂಟಾಗಿದ್ದ ಬೂದಿ ಮೋಡದ ಕಾರಣ ಆನಂದ್, ಸೋಫಿಯಾ ನಗರಕ್ಕೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದೆ ರಸ್ತೆ ಮೂಲಕ ವಾಹನದಲ್ಲಿ ಸತತ 40 ಗಂಟೆ ಪ್ರಯಾಣಿಸಿ ತಲುಪಿದ್ದರು.












Click it and Unblock the Notifications