ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿ ಖಜಾನೆ ತುಂಬಾ ಹೆಗ್ಗಣಗಳು!!!

By *ಚಂದ್ರಶೇಖರ್ ಬಿ., ಸವಣೂರ
|
Google Oneindia Kannada News

Karave protest against post office fraud ,Savanur
ಸವಣೂರ,ಏ.11 : ಕಳೆದ 50 ವರ್ಷಗಳಿಂದ ದೇಶದಾಧ್ಯಂತ ಜನರ ವಿಶ್ವಾಸವನ್ನು ಗಳಿಸಿರುವ ಅಂಚೆ ಇಲಾಖೆಯಲ್ಲಿನ ನೂನ್ಯತೆಗಳೂ ಬಹಿರಂಗಗೊಂಡಿದ್ದು, ಇಲಾಖೆಯ ಸಿಬ್ಬಂದಿಗಳೇ ಗ್ರಾಹಕರು ಉಳಿತಾಯ ಖಾತೆಯಲ್ಲಿ ತೊಡಗಿಸಿದ್ದ ಲಕ್ಷಾಂತರ ರೂ ಹಣವನ್ನು ಲಪಟಾಯಿಸಿ ನಾಪತ್ತೆಯಾಗಿರುವ ಘಟನೆ ಸವಣೂರಿನಲ್ಲಿ ಜರುಗಿದೆ. ಇದನ್ನು ಪ್ರತಿಭಟಿಸಿದ ಸಾರ್ವಜನಿಕರೂ ಅಂಚೆ ಕಛೇರಿಯನ್ನು ಕೆಲಕಾಲ ಬಂದ್ ಮಾಡಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಇಲಾಖೆಯ ಲೆಕ್ಕಪರಿಶೋಧಕರು ಈ ಹಗರಣದ ತಪಾಸಣೆಯನ್ನು ಕೈಗೊಂಡಿದ್ದು, ಇಂದಿಗೂ ಎತ್ತಿಹಾಕಲಾಗಿರುವ ಹಣದ ಒಟ್ಟೂ ಮೊತ್ತ ಸ್ಪಷ್ಟಗೊಂಡಿಲ್ಲ. ಆರಂಭಿಕ ಹಂತದಲ್ಲಿ 6 ಲಕ್ಷ ರೂಗಳ ವ್ಯತ್ಯಾಸವನ್ನು ಪತ್ತೆ ಮಾಡಲಾಗಿದ್ದು, ಸವಣೂರ ಅಂಚೆ ಇಲಾಖೆಯಲ್ಲಿ 95,000 ಉಳಿತಾಯ ಖಾತೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಅಂಚೆ ಇಲಾಖೆ ಗಣಕೀಕೃತಗೊಂಡ ಬಳಿಕ, ಹೊಸ ತಂತ್ರಜ್ಞಾನವನ್ನು ವ್ಯವಸ್ಥಿತವಾಗಿ ದುರುಪಯೋಗ ಪಡಿಸಿಕೊಂಡಿರುವ ಇಲಾಖೆಯ ಗುಮಾಸ್ತ ಜಿ.ಎಸ್ ಜಾಲಣ್ಣನವರ್ ಲೆಕ್ಕಕ್ಕೆ ಸಿಗದ ರೀತಿಯಲ್ಲಿ ತನ್ನ ಕೈಚಳಕ ತೋರಿದ್ದಾನೆ. ಗ್ರಾಹಕರ ಪಾಸ್ ಬುಕ್ ಹಾಗೂ ಇಲಾಖೆಯ ದಾಖಲೆಗಳು ಪರಸ್ಪರ ತಾಳೆಯಾಗದಂತೆ ಜಾಗ್ರತೆ ವಹಿಸಿದ್ದು, ಇಲಾಖೆಯ ತಂತ್ರಜ್ಞರಿಗೂ ಈ ಹಗರಣ ಒಂದು ಸವಾಲಾಗಿ ಪರಿಣಮಿಸಿದೆ.

ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲನೆಯನ್ನು ಕೈಗೊಳ್ಳಲೂ ಒಂದು ತಿಂಗಳ ಕಾಲಾವಕಾಶ ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳಂಕಿತ ಸಿಬ್ಬಂದಿ ಜಿ.ಎಸ್ ಜಾಲಣ್ಣನವರ್ ಮಾ.27 ರಿಂದ ಎರಡು ದಿನಗಳ ರಜೆ ಪಡೆದುಕೊಂಡಿದ್ದು, ಬಳಿಕ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿದ್ದಾರೆ. ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಸಂಬಂಧಿಸಿದ ಕೆಲವು ದಾಖಲೆಗಳೂ ನಾಪತ್ತೆಯಾಗಿದೆ ಎನ್ನಲಾಗಿದೆ.

ಘಟನೆಯ ವಿವರ :
ಶನಿವಾರ ಸವಣೂರಿನ ಅಂಚೆ ಕಛೇರಿಯ ಉಳಿತಾಯ ಖಾತೆಯಲ್ಲಿನ ತಮ್ಮ ಹಣವನ್ನು ಪಡೆದುಕೊಳ್ಳಲು ತೆರಳಿದ್ದ ಕೆಲವು ಗ್ರಾಹಕರಿಗೆ ಅನಿರೀಕ್ಷಿತವಾದ ಆಘಾತ ಎದುರಾಯಿತು. ತಮ್ಮ ಖಾತೆಯಲ್ಲಿದ್ದ ಲಕ್ಷಾಂತರ ರೂ ಮೊತ್ತ ಏಕಾಏಕಿ ಬರಿದಾಗಿದ್ದು ಅವರನ್ನು ದಿಗ್ಭ್ರಮೆಗೊಳಿಸಿತು. ಈ ಬಗ್ಗೆ ಅಂಚೆ ಕಛೇರಿಯ ಸಿಬ್ಬಂದಿಯೂ ಸೂಕ್ತ ಸ್ಪಂದನೆ ತೋರದ ಕಾರಣ ಅವರ ಆತಂಕ ದುಪ್ಪಟ್ಟುಗೊಂಡಿತು. ಇದರೊಂದಿಗೆ ಇಲಾಖೆಯೂ ಗ್ರಾಹಕರ ಪಾಸಬುಕ್‌ಗಳನ್ನು ಪಡೆದುಕೊಳ್ಳುವ ಮೂಲಕ ಅವರನ್ನು ನಿರಾಧಾರಗೊಳಿಸಿತು.

ಹತ್ತು ಹಲವಾರು ತುರ್ತು ಕಾರಣಗಳಿಗೆ ಹಣದ ಅವಶ್ಯಕತೆ ಇದ್ದ ಗ್ರಾಹಕರು, ಸಣ್ಣ ಉಳಿತಾಯ ಖಾತೆಯ ಎಜೆಂಟರು ಹಣ ಪಾವತಿಸುವಂತೆ ಗೋಗರೆದರೂ ಸ್ಪಂದಿಸದ ಇಲಾಖೆ, ಅವರನ್ನು ಸಂಪೂರ್ಣವಾಗಿ ಕಡೆಗಣಿಸಿತು. ನಿಗದಿತವಾದ ಸಮಯವನ್ನೂ ಸೂಚಿಸದೆ, ತನಿಖೆ ಪೂರ್ಣಗೊಂಡ ಬಳಿಕ ನಿಮ್ಮ ಹಣದ ಬಗ್ಗೆ ತಿಳಿಸುತ್ತೆವೆ ಎಂಬ ಹಾರಿಕೆಯ ಉತ್ತರವನ್ನೂ ಅಧಿಕಾರಿಗಳು ನೀಡಿದರು. ಈ ಹಂತದಲ್ಲಿ ತೀವ್ರ ಸ್ವರೂಪದ ಆತಂಕಕ್ಕೆ ಒಳಗಾದ ಮಹಿಳೆಯರು ಕಣ್ಣೀರು ಹಾಕಿದರೂ, ಅಧಿಕಾರಿಗಳು ತಮ್ಮ ಎಂದಿನ ಧೋರಣೆಯನ್ನು ಮುಂದುವರೆಸಿದರು.

ಪ್ರಕರಣದ ಬಗ್ಗೆ ಅರಿತುಕೊಂಡು ಅಂಚೆ ಕಛೇರಿಗೆ ಆಗಮಿಸಿದ ಸವಣೂರಿನ ತಹಶೀಲ್ದಾರ ಡಾ. ಪ್ರಶಾಂತ ನಾಲವಾರ, ಸಿಬ್ಬಂದಿಗಳಿಂದ ಆಗಿರುವ ಅವ್ಯವಹಾರಗಳಿಗೆ ಇಲಾಖೆ ಹೊಣೆಗಾರಿಕೆಯಾಗುತ್ತದೆ. ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಅಲ್ಪ ಪ್ರಮಾಣದ ಹಣವನ್ನಾದರೂ ಪಾವತಿಸಿ ಎಂದು ತಿಳಿಸಿದರು. ಮೋಸಕ್ಕೆ ಒಳಗಾದ ಗ್ರಾಹಕರಿಗೆ ಹಣ ಪಾವತಿಸಲು ಇಲಾಖೆಯ ಮೇಲಾಧಿಕಾರಿಗಳೂ ನಿರಾಕರಿಸಿದರು. ಈ ಬಗ್ಗೆ ಲಿಖಿತವಾದ ಉತ್ತರ ನೀಡಿದರೂ ಗ್ರಾಹಕರ ಆತಂಕ ದೂರವಾಗುತ್ತದೆ ಎಂದು ಅಧಿಕಾರಿಗಳಲ್ಲಿ ಕೋರಿದರೂ, ಲಿಖಿತ ಸ್ಪಷ್ಟೀಕರಣ ನೀಡಲೂ ಅಂಚೆ ಇಲಾಖೆ ಅಸಮ್ಮತಿಸಿತು.

ದಂಡೋಪಾಯ : ಸವಣೂರಿನ ಅಂಚೆ ಕಛೇರಿಯ ಬಾಗಿಲನ್ನು ಹಾಕುವ ಮೂಲಕವೇ ರಂಗ ಪ್ರವೇಶ ಮಾಡಿದ ಸವಣೂರಿನ ಜಯಕರ್ನಾಟಕ ಸಂಘಟನೆ, ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಮ್ಮದೇ ಆದ ರೀತಿಯಲ್ಲಿ ಅಧಿಕಾರಿಗಳೊಂದಿಗೆ ಸಂಭಾಷಣೆ ಕೈಗೊಂಡರು.

ಯಾವದೇ ಹಂತದಲ್ಲಿಯೂ ಅನ್ಯಾಯಕ್ಕೆ ಒಳಗಾದ ಗ್ರಾಹಕರಿಗೆ ಲಿಖಿತವಾದ ಉತ್ತರವನ್ನು ಅಂಚೆ ಇಲಾಖೆ ನೀಡಲೇಬೇಕು ಎಂದು ಪಟ್ಟ ಹಿಡಿದ ಕಾರ್ಯಕರ್ತರು, ಇಲಾಖೆಯ ಸಿಬ್ಬಂದಿಗಳಿಗೂ ದಿಗ್ಬಂಧನ ವಿಧಿಸಿದರು. ಕಾರ್ಯಕರ್ತರು ಇಲಾಖೆಯ ಅಧಿಕಾರಿಗಳೊಂದಿಗೆ ತೀವೃ ವಾಗ್ವಾದಕ್ಕೆ ಮುಂದಾಗುತ್ತಿದ್ದಂತೆ, ದೂರವಾಣಿಯಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ ಲೆಕ್ಕಪರಿಶೋಧಕರು ಗ್ರಾಹಕರಿಗೆ ಲಿಖಿತವಾದ ಉತ್ತರ ನೀಡಲು ಸಮ್ಮತಿಸಿದರು. ತಹಶೀಲ್ದಾರರ ಕೋರಿಕೆಯನ್ನೂ ಕಡೆಗಣಿಸಿದ್ದ ಅಂಚೆ ಇಲಾಖೆಯ ಅಧಿಕಾರಿಗಳು, ಅಂತಿಮವಾಗಿ ತಹಶೀಲ್ದಾರರಿಗೆ ತಮ್ಮ ಸ್ಪಷ್ಟೀಕರಣವನ್ನು ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X