ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆಂಟು ಇರಲಿ ಬಿಡಲಿ ಓದಿನತ್ತ ಗಮನವಿರಲಿ

By Prasad
|
Google Oneindia Kannada News

Students beware of showes and power cuts
ಬೆಂಗಳೂರು, ಮಾ. 31 : ಬಿಬಿಎಂಪಿ ಚುನಾವಣೆಯ ಕಾವಿನ ಜೊತೆ ಬೆಂಗಳೂರಿಗರ ಬೆವರಿಳಿಸಿದ್ದ ಸೂರ್ಯ ಮಾಮಾ ಇಂದು ಮೋಡದ ಮರೆಯಲ್ಲಿ ಅಡಗಿಕೊಂಡಿದ್ದಾನೆ. ಬಿರುಬಿಸಿಲಿನಲ್ಲಿ ನಗರವೆಲ್ಲ ಸುತ್ತಿ ಬಂದವನಿಗೆ ಒಮ್ಮೆಲೇ ಎಸಿ ರೂಮಲ್ಲಿ ಹೊಕ್ಕ ಅನುಭವ. ಇದಕ್ಕೆ ಕಾರಣ ನಗರದಲ್ಲಿ ಮಂಗಳವಾರ ಸಾಯಂಕಾಲ ಮತ್ತು ಬುಧವಾರ ಬೆಳಿಗ್ಗೆ ಸುರಿದ ಮಳೆ.

ಬುಧವಾರ ಸಾಯಂಕಾಲ ಎಂಟು ಗಂಟೆಯ ನಂತರ ಧಾರಾಕಾರವಾಗಿ ಸುರಿದು ರಸ್ತೆ ಸಂಚಾರಕರು ಪರದಾಡುವಂತೆ ಮಾಡಿತು. ಬಸ್ಸುಗಳಲ್ಲಿ ಓಡಾಡುವವರು ಬಚಾವಾದರು. ಆದರೆ, ದ್ವಿಚಕ್ರ ವಾಹನ ಚಾಲಕರು ಅಚಾನಕ್ಕಾಗಿ ಸುರಿದ ವರ್ಷದಾರೆಗೆ ನೆಂದು ಮನೆಸೇರುವಂತಾಯಿತು. ಸಾಲದೆಂಬಂತೆ ಇಂದು ಬೆಳಗಿನ ಜಾವ ಕೂಡ ಸುಮಾರು ಅರ್ಧ ಗಂಟೆ ಮಳೆ ಭೂರಮೆಯನ್ನು ತಣಿಸಿದೆ.

ಭಾನುವಾರ 38 ಡಿಗ್ರಿ ಸೆಲ್ಶಿಯಸ್ ತಲುಪಿ ಮತದಾರರನ್ನು ಮನೆಯಲ್ಲಿಯೇ ಕಟ್ಟಿಹಾಕಿದ್ದ ಬೆಂಗಳೂರು ತಾಪಮಾನ ಬುಧವಾರ 29 ಡಿಗ್ರಿ ತಲುಪಿದೆ. ನಗರದಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣವಿದ್ದು, ಕತ್ತಲು ಸುರಿಯುತ್ತಿದ್ದಂತೆ ಹೇಗೋ ಏನೋ. ನಿನ್ನೆಯ ಮಳೆ ರೌದ್ರಾವತಾರ ಕಂಡಿರುವ ಜನತೆ ಇಂದು ಬೇಗನೆ ಮನೆ ಸೇರುವುದು ಖಂಡಿತ.

ಬೇಸಿಗೆ ಮಳೆ ಬೆಂಗಳೂರು ಮಾತ್ರವಲ್ಲ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅನೇಕ ಕಡೆಗಳಲ್ಲಿ ಸುರಿದು ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ತಂಪನ್ನೆರೆದಿದೆ. ಹೆಸರುಘಟ್ಟ ಮತ್ತು ನೆಲಮಂಗಲದಲ್ಲಿ ಅತಿಹೆಚ್ಚು 5 ಸೆಂ.ಮೀ. ಮಳೆ ಸುರಿದಿದೆ. ಸಿರಾದಲ್ಲಿ 3 ಸೆಂ.ಮೀ. ಮಳೆ ಹುಯ್ದಿದೆ. ಬಂಡೀಪುರ, ದೇವನಹಳ್ಳಿ, ಹುಲಿಯೂರುದುರ್ಗ, ಕೊಳ್ಳೇಗಾಲ, ಪಾವಗಢ, ತೊಂಡೇಬಾವಿ, ಮಂಡ್ಯಗಳಲ್ಲಿಯೂ ಮಳೆ ಹನಿದಿದ್ದು, ತಾಪಮಾನ ಜರ್ರನೆ ಇಳಿದಿದೆ. ಮಂಡ್ಯದಲ್ಲಿ ಅತಿ ಕಡಿಮೆ ಎಂದರೆ 18 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. 40.7 ಡಿಗ್ರಿ ತಾಪಮಾನ ಇರುವ ಗುಲಬರ್ಗಾ ಎಂದಿನಂತೆ ತನ್ನ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.

ಕರೆಂಟು ಕಣ್ಣಾಮುಚ್ಚಾಲೆ : ರಾಜ್ಯದಲ್ಲಿ ಏಪ್ರಿಲ್ 1ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕರೆಂಟು ಹೊಡೆದಂತಾಗಿದೆ. ಬಿಬಿಎಂಪಿ ಚುನಾವಣೆ ಮುಗಿದ ಕೂಡಲೆ ಅನಿಯಮಿತ ವಿದ್ಯುತ್ ಕಡಿತ ಮೇರೆ ಮೀರಿದೆ. ವಿದ್ಯಾರ್ಥಿಗಳು ಕರೆಂಟನ್ನು ನಂಬುವ ಬದಲು ಬುಡ್ಡಿ ದೀಪಕ್ಕೆ, ಮೊಂಬತ್ತಿಗೆ ಶರಣು ಹೋಗುವಂತಾಗಿದೆ. ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಸಮಯದಲ್ಲಿ ನಿರಂತರ ವಿದ್ಯುತ್ ನೀಡುವುದಾಗಿ ವಾಗ್ದಾನ ನೀಡಿದ್ದ ಮುಖ್ಯಮಂತ್ರಿಗಳು ತಮ್ಮ ಮಾತನ್ನು ಮರೆತಿದ್ದಾರೆ.

ಮುನ್ಸೂಚನೆ : ರಾಜ್ಯದ ಯಾವುದೇ ಭಾಗದಲ್ಲಿ ಮೋಡ ಮುಸುಕಿರಲಿ, ಮಳೆಯೇ ಸುರಿಯಲಿ ವಿದ್ಯಾರ್ಥಿಗಳು ಮಾತ್ರ ವಿದ್ಯುತ್ತನ್ನು ನಂಬದೆ ಇದ್ದಬದ್ದ ಕಂದೀಲು, ಮೊಂಬತ್ತಿ, ಎಮರ್ಜೆನ್ಸಿ ದೀಪಗಳನ್ನು ರೆಡಿಯಾಗಿಟ್ಟುಕೊಂಡು ಓದಿನತ್ತ ಗಮನ ಹರಿಸಲಿ. ಪಾಲಕರು ಕೂಡ ಕೈಯಲ್ಲಿ ಬೀಸಣಿಗೆಯನ್ನಿಟ್ಟುಕೊಂಡು ವಿದ್ಯಾರ್ಥಿಗಳಿಗೆ ನೆರವಾಗಲಿ. ವಿದ್ಯಾರ್ಥಿಗಳಿಗೆ ದಟ್ಸ್ ಕನ್ನಡದ ಆಲ್ ದಿ ಬೆಸ್ಟ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X