ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮು ಜ್ವಾಲೆಯಲ್ಲಿ ಬೆಂದ ಶಿವಮೊಗ್ಗ, ಹಾಸನ

By Mrutyunjaya Kalmat
|
Google Oneindia Kannada News

Hassan, Shivamogga Tense
ಬೆಂಗಳೂರು, ಮಾ. 1 : ಪ್ರವಾದಿ ಮೊಹಮ್ಮದ್ ಪೈಗಂಬರರ ಬಗ್ಗೆ ಕನ್ನಡ ದಿನಪತ್ರಿಕೆಯೊಂದು ಪ್ರಕಟಿಸಿರುವ ಲೇಖನ ಅವಹೇಳನಕಾರಿಯಾಗಿದೆ ಎಂದು ಆಕ್ರೋಶಗೊಂಡಿರುವ ಮುಸ್ಲಿಂ ಕೋಮಿನವರು ರಾಜ್ಯದ ಹಾಸನ, ಶಿವಮೂಗ್ಗ, ದಾವಣಗೆರೆ, ಗೋಕಾಕ್ ನಗರಗಳಲ್ಲಿ ತೀವ್ರ ಪ್ರತಿಭಟನೆಗಿಳಿದಿದ್ದಾರೆ. ಶಿವಮೊಗ್ಗ ಮತ್ತು ಹಾಸನಗಳೆರಡೂ ಅಕ್ಷರಶಃ ಹೊತ್ತಿ ಉರಿಯುತ್ತಿವೆ.

ಶಿವಮೊಗ್ಗ ಮತ್ತು ಹಾಸನಗಳಲ್ಲಿ ಕಂಡಕಂಡಲ್ಲೆಲ್ಲ ಅಂಗಡಿ ಮುಂಗಟ್ಟುಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟವಾಗುತ್ತಿದೆ. ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕಲ್ಲುತೂರಾಟದಿಂದ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಗಾಯಗಳಾಗಿವೆ. ಪ್ರತಿಭಟನಾಕಾರರು ಪೊಲೀಸರ ಮೇಲೆಯೂ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಅಪರಾಧಿ ಪ್ರಕ್ರಿಯಾ ಸಂಹಿತೆಯ 144ನೇ ಸೆಕ್ಷನ್ ಅಡಿ ಕರ್ಫ್ಯೂ ಜಾರಿ ಮಾಡಲಾಗಿದ್ದರೂ ದೊಂಬಿ ಹತೋಟಿಗೆ ಬರುತ್ತಿಲ್ಲ. ಪ್ರತಿಭಟನಾಕಾರರು ಯಾರು, ಸಾರ್ವಜನಿಕರಾರು ಎಂಬುದನ್ನು ಲೆಕ್ಕಿಸದೆ ಲಾಠಿ ರುಚಿ ತೋರಿದ್ದರಿಂದ ಕೆಲ ಸಾರ್ವಜನಿಕರೂ ಗಾಯಗೊಂಡಿದ್ದಾರೆ.

ಗೋಲಿಬಾರ್: ಇತ್ತೀಚಿನ ವರದಿಗಳ ಪ್ರಕಾರ ಶಿವಮೊಗ್ಗದ ಎಂಸಿಕೆ ರಸ್ತೆಯಲ್ಲಿ ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದು, ನಾಲ್ವರು ಗಾಯಗೊಂಡಿದ್ದಾರೆ.

ಹಾಸನದಲ್ಲಿ ಬೈಕುಗಳು, ಅಟೋಗಳು, ಟ್ಯಾಕ್ಸಿಗಳಿಗೆ ಬೆಂಕಿ ಹಚ್ಚಲಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಾಸನ ಮತ್ತು ಶಿವಮೂಗ್ಗದಲ್ಲಿ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ಕನ್ನಡಪ್ರಭ ದಿನಪತ್ರಿಕೆಯ ಭಾನುವಾರ ಸಂಚಿಕೆಯ ಸಾಪ್ತಾಹಿಕ ಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಲೇಖನವನ್ನು 'ಪರ್ದಾ ಹೈ ಪರ್ದಾ' ಎಂಬ ಶೀರ್ಷಕೆಯಡಿಯಲ್ಲಿ ಲೇಖನವನ್ನು ಪ್ರಕಟಿಸಲಾಗಿತ್ತು. ಬುರ್ಖಾಗೆ ಸಂಬಂಧಿಸಿದ ಲೇಖನ ಇದಾಗಿದ್ದು, ಬುರ್ಖಾ ಧರಿಸುವ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿರುವ ಯಾತನೆಗೆ ಕನ್ನಡಿ ಹಿಡಿಯುವಂತಿರುವ ಲೇಖನ ಇದಾಗಿದೆ. ಇದನ್ನು ಪ್ರಕಟಿಸಿದ್ದಕ್ಕೆ ಆಕ್ರೋಶಗೊಂಡಿರುವ ಮುಸ್ಲಿಮರು ಪ್ರತಿಭಟನೆಗಿಳಿದಿದ್ದಾರೆ.

ಹಾಸನದ ಆಜಾದ್ ನಗರ, ಸುಭಾಶ್ ನಗರ ಮತ್ತು ಹಮೀದ್ ಮೊಹಲ್ಲಾ ಸೇರಿದಂತೆ ಒಂದು ಕೋಮಿಗೆ ಸೇರಿದ ಜನರು ವಾಸಿಸುವ ಬಡಾವಣೆಯಲ್ಲಿ ಹೆಚ್ಚಿನ ಪ್ರತಿಭಟನೆ ನಡೆದಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಬಸ್ಸುಗಳ ಮೇಲೆ ಕಲ್ಲು ಆರಂಭವಾಯಿತು. ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಹಾಸನ ಜಿಲ್ಲಾ ವರಿಷ್ಠಾಧಿಕಾರಿ ಶರತ್ ಚಂದ್ರ ಅವರು ಮೇಲುಸ್ತುವಾರಿ ವಹಿಸಿದ್ದು, ಸೂಕ್ಷ್ಮಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಒಂಬತ್ತು ಜನರು ಗಾಯಗೊಂಡಿದ್ದಾರೆ.

ಶಿವಮೊಗ್ಗದಲ್ಲೂ ನಿಷೇಧಾಜ್ಞೆ ಜಾರಿ

ಶಿವಮೊಗ್ಗದಲ್ಲಿಯೂ ಸುಮಾರು 16 ಬೈಕುಗಳಿಗೆ ಬೆಂಕಿ ಇಡಲಾಗಿದೆ. ಅಲ್ಲಿನ ಪರಿಸ್ಥಿತಿಯೂ ಕೈಮೀರತೊಡಗಿದ್ದು, ಮೂರು ದಿನಗಳ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಒಂದು ಕೋಮಿನ ಉದ್ರಿಕ್ತರ ಗುಂಪೊಂದು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿದೆ. ಹಳ್ಳಿಗಳಿಂದ ಬಂದಿರುವ ಜನರಿಗೆ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಸೀಗೇಹಳ್ಳಿಯಲ್ಲಿ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ನೆಹರೂ ರಸ್ತೆಯ ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಲಾಗಿದೆ. ಗುಂಪು ಚೆದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಈವರೆಗೆ 15 ಮಂದಿ ಗಾಯಗೊಂಡಿದ್ದಾರೆ. ವರದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆಗಳಾಗಿವೆ.

ಗೋಕಾಕ್ ನಲ್ಲಿ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು

ಪ್ರಾರ್ಥನಾ ಮಂದಿರದ ಮೇಲೆ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆಂದು ಒಂದು ಕೋಮಿನ ಗುಂಪೊಂದು ಪ್ರತಿಭಟನೆ ಆರಂಭಿಸಿ, ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಬೈಕುಗಳಿಗೆ ಬೆಂಕಿ ಹಚ್ಚಿದ್ದಾರೆ. ಜನಜೀವನ ಮತ್ತು ಸಂಚಾರ ವ್ಯವಸ್ತೆ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ, ಪರಿಸ್ಥಿತಿ ಹತೋಟಿಗೆ ಬಂದಿದೆ. 25 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X