ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಹೋರಾಟಕ್ಕೆ ಮಣಿದ ಸರ್ಕಾರ: ನೀರಾ ಇಳಿಸಲು ಅನುಮತಿ

By Staff
|
Google Oneindia Kannada News

ಬೆಂಗಳೂರು : ರಾಷ್ಟ್ರದ ಬೆನ್ನೆಲುಬಾದ ರೈತರು ಹಾಗೂ ಪ್ರತಿಪಕ್ಷಗಳ ಒಕ್ಕೋರಲಿನ ಒತ್ತಡಕ್ಕೆ ಮಣಿದಿರುವ ರಾಜ್ಯ ಸರಕಾರ ತೆಂಗಿನಮರದಿಂದ ನೀರಾ ಇಳಿಸಿ, ಮಾರಾಟ ಮಾಡಲು ಅನುಮತಿ ನೀಡಿದೆ. ನೀರಾ ನಿರ್ಮಲವಾಗಿರುವಾಗಲೇ ಮಾರಾಟ ಮಾಡುವಂತೆ ತಿಳಿಸಿರುವ ಸರಕಾರ, ನೀರಾವನ್ನು ಸೇಂದಿಯಾಗಿ ಪರಿವರ್ತಿಸಿ ಮಾರಿದರೆ, ಅಬಕಾರಿ ಕಾಯಿದೆಯಡಿ ಉಗ್ರಕ್ರಮ ಕೈಗೊಳ್ಳುವುದಾಗಿಯೂ ಪ್ರಕಟಿಸಿದೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ರಾಜ್ಯ ಕೃಷಿ ಸಚಿವ ಟಿ.ಬಿ. ಜಯಚಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಅವರು, ನೀರಾ ಇಳಿಸಲು ಮತ್ತು ಮಾರಲು ಅಬಕಾರಿ ಇಲಾಖೆಯಿಂದ ಪರವಾನಗಿ ನೀಡಲು ಸರಕಾರ ನಿರ್ಧರಿಸಿದೆ ಎಂದರು.

ನೀರಾವನ್ನು ನೀರಾ ರೂಪದಲ್ಲೇ ಮಾರಬೇಕು. ಅದು ಕಲುಷಿತಗೊಂಡ ನಂತರ ಮಾರಬಾರದು. ರೈತರು ಸಹಕಾರ ಸಂಘ ಕಟ್ಟಿಕೊಂಡು ಇಲ್ಲವೇ ವೈಯುಕ್ತಿಕವಾಗಿ ಪರವಾನಗಿ ಪಡೆದು ನೀರಾ ಇಳಿಸಿ, ಮಾರಾಟ ಮಾಡಬಹುದು ಎಂದೂ ಸಚಿವರುಗಳು ತಿಳಿಸಿದರು.

ಕಾಂಗ್ರೆಸ್‌ ರೈತ ವಿರೋಧಿ ಸರಕಾರ ಅಲ್ಲ. ನೀರಾ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ದೃಢಪಟ್ಟಿಲ್ಲ. ನೀರಾವನ್ನು ಕೆಡದಂತೆ ಸಂಸ್ಕರಿಸುವ ತಂತ್ರಜ್ಞಾನ ನಮ್ಮಲ್ಲಿಲ್ಲ, ಹೀಗಾಗಿ ಹೆಂಡ ಸೇವನೆ ಸಾಮಾಜಿಕ ಪಿಡುಗಾಗಿ ಪರಿಣಮಿಸಬಾರದು ಎಂದು ಅನುಮತಿ ನೀಡಲು ಹಿಂದು ಮುಂದು ನೋಡಿದೆವು ಎಂದರು. ಆದರೆ, ಖಾದಿ ಗ್ರಾಮೋದ್ಯೋಗ ಮಂಡಳಿ ಕೂಡ ನೀರಾದ ಉಪ ಉತ್ಪನ್ನಗಳ ತಯಾರಿಕೆಗೆ ಮುಂದಾಗಿದ್ದು, ನೀರಾ ಉತ್ಪನ್ನಗಳನ್ನು ಗುಡಿ ಕೈಗಾರಿಕೆ ವ್ಯಾಪ್ತಿಗೆ ತರಬಹುದು ಎಂಬ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ 8 ಕೋಟಿ ತೆಂಗಿನ ಮರ ಇದೆ. ಈ ಪೈಕಿ ಕನಿಷ್ಠ 1ಕೋಟಿ ತೆಂಗಿನ ಮರದಿಂದ ಕೇವಲ 2 ಲೀಟರ್‌ ನೀರಾ ಇಳಿಸಿದರೂ ದಿನಕ್ಕೆ 2 ಕೋಟಿ ಲೀಟರ್‌ ನೀರಾ ಉತ್ಪತ್ತಿಯಾಗುತ್ತದೆ. ಇಷ್ಟೊಂದು ಪ್ರಮಾಣದ ನೀರಾವನ್ನು ಕೆಡದಂತೆ ಸಂಸ್ಕರಿಸಿ ಮಾರುವುದು ಸಾಧ್ಯವೆ ಎಂದೂ ಅವರು ಪ್ರಶ್ನಿಸಿದರು.

ಕೊಬ್ಬರಿ ಖರೀದಿ: ಆದಾಗ್ಯೂ ರೈತರಿಗೆ ನೀರಾ ಇಳಿಸುವುದರಿಂದ ಆರ್ಥಿಕ ಲಾಭ ಆಗುವ ಕಾರಣ, ಅನುಮತಿ ನೀಡಲಾಗಿದೆ ಎಂದರು. ಅಲ್ಲದೆ, ತುರುವೇಕೆರೆ, ತಿಪಟೂರು, ಅರಸೀಕೆರೆ ಮೊದಲಾದ ಕಡೆ ಕೊಬ್ಬರಿ ಖರೀದಿಗೆ ರಾಜ್ಯ ಸರಕಾರ ನಿರ್ಧರಿಸಿದೆ ಎಂದರು.

ಚುಚ್ಚು ಮದ್ದು : ಪಲ್ಸ್‌ ಪೊಲಿಯೋ ಮಾದರಿಯಲ್ಲೇ ತೆಂಗಿನ ಮರಗಳಿಗೂ ಕೂಡ ನುಸಿರೋಗ ನಿಯಂತ್ರಣದ ಚುಚ್ಚುಮದ್ದು ನೀಡುವ ಆಂದೋಲನ ನಡೆಸಲಾಗುವುದು ಎಂದರು. ನೀರಾವನ್ನು ಕಲ್ಲುಸಕ್ಕರೆ ಇತ್ಯಾದಿ ಉಪ ಉತ್ಪನ್ನಗಳಾಗಿ ಮಾಡಿ ಮಾರಾಟ ಮಾಡಲು ಸರಕಾರದ ಅಭ್ಯಂತರ ಇಲ್ಲ, ಆದರೆ, ಅದನ್ನು ಸೇಂದಿಯಾಗಿ ಪರಿವರ್ತಿಸಿ ಮಾರಲು ಅನುಮತಿ ನೀಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಸ್ವಾಗತ : ನೀರಾ ಇಳಿಸಲು ರೈತರಿಗೆ ಅನುಮತಿ ನೀಡಿರುವ ಸರಕಾರದ ಕ್ರಮವನ್ನು ಪ್ರತಿಪಕ್ಷ ನಾಯಕರು ಹಾಗೂ ರೈತ ಮುಖಂಡರು ಸ್ವಾಗತಿಸಿದ್ದಾರೆ. ರೈತಸಂಘದ ಅಧ್ಯಕ್ಷ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ವಿರೋಧಪಕ್ಷದ ನಾಯಕರಾದ ಜಗದೀಶ ಶೆಟ್ಟರ್‌, ಪಿ.ಜಿ.ಆರ್‌. ಸಿಂಧ್ಯಾ, ಕೆ.ಎಚ್‌. ಶ್ರೀನಿವಾಸ್‌, ಬಸವರಾಜ ಪಾಟೀಲ್‌ ಸೇಡಂ, ಭೈರೇಗೌಡ ಅವರು ಇದು ರೈತರು ಹಾಗೂ ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ವಿಜಯ ಎಂದು ಬಣ್ಣಸಿದ್ದಾರೆ.

(ಪಿ.ಟಿ.ಐ/ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X