ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ...

By Staff
|
Google Oneindia Kannada News

Sir M. Vishweshwaraiahಇಂಡಸ್ಟ್ರಿಯಲೈಸ್‌ ಆರ್‌ ಪೆರಿಷ್‌ ಎಂದು ಹೇಳಿದವರಾರು ನಿಮಗೆ ಗೊತ್ತೆ ? ಕೈಗಾರೀಕರಣ ಆಗದಿದ್ದರೆ ಮತ್ತೆ ನಾವು ಶಿಲಾಯುಗಕ್ಕೇ ಹೋಗುತ್ತೇವೆ ಎನ್ನುತ್ತಿದ್ದ ಶತಾಯುಷಿ ಸರ್‌.ಎಂ. ವಿಶ್ವೇಶ್ವರಯ್ಯನವರನ್ನು ಪ್ರತಿಯಾಬ್ಬ ಕನ್ನಡಿಗನೂ ನೆನೆಯಲೇ ಬೇಕು. ಮೈಸೂರು - ಮಂಡ್ಯ - ಬೆಂಗಳೂರಿಗರು ತಾವು ಒಂದೊಂದು ಹನಿ ಕಾವೇರಿ ನೀರು ಕುಡಿಯುವಾಗಲೂ ವಿಶ್ವೇಶ್ವರಯ್ಯನವರನ್ನು ಕಡ್ಡಾಯವಾಗಿ ನೆನೆಯಲೇ ಬೇಕು. ಮಂಡ್ಯ ಇಂದು ಕಬ್ಬಿನ ಕಣಜವಾಗಿದ್ದರೆ, ಅದಕ್ಕೆ ವಿಶ್ವೇಶ್ವರಯ್ಯನವರೇ ಕಾರಣ.

ಕರ್ನಾಟಕದಲ್ಲಿ ಇಂದು ನೂರಾರು ಕೈಗಾರಿಕೆ - ಕಾರ್ಖಾನೆಗೆ ಯಂತ್ರಗಳು ವಿದ್ಯುತ್‌ ನೆರವಿನಿಂದ ವೇಗವಾಗಿ ಚಲಿಸುತ್ತಿದ್ದರೆ, ಕರ್ನಾಟಕದ ಕೋಟ್ಯಂತರ ಮನೆಗಳಲ್ಲಿ ವಿದ್ಯುತ್‌ ದೀಪ ಉರಿಯುತ್ತಿದ್ದರೆ ಅದಕ್ಕೆ ವಿಶ್ವೇಶ್ವರಯ್ಯನವರೇ ಕಾರಣ. ಕೋಲಾರ ಚಿನ್ನದ ನಾಡಾಗಲು ವಿಶ್ವೇಶ್ವರಯ್ಯನವರ ಕಾಣಿಕೆ ಅಪಾರ.

ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ.... ಕನ್ನಂಬಾಡಿಯ ಕಟ್ಟದಿದ್ದರೆ... ಈ ಗೀತೆ ಕೇಳಿದ್ದೀರಲ್ಲ. ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ... ಸಾಗದು ಕೆಲಸವು ಮುಂದೆ ಎಂಬ ತತ್ವವನ್ನೇ ತಮ್ಮ ಬಾಳಲ್ಲಿ ಅಳವಡಿಸಿಕೊಂಡ ವಿಶ್ವೇಶ್ವರಯ್ಯನವರನ್ನು ನೆನೆಯದವರೇ ಇಲ್ಲ.

ವಿಜ್ಞಾನ, ತಂತ್ರಜ್ಞಾನ ಅಥವಾ ಮನೆಯಲ್ಲಿ ನೀವು ಪುಟ್ಟದೊಂದು ತಾಂತ್ರಿಕ ಸಲಹೆ ನೀಡಿ ಅದು ಯಶಸ್ವಿಯಾದರೆ. ಅಬ್ಬಾ ವಿಶ್ವೆಶ್ವರಯ್ಯನವರ ತಲೆ ಎಂದು ಪ್ರಶಂಸೆಯಿಂದ ಹೇಳುವುದುಂಟು. ಬಹುಶಃ ನಿಮ್ಮ ತಾಯಿಯೋ ಅಜ್ಜಿಯೋ ನಿಮಗೂ ಈ ಮಾತು ಹೇಳಿರಬಹುದು. ಒಬ್ಬ ವ್ಯಕ್ತಿಯ ತಲೆಗೆ ಕೋಟ್ಯಂತರ ಕನ್ನಡಿಗರು ಬೆಲೆ ನೀಡುವಂತಹ ಹೆಮ್ಮೆಯ ಕೆಲಸವನ್ನು ಮಾಡಿದವರಲ್ಲಿ ಸರ್‌.ಎಂ.ವಿ. ಅಗ್ರೇಸರರು.

ಸೆಪ್ಟೆಂಬರ್‌ 15 ಸರ್‌.ಎಂ. ವಿ ಹುಟ್ಟಿದ ದಿನ. ಇಂದು ಕರ್ನಾಟಕ ವಿಶ್ವ ಭೂಪಟದಲ್ಲಿ ತನ್ನದೇ ಆದ ಒಂದು ಸ್ಥಾನ ಪಡೆದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಂತೂ ರಾಜ್ಯದ ಕೊಡುಗೆ ಅಪಾರ. ಈ ಎಲ್ಲದಕ್ಕೂ ಮೂಲವಾದ ವೇದಿಕೆ ಸಜ್ಜುಗೊಳಿಸಿದವರು ಸರ್‌.ಎಂ.ವಿ. ಅವರ ಹುಟ್ಟು ಹಬ್ಬದ ದಿನದಂದು ಅವರನ್ನು ನೆನೆವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಸರ್‌ಎಂವಿ ವಿಶ್ವಖ್ಯಾತ ಎಂಜಿನಿಯರ್‌. ಹೀಗಾಗಿ ಸೆಪ್ಟೆಂಬರ್‌ 15ನ್ನು ಎಂಜಿನಿಯರುಗಳ ದಿನವಾಗಿ ಆಚರಿಸುತ್ತಾರೆ. ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಎಂಜಿನಿಯರ್‌ ಅಷ್ಟೇ ಅಲ್ಲ. ಅತ್ಯುತ್ತಮ ಆಡಳಿತಗಾರ, ವಿಶ್ವದ ಮೊಟ್ಟ ಮೊದಲ ಅರ್ಥ ಯೋಜಕ ತಜ್ಞ, ಕೈಗಾರಿಕೋದ್ಯಮಿ, ವಿಜ್ಞಾನಿ, ಶಿಕ್ಷಣ ತಜ್ಞ..... ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸರ್‌.ಎಂ.ವಿ. ಸೇವೆ ಸಲ್ಲಿಸದ ಕ್ಷೇತ್ರವೇ ಇಲ್ಲ ಎನ್ನುವ ಮಾತು ಅತಿಶಯೋಕ್ತಿಯದಲ್ಲ.

ಆನೆ ಬೈಲು : ಒಂದು ಕಾಲದಲ್ಲಿ ಆನೆಗಳ ತವರಾಗಿದ್ದ ದುರ್ಗಮ ಅರಣ್ಯ ಇಂದು ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ವಿಶ್ವಖ್ಯಾತ ಜೋಗವಾಗಲು ವಿಶ್ವೇಶ್ವರಯ್ಯನವರೇ ಕಾರಣ. ದುರ್ಗಮವಾಗಿದ್ದ ಜೋಗದ ಸೊಬಗನ್ನು ಕಾಣಲು ನೂರು ವರ್ಷಗಳ ಹಿಂದೆ ಹರ ಸಾಹಸ ಮಾಡಿದವರೂ ಇದ್ದಾರೆ. ಕೆಲವರಷ್ಟೇ ತಮ್ಮ ಈ ಸಾಹಸದಲ್ಲಿ ಯಶಸ್ವಿಯಾಗಿ ತಮ್ಮ ಬಾಳು ಸಾರ್ಥಕವಾಯಿತು ಎಂದೂ ತಿಳಿಯುತ್ತಿದ್ದರು.

ಈ ಪ್ರದೇಶಕ್ಕೆ ಭೇಟಿಕೊಟ್ಟ ವಿಶ್ವೇಶ್ವರಯ್ಯನವರು ಜೋಗದ ಸೊಬಗು ನೋಡಿ ಸಂತೋಷ ಪಟ್ಟರಾದರೂ, ಅಯ್ಯೋ ಎಷ್ಟೊಂದು ವ್ಯರ್ಥ, ತುಂಬಲಾರದ ನಷ್ಟ ಎಂದು ಉದ್ಗರಿಸಿದರು. ಇಂತಹ ಪ್ರಕೃತಿ ದತ್ತ ಅಗಾಧ ಸಂಪತ್ತು ವ್ಯರ್ಥವಾಗಿ ಹಾಳಾಗುತ್ತಿರುವುದಕ್ಕೆ ಮರುಗಿದರು. ಅಂದು ವಿಶ್ವೇಶ್ವರಯ್ಯನವರು ಈ ಆನೆಬೈಲಿಗೆ ಹೋಗದಿದ್ದರೆ, ಕರ್ನಾಟಕದ ವಿದ್ಯುತ್‌ ಸಮಸ್ಯೆಯನ್ನು ಮತ್ತಷ್ಟು ಮಗದಷ್ಟು ಬಿಗಡಾಯಿಸುತ್ತಿತ್ತು.

ವಿಶ್ವೇಶ್ವರಯ್ಯ : ವಿಶ್ವೇಶ್ವರಯ್ಯನವರ ಪೂರ್ಣ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಾಯ. 1861ರ ಸೆಪ್ಟೆಂಬರ್‌ 15ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿಗಳು. ಶ್ರೀನಿವಾಸ ಶಾಸ್ತ್ರಿಗಳು ಘನ ವಿದ್ವಾಂಸರು, ಸಂಸ್ಕೃತ ಪಂಡಿತರು. ತಾಯಿ ವೆಂಕಚ್ಚಮ್ಮನವರು ಸದ್ಗೃಹಿಣಿ.

ಗುಣ ಶ್ರೀಮಂತಿಕೆಯ ಕುಟುಂಬದಲ್ಲಿ ಜನಿಸಿದ ವಿಶ್ವೇಶ್ವರಯ್ಯನವರು ಬೆಳೆದದ್ದೆಲ್ಲಾ ಕಡು ಬಡತನದಲ್ಲಿ. ಬೀದಿ ದೀಪದ ಕೆಳಗೆ ಕುಳಿತು ತಮ್ಮ ಓದು ಮುಂದುವರಿಸಿದ ವಿಶ್ವೇಶ್ವರಯ್ಯನವರು, ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರೂ ವೆಸ್ಲಿಯನ್‌ ಹಾಗೂ ಸೆಂಟ್ರಲ್‌ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಂದುವರಿಸಿದರು. ವಿದ್ಯಾಭ್ಯಾಸಕ್ಕಾಗಿ ಹಲವು ಮಕ್ಕಳಿಗೆ ಮನೆಪಾಠ ಹೇಳಿಕೊಟ್ಟು, ಶಿಕ್ಷಣದ ಜತೆಜತೆಗೇ ಸಂಪಾದನೆಯನ್ನೂ ಮಾಡಿದ ವಿಶ್ವೇಶ್ವರಯ್ಯನವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೂ ಛಲ ಬಿಡದ ತ್ರಿವಿಕ್ರಮರಂತೆ ಎಲ್ಲ ಕಷ್ಟಗಳನ್ನೂ ನುಂಗಿದ ಅವರು, 80ರಲ್ಲಿ ಪದವಿ ಗಳಿಸಿ, ಪುಣೆಯಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪಡೆದು, ಮುಂಬಯಿ ಸರಕಾ-ರದಲ್ಲಿ ಅಸಿಸ್ಟೆಂಟ್‌ ಎಂಜಿನಿಯರ್‌ ಆದರು. ಎಂಜಿನಿಯರ್‌ ಆದ ನಂತರ ಇವರ ಸಾಧನೆಗಳನ್ನು ಕಂಡು ನಿಬ್ಬೆರಗಾದ ಲಂಡನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಿವಿಲ್‌ ಎಂಜಿನಿಯರ್ಸ್‌ ಸಂಸ್ಥೆ ಇವರಿಗೆ ಗೌರವ ಸದಸ್ಯತ್ವ ನೀಡಿ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿತು. ಇವರು ಆವಿಷ್ಕರಿಸಿದ ಸ್ವಯಂಚಾಲಿತ ಜಲ ನಿಯಂತ್ರಕ ಬಾಗಿಲು ವಿಶ್ವದ ಗಮನ ಸೆಳೆಯಿತು.

ಏಡನ್‌ ನಗರಕ್ಕೆ ನೀರು ಪೂರೈಸುವ ಯೋಜನೆ ಸಿದ್ಧಪಡಿಸಿ ಯಶಸ್ವಿಯಾದ ವಿಶ್ವೇಶ್ವರಯ್ಯನವರು, ಹೈದರಾಬಾದ್‌ ನಗರ ಎದುರಿಸುತ್ತಿದ್ದ ಪ್ರವಾಹದ ಸಮಸ್ಯೆಗೆ ಪರಿಹಾರ ಒದಗಿಸಿದರು. ಹೈದರಾಬಾದ್‌ ಇಂದು ಸುಂದರ ನಗರ ಎನಿಸಿಕೊಳ್ಳಲು ಸರ್‌.ಎಂ.ವಿ. ನೀಡಿದ ಕಾಣಿಕೆ ಅನುಪಮವಾದದ್ದು. ಇಂತಹ ಪ್ರತಿಭಾವಂತ ಕನ್ನಡಿಗನಾಗಿದ್ದೂ ಅನ್ಯರ ನಾಡಿನಲ್ಲಿ ಇರುವುದು ಸೂಕ್ತವಲ್ಲ. ನಮ್ಮ ನಾಡಿನ ಪ್ರತಿಭೆಯ ಸದ್ಬಳಕೆ ನಮ್ಮಲ್ಲೇ ಆಗಬೇಕೆಂದು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಸರ್‌.ಎಂ.ವಿಗೆ ತಾಯ್ನಾಡಿಗೆ ಮರಳುವಂತೆ ಆಹ್ವಾನಿಸಿದರು.

ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್‌ ಆಗಿ ಸೇರಿದ ವಿಶ್ವೇಶ್ವರಯ್ಯನವರು, 1912ರಲ್ಲಿ ಮೈಸೂರಿನ ದಿವಾನರೇ ಆದರು. ತಮ್ಮ ಈ ಆಡಳಿತಾವಧಿಯಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ವಿ.ವಿ.ಯ ಸ್ಥಾಪನೆಗೆ ನೆರವಾದ ಸರ್‌ಎಂವಿ ಅವರು ಆರ್ಥಿಕ ಅಭಿವೃದ್ಧಿಗೂ ಕಾರಣವಾದರು. ಮೈಸೂರು ಬ್ಯಾಂಕ್‌, ಹಿಂದೂಸ್ತಾನ್‌ ಎರೋನಾಟಿಕ್ಸ್‌, ನ್ಯಾಯವಿಧಾಯಕ ಸಭೆ, ಪ್ರಜಾಪ್ರತಿನಿಧಿ ಸಭೆಗಳು ಸರ್‌ಎಂವಿ ಅವರ ಕಲ್ಪನೆಯ ಕೈಗೂಸುಗಳು.

ಮೈಸೂರು ಮಾದರಿ ರಾಜ್ಯ ಎಂದು ಹೆಸರು ಗಳಿಸುವಲ್ಲಿ ವಿಶ್ವೇಶ್ವರಯ್ಯನವರ ಸಿಂಹಪಾಲಿದೆ. ಮೈಸೂರು ಸಂಸ್ಥಾನಕ್ಕೆ ವಿತ್ತ ಯೋಜನೆಯಾಂದನ್ನು ರೂಪಿಸಿ, ಕಾರ್ಯರೂಪಕ್ಕೆ ತಂದು ರಾಷ್ಟ್ರದ ಪ್ರಥಮ ಅರ್ಥಯೋಜಕರೆಂಬ ಖ್ಯಾತಿಯನ್ನೂ ವಿಶ್ವೇಶ್ವರಯ್ಯ ಅವರು ಪಡೆದರು.

ಸುವರ್ಣಯುಗ : ರಾಜ್ಯದಲ್ಲಿ ಸಿಮೆಂಟ್‌ ಕಾರ್ಖಾನೆ, ಕಾಗದದ ಕಾರ್ಖಾನೆ, ಗಂಧದೆಣ್ಣೆಯ ಕಾರ್ಖಾನೆ, ಛೇಂಬರ್‌ ಆಫ್‌ ಕಾಮರ್ಸ್‌, ಸೋಪು ಮತ್ತು ಮಾರ್ಜಕಗಳ ಕಾರ್ಖಾನೆ, ಠಂಕಸಾಲೆ, ಶ್ರೀ ಜಯ-ಚಾಮ-ರಾ-ಜೇಂ-ದ್ರ ಪಾಲಿ ಟೆಕ್ನಿ-ಕ್‌, ಎಣ್ಣೆ ಗಿರಣಿಗಳೇ ಮುಂತಾದ ನೂರಾರು ಕಾರ್ಖಾನೆಗಳು ಮೈಸೂರು ಸಂಸ್ಥಾನದಲ್ಲಿ ತಲೆ ಎತ್ತಲು ವಿಶ್ವೇಶ್ವರಯ್ಯನವರೇ ಕಾರಣ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲವನ್ನು ಸುವರ್ಣಯುಗ ಎಂದೇ ಬಣ್ಣಿಸುತ್ತಾರೆ. ಕನ್ನ-ಡ ಸಾಹಿ-ತ್ಯ ಪರಿ-ಷ-ತ್‌ ಸ್ಥಾ-ಪ-ನೆ-ಯಾ-ದ-ದ್ದು ಇವ-ರ ಕಾಲ-ದ-ಲ್ಲೇ.

ಕಟ್ಟಾ ಕನ್ನಡಾಭಿಮಾನಿಯಾಗಿದ್ದ ವಿಶ್ವೇಶ್ವರಯ್ಯನವರು 1913ರಲ್ಲೇ ಕನ್ನಡವನ್ನು ಆಡಳಿತ ಭಾಷೆ ಎಂದು ಘೋಷಿಸಿದ ಖ್ಯಾತಿಗೂ ಪಾತ್ರರಾದರು. ವಿಶ್ವೇಶ್ವರಯ್ಯನವರ ತಾಂತ್ರಿಕ ಕುಶಲತೆ, ಅವರ ಆಡಳಿತಾತ್ಮಕ ವಿಚಾರಧಾರೆ, ಆರ್ಥಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಎಲ್ಲವರನ್ನೂ ಪರಿಗಣಿಸಿದ ಸರಕಾರ ಅವರಿಗೆ ಸರ್‌. ಪುರಸ್ಕಾರ ನೀಡಿ ಗೌರವಿಸಿತು. 1962ರ ತನಕ ನೂರು ವರ್ಷಗಳ ತುಂಬು ಜೀವನ ನಡೆಸಿದ ಸರ್‌.ಎಂ.ವಿ. ವಿಶ್ವಕ್ಕೇ ಮಾರ್ಗದರ್ಶಕವಾದ ನೂರಾರು ಯೋಜನೆಗಳನ್ನು ನಾಡಿಗೆ ಕೊಟ್ಟಿದ್ದಾರೆ.

ಸರ್‌.ಎಂ.ವಿ. ಹುಟ್ಟೂರಾದ ಮುದ್ದೇನಹಳ್ಳಿ ಆಗಲಿದೆ ಸ್ವಚ್ಛಗ್ರಾಮ
ನಿರ್ಲಕ್ಷ್ಯಕ್ಕೊಳಗಾಗಿರುವ ಸರ್‌.ಎಂ.ವಿಶ್ವೇಶ್ವರಯ್ಯನವರ ಸಮಾಧಿ

Post your views


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X