ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆರಗೇ ಊರಾಗಿರುವ ಬಿಜಾಪುರ

By Super
|
Google Oneindia Kannada News

ಈ ಕಡೆ ಬಂದರೆ ನೀವು ನೋಡುವುದೆಲ್ಲ ಒಂದು ಕಾಲದಲ್ಲಿ ಬೆಳಗಿ ಬಾಳಿದ ನೆನಪುಗಳನ್ನು ಉಳಿಸಿಕೊಂಡು ಧೀಮಂತವಾಗಿ ನಿಂತಿರುವ ಕಲ್ಲಿನ ಸೌಧಗಳು, ಕೆತ್ತನೆಗಳು, ಅವುಗಳ ಹಿಂದಿನ ನಿಟ್ಟುಸಿರುಗಳು... ಅಂದು ಆಗಿ ಹೋದ ವಿಚಾರಗಳು, ಚಿಂತನ ಮಂಥನಗಳ ಗಟ್ಟಿ ಅವಶೇಷಗಳು. ನೀರಿಲ್ಲದ ಊರುಗಳಲ್ಲಿ ಅರಳಿದ ಕಲ್ಲಿನ ಸೌಂದರ್ಯದ ತುಂಬಾ ಪುರಾಣ, ಪುಣ್ಯ, ಐತಿಹ್ಯದ ಕತೆಗಳ ಚಿತ್ತಾರ... ಹಳೆ ಬಿಜಾಪುರದ ಕಲ್ಲುಗಳು ಕತೆಗಳೊಡನೆ ಉಸಿರಾಡುತ್ತವೆ, ಗೋಲಗುಂಬಜದಂತೆ. ಆ ಕತೆಗಳು ಸಾಯದಂತೆ ಕಾಯುತ್ತವೆ.

ಅರಿವೆ ಗುರು ಎಂದ ಬಸವಣ್ಣನ ಊರಿನಲ್ಲಿ ನೀವು ನೋಡಲು ಎಷ್ಟು ಬಾಕಿಯಿದೆ ಗೊತ್ತೆ ? ಚಾಲುಕ್ಯ ಶೈಲಿಯ ಪಟ್ಟದ ಕಲ್ಲು ವಿಕ್ರಮಾದಿತ್ಯ ರಾಜನ ಶಿಲ್ಪಾಭಿರುಚಿಯ ಸಂಕೇತವಾದರೆ, ಚಾಲುಕ್ಯ ರಾಜಧಾನಿ ಐಹೊಳೆಯ ಕೆತ್ತನೆಗಳು ನಿಮ್ಮನ್ನು ಹಿಡಿದು ನಿಲ್ಲಿಸುತ್ತವೆ. ತುಂಬಿ ಹರಿಯುವ ಮಲಪ್ರಭ ದಂಡೆಯ ಮೇಲಿರುವ ಬಂಡೆಗಳೆಲ್ಲವನ್ನೂ ಶಿಲ್ಪಿಯ ಉಳಿ ಕಡೆದು ನಿಲ್ಲಿಸಿದೆ. ನೀವು ಐಹೊಳೆಯನ್ನು ನೋಡಿದ ನಂತರವೇ ನಂಬಿಕೆ ಬರುವುದು, ಆ ಊರಿನಲ್ಲಿ 125 ದೇವಸ್ಥಾನಗಳು 22 ಗುಂಪುಗಳಲ್ಲಿ ಸ್ಥಾಪನೆಯಾಗಿವೆ ಎಂದು . 125 ದೇವಸ್ಥಾನಗಳ ಶೈಲಿಯೂ ಒಂದಕ್ಕಿಂತ ಒಂದು ಭಿನ್ನ. ಎಲ್ಲವನ್ನೂ ನೋಡಿಕೊಂಡು ನಡೆಯುವಾಗ ಒಂದಿಷ್ಟೂ ಬೋರಾಗದಂತೆ ಭಿನ್ನತೆಯನ್ನು ಕಲ್ಲಿನೊಳಗೆ ತೂರಿಸಿ ಕೆತ್ತಿರುವ ಕೈಗಳ ಕುಶಲತೆ ಬೆರಗು ಬಡಿಸುತ್ತದೆ. ತಮಾಷೆ ನೋಡಿ, ಸೌಂದರ್ಯ ಪ್ರಜ್ಞೆಯ ಮೌಲ್ಯ ಮಾಪಕರು ಇಲ್ಲಿಗಿನ್ನೂ ಭೇಟಿ ನೀಡಿಲ್ಲ. ಈ ದೇವಸ್ಥಾನದ ಪ್ರಥಮ ಬ್ರಹ್ಮ ಕಲಶ ಆರು, ಏಳು ಶತಮಾನದ ಹೊತ್ತಿಗಾಗಿರಬಹುದು ಎಂದು ತಜ್ಞರು ಅಂದಾಜಿನ ಮೇಲೆ ಲೆಕ್ಕ ಹಾಕಿದ್ದಾರೆ.

ಬಿಜಾಪುರದಲ್ಲಿ ಹಿಂದು ಮುಸ್ಲಿಂ ಕಲೆಗಳ ಸಂಗಮವಾಗಿದೆ. ಬಿಜಾಪುರದ ಬಗ್ಗೆ ಯಾರೇ ಆದರೂ ಓದಲು ಕುಳಿತರೆಂದರೆ ವಿಶ್ವದ ಅಧ್ಭುತಗಳಲ್ಲೊಂದಾದ ಗೋಲಗುಂಬಜ್‌ನ ವಿಷಯ ಎಲ್ಲಿದೆ ಎಂದು ಕಣ್ಣುಗಳು ಹುಡುಕಾಡುತ್ತವೆ. 13ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಕಟ್ಟಿಸಿದ ಗೋಲಗುಂಬಜ್‌ನಲ್ಲಿ ಅರಬ್ಬೀ ಶೈಲಿ ಮತ್ತು ಹಿಂದೂ ಸಂಸ್ಕೃತಿಗಳು ಪರಸ್ಪರ ಸುತ್ತಿಕೊಂಡಿವೆ. ಬಿಜಾಪುರದಲ್ಲಿನ ದೇವಸ್ಥಾನಗಳನ್ನು ಸುತ್ತಿ ಬಂದ ನೀವು ಗೋಲಗುಂಬಜ್‌ ನೋಡಿದರೆ ಇಲ್ಲಿ ಪೂರಾ ಬೇರೆಯೇ ಶೈಲಿಯ ಚಿತ್ತಾರಗಳು ನಿಮ್ಮನ್ನು ಕರೆಯುತ್ತವೆ.

ಮತ್ತೆ ಬಾಗಲಕೋಟೆಯಲ್ಲಿ ಆಗಿ ಹೋದ ಧ್ವಜಗಳೆಷ್ಟೋ...! ಆದಿಲ್‌ಶಾಹಿ, ಮೌಗಲ್‌, ಮರಾಠರು, ಪೇಶ್ವೆಗಳು, ಹೈದರ್‌, ಟಿಪ್ಪು, ಮತ್ತೆ ಬ್ರಿಟಿಷರ ಕಾರುಬಾರುಗಳು ಇಲ್ಲಿನ ಇತಿಹಾಸ ಪುಸ್ತಕಕ್ಕೆ ಪುಟಗಳನ್ನು ಸೇರಿಸಿವೆ. ಬಾಗಲಕೋಟೆಗೆಂದು ಹೋದವರು ಸುತ್ತ ಮುತ್ತ ಊರುಗಳನ್ನು ನೋಡಲು ಹೋಗುತ್ತೀರಷ್ಟೆ. ಇಲ್ಲಿ ಪ್ರಸಿದ್ಧವಾಗಿರುವ ಇಳಕಲ್‌ ಸೀರೆಯನ್ನು ಕೊಂಡುಹೋಗಲು ಮರೆಯಬೇಡಿ. ಗುಳೇದ ಗುಡ್ಡದ ಖಣ, ಅಮೀನಾ ಗಡದ ಕರದಂಟು, ಮಹಾಲಿಂಗಪುರದ ಬೆಲ್ಲ ಎಲ್ಲದರ ಕುರಿತೂ ನೀವು ಓಡಾಡಲಿರುವ ಬಿಜಾಪುರ ನಿಮಗೆ ವಿವರಿಸುತ್ತದೆ. ಸುದ್ದಿಯಲ್ಲಿರುವ ಆಲಮಟ್ಟಿ, ಸರಕಾರದ ಕಿರಿಕ್ಕುಗಳಿಗೆ ಕಾಯದೆ ರೈತರೇ ನಿರ್ಮಿಸಿರುವ ಚಿಕ್ಕಪಡಸಲಗಿ ಬ್ಯಾರೇಜನ್ನು ನೋಡಿಕೊಂಡು ಹೋದರೆ ಇತಿಹಾಸಗಳಿಂದ ವರ್ತಮಾನದವರೆಗೆ ಬಿಜಾಪುರವನ್ನು ನೀವು ತಿಳಿದುಕೊಳ್ಳಬಹುದು. ನೀರಿಲ್ಲದ ಊರೆಂದು ಮೂಗು ಮುರಿದುಕೊಂಡು ಹೋಗುವ ಹಾಗಿಲ್ಲ. ಕೋಟಿಹಾಳದಲ್ಲಿ ಧುಮುಕುವ ಜಲಪಾತ ನಿಮ್ಮನ್ನು ಬೆರಗಾಗಿಸುತ್ತದೆ. ಇದೆಲ್ಲ ನೋಡಿಕೊಂಡು ನೀವು ಮನೆಗೆ ಹೋಗುವಾಗ, ಒಣ ಊರು, ಭಣಗುಟ್ಟುವ ಊರು ಎಂದು ಪತ್ರಿಕೆಗಳಲ್ಲಿ ಓದಿರುವುದು ಇದೇ ಊರಿನ ಬಗ್ಗೇನಾ ಅಂತ ಆಶ್ಚರ್ಯ ಪಡುತ್ತೀರಿ. ಹೌದೋ ಅಲ್ಲವೋ ಅಂತ ನಮಗೆ ಬರೆಯಿರಿ.

English summary
Bijapur gives you surprise at every corner
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X