• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂರ್ಯ ಕೀರ್ತಿ

By Super
|

'ಕೆಲವರು ಕೀರ್ತಿಯ ಬೆನ್ನು ಹತ್ತಿದರೆ, ಮತ್ತೆ ಕೆಲವರನ್ನು ಕೀರ್ತಿಯೇ ಬೆನ್ನು ಹತ್ತುತ್ತದೆ" ...ತುಂಬ ಜನ ಕೀರ್ತಿಯ ಬೆನ್ನುಹತ್ತಿ ಹೊರಡುತ್ತಿರುವಾಗ ಈ ಮಾತುಗಳು ಇವತ್ತು ನಮಗೆ ತುಂಬ ಮುಖ್ಯವಾಗುತ್ತವೆ. ವಿಶೇಷ ಅರ್ಥ ಕಂಡುಕೊಳ್ಳುತ್ತವೆ. ಈ ಮಾತನ್ನು ನಾವು ಕನ್ನಡ ಸಂದರ್ಭದ ಒಂದು ನಾಣ್ಣುಡಿ ಎಂದೂ ಕರೆಯಬಹುದು ತಾನೆ? ನಾಣ್ಣುಡಿಗಳಿಗೂ ಅಪವಾದವಿದ್ದರೆ ಅದು ನಮ್ಮ ನಡುವಿನ ನಿತ್ಯ ಚರಿತ್ರಕಾರ ಡಾ. ಸೂರ್ಯನಾಥ ಕಾಮತರಿಗೆ ಸಲ್ಲುತ್ತದೆ. ಈಗ ಕಾಮತರು ಬೇಡ ಬೇಡ ಎಂದು ಎಷ್ಟೇ ಬೇಡಿಕೊಂಡರೂ ಕೀರ್ತಿ ಅವರ ಬೆನ್ನು ಬಿಡುತ್ತಿಲ್ಲ. ಕಾಮತರಿಗೆ ಲಭಿಸಿರುವ ಕೀರ್ತಿ ಕೇವಲ ಆಕಸ್ಮಿಕವಲ್ಲ . ಅದವರ ಸಾಧನೆಯ ಫಲ. ಕಷ್ಟಗಳನ್ನು ಪ್ರೀತಿಯಿಂದ ಸಹಿಸಿಕೊಂಡದ್ದರ ಫಲ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ನಾವೂ ಕೂಡ.

ಸೂರ್ಯನಾಥ್‌ ಕಾಮತ್‌ ಅವರ ಹೆಸರನ್ನು ನೀವು ಕೇಳಿರದಿದ್ದರೆ 'ನಿಮಗೆ ಇತಿಹಾಸವೇ ಗೊತ್ತಿಲ್ಲ " ಅಂತ ಯಾರಾದರೂ ಅಪವಾದ ಹೊರಿಸಬಹುದು . ಕೆಲವು ವರ್ಷಗಳ ಹಿಂದೆ ಬೆಂಗಳೂರು ದೂರದರ್ಶನವು ಪ್ರಸ್ತುತ ಪಡಿಸಿದ ಒಂದಿಷ್ಟು ಇತಿಹಾಸ ಕಾರ್ಯಕ್ರಮದ ಮೂಲಕ ಕರ್ನಾಟಕದ ಬಹುತೇಕ ನೋಡುಗರಿಗೆ ಚಿರಪರಿಚಿತರಾಗಿರುವ ಡಾ. ಕಾಮತರು ನಮ್ಮ ನಡುವಿನ ಉತ್ತಮ ಇತಿಹಾಸಕಾರರು.

1937ರ ಏಪ್ರಿಲ್‌ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಕಾಮತ್‌, ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿಯನ್ನು (1959) ಪಡೆದು, ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿಯನ್ನು (1965) ಪಡೆದುಕೊಂಡರು. ಆರಂಭದ ದಿನಗಳಲ್ಲಿ ಮುಂಬಯಿಯ 'ಫ್ರೀ ಪ್ರೆಸ್‌ ಜರ್ನಲ್‌"ನಲ್ಲಿ ಕೆಲಸ ಮಾಡಿ ಅನುಭವ ಗಳಿಸಿಕೊಂಡ ನಂತರ ಬೆಂಗಳೂರಿನ ಪ್ರಸಿದ್ಧ ದೈನಿಕ 'ಪ್ರಜಾವಾಣಿ" ಹಾಗೂ ಮಾಸಪತ್ರಿಕೆ 'ಉತ್ಥಾನ"ಗಳಲ್ಲಿ ದುಡಿದು ಪತ್ರಿಕಾರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ. 1968ರಿಂದ 1981ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರವಾಚಕರಾಗಿ ಸೇವೆ ಸಲ್ಲಿಸಿ, ನಂತರ 1995ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ಗ್ಯಾಸೆಟಿಯರ್‌ ಇಲಾಖೆಯಲ್ಲಿ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿ ಈಗ ಶಾಂತ ಆದರೆ ಬಿಡುವಿಲ್ಲದ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ತಾವು ಕಲಿತ ಇತಿಹಾಸಕ್ಕೆ ಪ್ರಾಮಾಣಿಕ ಕೊಡುಗೆ ನೀಡಿರುವ ಕಾಮತ್‌ ಒಬ್ಬ ನಿಷ್ಠಾವಂತ ಇತಿಹಾಸಕಾರರಾಗಿ ಇತಿಹಾಸಾಸಕ್ತರ ನಡುವೆ ಬಹು ದೀರ್ಘಕಾಲ ಉಳಿದಿರುತ್ತಾರೆ. ಕರ್ನಾಟಕ ಇತಿಹಾಸಕ್ಕೆ ಹಾಗೂ ಕರ್ನಾಟಕಕ್ಕೆ ತಮ್ಮನ್ನು ಮುಡಿಪಾಗಿಸಿಕೊಳ್ಳುವ ಕನಸು ಹೊತ್ತು ಮುಂಬಯಿಯಿಂದ ಬೆಂಗಳೂರಿಗೆ ಬಂದ ಕಾಮತರ ಕನಸು ನನಸಾಗಿದೆ.

ತಮ್ಮ ವೃತ್ತಿ ಜೀವನದಲ್ಲಿ ಕನ್ನಡದಲ್ಲಿ ಮೂರು ಸಂಪುಟಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ಎರಡು ಸಂಪುಟಗಳಲ್ಲಿ ಕರ್ನಾಟಕ ರಾಜ್ಯದ ಗ್ಯಾಸೆಟಿಯರ್‌ನ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿರುವ ಡಾ.ಕಾಮತ್‌ ತಮ್ಮ ಸೇವಾವಧಿಯ ಕಾಲದಲ್ಲಿ ಏಳು ಜಿಲ್ಲೆಗಳ ಜಿಲ್ಲಾ ಗ್ಯಾಸೆಟಿಯರ್‌ಗಳನ್ನು ಮತ್ತು ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳೆರಡರಲ್ಲೂ ಕನಾಟಕ ಕೈಪಿಡಿಯನ್ನು ಪ್ರಕಟಿಸಿ ಇತಿಹಾಸದ ಅಧ್ಯಯನಕ್ಕೆ ಮಹತ್ತ್ವದ ಆಕರ ಗ್ರಂಥಗಳನ್ನು ಒದಗಿಸಿದ್ದಾರೆ.

ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕೆ ನಡೆದ ಹೋರಾಟದ ಎಲ್ಲಾ ವಿವರಗಳನ್ನು ಡಾ.ಕಾಮತ್‌ ಬಲ್ಲರು. ಅವರು ಮೂರು ಸಂಪುಟಗಳಲ್ಲಿ ಸಿದ್ಧಪಡಿಸಿರುವ ಸ್ವಾತಂತ್ರ ಸಂಗ್ರಾಮದ ಸ್ಮೃತಿಗಳು ಕೃತಿಯು ಮಹತ್ವದ ಆಕರ ಗ್ರಂಥವಾಗಿದೆ. ಆ ಸಂಪುಟಗಳ ಸಿದ್ಧತೆಯ ಸಂದರ್ಭದಲ್ಲಿ ಡಾ.ಕಾಮತ್‌ ಸಂಗ್ರಹಿಸಿದ್ದ ಮಾಹಿತಿಗಳು ಇನ್ನೂ ಅನೇಕ ಕೃತಿಗಳ ರಚನೆಗೆ ನೆರವಾಗಿವೆ ಎಂದು ತಿಳಿದರೆ, ಅದರಿಂದ ತಮಗೆ ಲಭ್ಯವಾದ ಮಾಹಿತಿಗಳನ್ನು ಡಾ.ಕಾಮತ್‌ ಎಷ್ಟರ ಮಟ್ಟಿಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದರ ಅರಿವಾಗುತ್ತದೆ. ಚರ್ವಿತ ಚರ್ವಣವಾಗುವಂತೆ ಡಾ.ಕಾಮತ್‌ ಸಾಮಾನ್ಯವಾಗಿ ಏನನ್ನೂ ಹೇಳುವುದಿಲ್ಲ.

ಎರಡು ಅನುಬಂಧಗಳ ಸಹಿತ ಒಂಭತ್ತು ಅಧ್ಯಾಯಗಳ ಪರಿಜಿನಲ್ಲಿ ಸಿದ್ಧವಾಗಿರುವ ್ಙಕ್ವಿಟ್‌ ಇಂಡಿಯಾ ಮೂವ್‌ಮೆಂಟ್‌ ಇನ್‌ ಕರ್ನಾಟಕ ್ಙ ಕೃತಿಗೆ ಆಕರಗಳನ್ನು ಒದಗಿಸಿ ಪ್ರೋತ್ಸಾಹ ನೀಡಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆಡಳಿತಪಟು ಆರ್‌.ಆರ್‌.ದಿವಾಕರ್‌ ಪುಸ್ತಕದ ಮುನ್ನುಡಿಯಲ್ಲಿ , For what followed in the nature of a struggle, the pages written so clearly and on the basis of facts and authentication by Dr.Suryanath Kamath are sufficient for the readers.

Only I wish every state in India had a Suryanath to do such a job for the people there ಎಂಬ ಮೆಚ್ಚುಗೆಯ ಮಾತುಗಳನ್ನು ದಾಖಲಿಸಿದ್ದಾರೆ. ಒಬ್ಬ ಲೇಖಕನಿಗೆ ಹಾಗೂ ಸಂಶೋಧಕನಿಗೆ ಇದಕ್ಕಿಂತ ಒಳ್ಳೆಯ ಮಾತುಗಳು ದೊರೆಯುವುದು ಕಷ್ಟ .

ಮೂರು ಸಂಪುಟಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳನ್ನು ಸಂಪಾದಿಸಿ, ಪ್ರಕಟಿಸಿ, ನಾಡಿನ ಇತಿಹಾಸಕಾರರ ವಲಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಡಾ.ಕಾಮತ್‌ ಅವರದು ಬಹುಮುಖ ಪ್ರತಿಭೆ. ಡಾ.ಕಾಮತ್‌ ಸೃಜನಾತ್ಮಕ ಕ್ಷೇತ್ರದಲ್ಲಿಯೂ ನೆನಪಿಡುವಂತಹ ನಾಲ್ಕು ಕಾದಂಬರಿಗಳು, ಒಂದು ಹರಟೆ ಹಾಗೂ ಹಲವು ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಇತಿಹಾಸವೆಂದರೇ ಕಾಮತ್‌ ಎಂದು ಅನೇಕ ಇತಿಹಾಸಕ್ತರು ತಿಳಿಯಲು ಮುಖ್ಯ ಕಾರಣವೆಂದರೆ, ಅವರು ಕರ್ನಾಟಕದ ಇತಿಹಾಸದ ಬಗೆಗೆ ಬರೆದಿರುವ ಹಲವು ಉತ್ತಮ ಕೃತಿಗಳು. ಕರ್ನಾಟಕದ ಪ್ರಾಚೀನ ಇತಿಹಾಸ ಮಾತ್ರವಲ್ಲದೆ, ಮಧ್ಯಕಾಲೀನ ಇತಿಹಾಸದ ಬಗೆಗೆ ಅಧಿಕೃತವಾಗಿ ಮಾತನಾಡಬಲ್ಲ ಹಲವೇ ವಿದ್ವಾಂಸರಲ್ಲಿ ಡಾ.ಕಾಮತ್‌ ಒಬ್ಬರು. ವಿಶೇಷವಾಗಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ, ಅದರಲ್ಲೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರದ ಬಗೆಗೆ ಡಾ.ಕಾಮತ್‌ ಒಂದು ಜೀವಂತ ಎನ್‌ಸೈಕ್ಲೋಪೇಡಿಯಾ ಎಂದರೆ ಅದು ಉತ್ಪ್ರೇಕ್ಷೆ ಯಲ್ಲ.

ಬೆಂಗಳೂರಿನ ಪ್ರಸಿದ್ಧ 'ಮಿಥಿಕ್‌ ಸೊಸೈಟಿ"ಯ ಹಾಗೂ ರಾಜ್ಯದ 'ಕರ್ನಾಟಕ ಇತಿಹಾಸ ಅಕಾದೆಮಿ"ಯ ಅಧ್ಯಕ್ಷರಾಗಿ ಡಾ.ಕಾಮತ್‌ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ.

ಈ ತಿಂಗಳ 26ನೇ ತಾರೀಖಿಗೆ ಡಾ. ಸೂರ್ಯನಾಥ ಕಾಮತ್‌ ತಮ್ಮ ಸಾರ್ಥಕ ಬದುಕಿನ 63 ವರ್ಷಗಳನ್ನು ದಾಟಿ 64ನೆಯ ವರ್ಷಕ್ಕೆ ಹೆಜ್ಜೆ ಇಡುತ್ತಾರೆ. ಆ ನೆನಪಿಗಾಗಿ ಅವರನ್ನು ಅಭಿನಂದಿಸಲು ಸಿದ್ಧತೆಗಳು ನಡೆದಿವೆ. ಅವರ 64ನೆಯ ಹುಟ್ಟುಹಬ್ಬದ ದಿನ ಸಂಜೆ ಅವರನ್ನು ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವಶಿಲ್ಪ ಸಭಾಂಗಣದಲ್ಲಿ ಸನ್ಮಾನಿಸಿ, ಆ ನೆನಪಿಗಾಗಿ ಸೂರ್ಯಕೀರ್ತಿ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಲಾಗುತ್ತದೆ.

English summary
Historian Suryanath Kamath
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more