ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು
ಬೆಳಗಾವಿ: ಎಂಜಿನಿಯರಿಂಗ್ ಮಾಡಿ ವೃತ್ತಿ ಪಡೆದರೆ ಜೀವನ ಉತ್ತಮವಾಗಿರುತ್ತದೆ. ಕೈತುಂಬ ಸಂಬಳ ಮತ್ತಿನ್ನೇನು ಬೇಕು ಎಂದು ಹೇಳುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಜನರು ಕೈಲಿದ್ದ ನೌಕರಿ ಬಿಟ್ಟು ಇಷ್ಟದ ಕೆಲಸ, ಸ್ವಂತ ಉದ್ಯಮ ಆರಂಭಿಸುತ್ತಾರೆ. ಅದೇ ರೀತಿ ಕರ್ನಾಟಕದ ಟೆಕ್ಕಿಯೊಬ್ಬರು ಹುಣಸೆ ಚೋಕೊ ಉತ್ಪನ್ನ ತಯಾರಿಸಿ ಅದಕ್ಕೆ ಜಾಗತಿಕ ಸ್ಥಾನಮಾನ ನೀಡಿದ್ದಾರೆ. ತಮ್ಮ ಉತ್ಪನ್ನಕ್ಕೆ ಪೇಟೆಂಟ್ ಪಡೆದಿದ್ದಾರೆ. ಇದೀಗ ಅವರು ದೊಡ್ಡ ಪ್ರಮಾಣದ ಹುಣಸೆ ಚೋಕೊ ವ್ಯವಹಾರ ಸ್ಥಾಪನೆಗೆ ಮುಂದಾಗಿದ್ದಾರೆ.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಂಜಿನಿಯರ್ ಗಿರೀಶ್ ಹಲಸಗಿ ಅವರಿಂದ ಈ ಸಾಧನೆ ಸಾಧ್ಯವಾಗಿದೆ. ಇವರು ತಾವು ಜೀವನದಲ್ಲಿ ಆರ್ಥಿಕವಾಗಿ ಮುಂದೆ ಬರುವ ಜೊತೆಗೆ ಸ್ಥಳೀಯ ಮಹಿಳೆಯರಿಗೂ ತಮ್ಮ ಉದ್ಯಮದಿಂದ ಆಸರೆಯಾಗಗಿದ್ದಾರೆ. ಹಲಸಗಿ ಹುಣಸೆ ಹಣ್ಣನ್ನು ದೇಶ, ವಿದೇಶಗಳಲ್ಲೂ ಜನಪ್ರಿಯಗೊಳಿಸಿದ್ದಾರೆ. ಸುಮಾರು ಒಂಬತ್ತು ವರ್ಷಗಳ ಕಠಿಣ ಪರಿಶ್ರಮ ಹಾಕಿದ್ದ ಇವರಿಗೆ ಇದೀಗ ದೇವರು ಕೈ ಹಿಡಿದಿದ್ದಾನೆ. ಅರ್ಥಾತ್ ಅಷ್ಟು ವರ್ಷಗಳ ಲಾಭ, ಪ್ರತಿಫಲ ಈಗ ದೊರೆಯುತ್ತಿದೆ ಎಂದು 'ಈಟಿವಿ ಭಾರತ್' ವರದಿ ಮಾಡಿದೆ.

ಪೇಟೆಂಟ್ ಪಡೆದ 'ಇಮ್ಲಿ ಚೋಕೊ'
ಗಿರೀಶ್ ಅವರು 'ಇಮ್ಲಿ ಚೋಕೊ' ಸಿಹಿತಿಂಡಿ ಉತ್ಪಾದಿಸುತ್ತಾರೆ. ಸ್ಥಳೀಯ ಕೆಲವು ಮಹಿಳೆಯರಿಗೆ ತಮ್ಮ ಉದ್ಯಮದಲ್ಲಿ ಕೆಲಸ ನೀಡಿದ್ದಾರೆ. ಕಳೆದ ವರ್ಷ 2025 ಏಪ್ರಿಲ್ 25 ರಂದು ಭಾರತೀಯ ಪೇಟೆಂಟ್ ಕಚೇರಿ ಅವರ ಉತ್ಪನ್ನಕ್ಕೆ ಪೇಟೆಂಟ್ ನೀಡಿದೆ. ಹಲವು ವರ್ಷಗಳ ಹಿಂದೆ ಹುಣಸೆ ಹಣ್ಣನ್ನು ಮರದಲ್ಲಿ ಕಿತ್ತು, ಸಿಪ್ಪೆ, ಬೀಜ ಬಿಡಿ, ಉಪ್ಪು, ಖಾರಾ, ಜೀರಿಗೆ ಹಾಕಿ ಅರಿದು ಕಡ್ಡಿಗೆ ಅಂಟಿಸಿ (ಚಿಗಳಿ) ತಿನ್ನುತ್ತಿದ್ದೇವು. ಇಂದಿನ ಮಕ್ಕಳಿಗೆ ಅದೆಲ್ಲವು ಅಸಾಧ್ಯ. ಅದಕ್ಕಾಗಿ ಅವರು ಚಾಕಲೇಟ್ ರೀತಿ, ಸಣ್ಣ ಕಡ್ಡಿಯಲ್ಲಿ ಹುಣಸೆಯ ಚಿಗಳಿ, ಇನ್ನಿತರ ಸಿಹಿ ತಿನಿಸು ಮಾಡಿ, ಪ್ಯಾಕೇಟ್ ರೂಪದಲ್ಲೂ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಹಳೇ ತಲೆಮಾಡಿನ ಸಂಸ್ಕೃತಿಯನ್ನು ಸಾರುತ್ತಿದ್ದಾರೆ. ಹರೀಶ್ ಅವರು ಹುಣಸೆ 'ಇಮ್ಲಿ ಚೋಕೊ'ವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು ದೃಢನಿಶ್ಚಯ ಮಾಡಿದ್ದು, ಅದರಲ್ಲಿ ಯಶಸ್ಸು ಸಹ ಹೊಂದಿದ್ದಾರೆ.
ಬಾಗಲಕೋಟೆಯಲ್ಲಿ ಹರೀಶ್ ಎಂಜಿನಿಯರಿಂಗ್ ಪೂರ್ಣ
ಹರೀಶ್ ಅವರ ಹಿನ್ನೆಲೆ ನೋಡುವುದಾದರೆ, ಅವರ ತಂದೆ ಮಹಾದೇವಪ್ಪ ನಿವೃತ್ತ ಶಿಕ್ಷಕರು. ತಾಯಿ ವೀರಮ್ಮ, ಇವರ ಮೂರನೇ ಪುತ್ರನಾಗಿ ಹರೀಶ್ ಅವರು ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಪದವಿ ಪಡೆದಿದ್ದಾರೆ. 2002ರಲ್ಲಿ ಎಂಜಿನಿಯರಿಂಗ್ ಮುಗಿಸಿ ಅವರು ದೊಡ್ಡ ಕಂಪನಿ ಸೇರಿ ಕೈತುಂಬ ಹಣ ಗಳಿಸಬಹುದಿತ್ತು. ಆದರೆ ಅವರು ತಮ್ಮೂರಿನಲ್ಲೇ ಇದ್ದು ಸ್ವಂತ ಉದ್ಯಮ ಹೊಂದಬೇಕೆಂಬ ಕನಸು ಕಟ್ಟಿದ್ದರು. ಹೀಗಾಗಿಯೇ ಅವರು ತಮ್ಮ ಕನಸಿನ ಹಾದಿ ತುಳಿದು ಈ ಉದ್ಯಮಕ್ಕೆ ಕಾಲಿಟ್ಟರು.
ಆರಂಭದಲ್ಲಿ ಕಾಗದದ ಚೀಲ ತಯಾರಿಕೆ
ಆರಂಭದಲ್ಲಿ ಅವರು ಕಾಗದದ ಚೀಲ ತಯಾರಿಸುತ್ತ ಸಣ್ಣದಾಗಿ ಆರಂಭಿಸಿದರು. ಬಳಿಕ ಇಮ್ಲಿ ಚೋಕೊ ತಯಾರಿಸಲು ಮುಂದಾದರು. ಅವರ ಉದ್ಯಮ ಪ್ರಯಾಣದಲ್ಲಿ ಪತ್ನಿ ಆಶಾ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಚೋಕೋವನ್ನು ಬಣ್ಣದ ಹಾಳೆಗಳಲ್ಲಿ, ಸಣ್ಣ ಆಕರ್ಷಕ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡುತ್ತಾರೆ. ವರ್ಣರಂಜಿತ ಅಲ್ಯೂಮಿನಿಯಂ ಫಾಯಿಲ್ ಬಳಸುತ್ತಾರೆ. ಗ್ರಾಹಕರಿಗೆ ಉತ್ತಮ ಉತ್ಪನ್ನ ನೀಡುವ ಗುರಿಯೊಂದಿಗೆ ಮಾರಾಟ ಮಾಡುತ್ತಾರೆ. ಮೇಳ ಇನ್ನಿತರ ಪ್ರದರ್ಶನಗಳಲ್ಲಿ ಅವರು ಮಳಿಗೆ ಹಾಕಿ ಪ್ರದರ್ಶಿಸಿದ್ದಾರೆ. ಜನರು ಅವರ ಉತ್ಪನ್ನಗಳಿಗೆ ಮಾರು ಹೋಗಿದ್ದಾರೆ. ಉತ್ತಮ ವಹೀವಾಟು ಅವರದ್ದಾಗಿದೆ.
17 ದೇಶಗಳಿಗೆ ಉತ್ಪನ್ನ ರಫ್ತು
ನಮ್ಮ ಉತ್ಪನ್ನ ಅಮೆರಿಕ, ಇಂಗ್ಲೆಂಡ್, ಇಟಲಿ, ಕೆನಡಾ, ರಷ್ಯಾ, ಆಸ್ಟ್ರೇಲಿಯಾ, ನಾರ್ವೆ ಮತ್ತು ಜರ್ಮನಿ ಸೇರಿದಂತೆ 17 ದೇಶಗಳಿಗೆ ಕಳುಹಿಸುತ್ತಿದ್ದೇನೆ. ಅಲ್ಲಿ ವಾಸಿಸುವ ನಮ್ಮ ಭಾಗದ ಜನರು ಇಮ್ಲಿ ಚೋಕೊವನ್ನು ಖರೀದಿಸುತ್ತಾರೆ. ಇಲ್ಲಿಗೆ ಬಂದಾಗಲೂ ಅದನ್ನು ಒಯ್ಯುತ್ತಾರೆ. ಇನ್ನು ಭಾರತದಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಗೆ ನಮ್ಮ ಉತ್ಪನ್ನ ಸರಬರಾಜು ಆಗುತ್ತದೆ ಎಂದು ಹರೀಶ್ ಅವರು ತಿಳಿಸಿದ್ದಾರೆ.












Click it and Unblock the Notifications