ಬರ್ಗರ್‌ಗಾಗಿ ಸರದಿ ಸಾಲಿನಲ್ಲಿ ನಿಂತ ಕೋಟ್ಯಧಿಪತಿ ಬಿಲ್ ಗೇಟ್ಸ್
ವಾಷಿಂಗ್ಟನ್, ಜನವರಿ 18: ಜಗತ್ತಿನ ಅತ್ಯಂತ ಸಿರಿವಂತರ ಪಟ್ಟಿಯಲ್ಲಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸರಳತೆ ಜಗತ್ ಪ್ರಸಿದ್ಧ.
ಕುಳಿತಲ್ಲಿಯೇ ಜಗತ್ತಿನ ಮೂಲೆಯಿಂದ ತಮಗೆ ಬೇಕಾದುದ್ದನ್ನು ತರಿಸಿಕೊಳ್ಳುವ ಸಾಮರ್ಥ್ಯ, ಹಣವುಳ್ಳ ಬಿಲ್ ಗೇಟ್ಸ್ $95.5 ಬಿಲಿಯನ್ ಸಂಪತ್ತಿನ ಒಡೆಯ. ಆದರೆ ಎಂದಿಗೂ ಸಿರಿವಂತಿಕೆಯ ಅಹಂ ಪ್ರದರ್ಶಿಸಿ ಮೆರೆದವರಲ್ಲ. ಇದಕ್ಕೆ ಮತ್ತೊಂದು ನಿದರ್ಶನ ದೊರಕಿದೆ.
ಕೋಟ್ಯಧಿಪತಿ ಬಿಲ್ ಗೇಟ್ಸ್ ಅವರಿಗೆ ಬರ್ಗರ್ ಅಚ್ಚುಮೆಚ್ಚಿನ ತಿನಿಸು. ಅವರು ಜನಸಾಮಾನ್ಯರಂತೆ ಸರದಿಯಲ್ಲಿ ನಿಂತು ಬರ್ಗರ್ ಖರೀದಿಸಿದ ಚಿತ್ರ ಈಗ ಎಲ್ಲೆಡೆ ವೈರಲ್ ಆಗಿದೆ.

ಕಳೆದ ಭಾನುವಾರ ಬಿಲ್ ಗೇಟ್ಸ್, ಸಿಯಾಟಲ್‌ನ ಡಿಕ್ಸ್ ಡ್ರೈವ್ ಇನ್ ಮಳಿಗೆಯಲ್ಲಿ ಎಲ್ಲರೊಂದಿಗೆ ಸರದಿಯಲ್ಲಿ ಕಾದು ನಿಂತಿದ್ದರು. ಕೆಂಪು ಸ್ವೆಟರ್, ಬೂದು ಬಣ್ಣದ ಪ್ಯಾಂಟ್ ಹಾಗೂ ಕಪ್ಪು-ಬಿಳಿ ಬಣ್ಣದ ಶೂ ಧರಿಸಿದ್ದ ಗೇಟ್ಸ್, ಎರಡೂ ಕೈಗಳನ್ನು ಪ್ಯಾಂಟಿನ ಜೇಬಿನೊಳಗಿರಿಸಿ ನಿಂತಿದ್ದಾರೆ.
ಸಾಮಾನ್ಯವಾಗಿ ಬರ್ಗರ್‌ಗೆ $7.68 ವೆಚ್ಚವಾಗುತ್ತದೆ. ಆದರೆ ಡ್ರೈವ್ ಇನ್ ಅಂಗಡಿಯಲ್ಲಿ ಡಿಲಕ್ಸ್ ಬರ್ಗರ್‌ಗೆ $3.40, ಫ್ರೈಸ್ $1.90 ಮತ್ತು ದೊಡ್ಡ ಕೋಕ್ ಕೇವಲ $2.38 ಮೊತ್ತಕ್ಕೆ ಸಿಗುತ್ತದೆ. ತಮ್ಮ ಸಂಪತ್ತಿನ ಬಹುಪಾಲು ಹಣವನ್ನು ದಾನ ಮಾಡುವುದರಲ್ಲಿ ಖುಷಿ ಪಡುತ್ತಿರುವ ಗೇಟ್ಸ್, ಕಡಿಮೆ ಹಣದ ಬರ್ಗರ್‌ಗಾಗಿ ಸರದಿಯಲ್ಲಿ ನಿಂತಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಅಲ್ಲಿ ನಿಂತಿದ್ದವರು ಗೇಟ್ಸ್ ಅವರನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಅವರ ಫೋಟೊವನ್ನು ತೆಗೆದು ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.












Click it and Unblock the Notifications