ಛತ್ತೀಸ್ ಗಢದಲ್ಲಿ ಜನರ ಕೈಯಲ್ಲೇ ನಿರ್ಮಾಣವಾದ ಹೈಸ್ಕೂಲ್!
ರಾಯ್ಪುರ, ಜುಲೈ 6: ಜಗತ್ತು ಎಷ್ಟೇ ಮುಂದುವರಿದಿದ್ದರೂ, ಇಂದಿಗೂ ಹಲವು ಕುಗ್ರಾಮಗಳಲ್ಲಿ ಶಾಲೆಗಳಿಲ್ಲ. ನಾಲ್ಕಕ್ಷರ ಕಲಿಯಬೇಕೆಂದರೆ ಎಂಟ್ಹತ್ತು ಮೈಲಿ ನಡೆಯಬೇಕಾದ ದುರಂತ ಹಲವರ ಬದುಕಿನಲ್ಲಿದೆ.
ಹೀಗಿರುವಾಗ ಸರ್ಕಾರ ಶಾಲೆಯನ್ನು ಕಟ್ಟುತ್ತದೆ ಎಂಬ ಯಾವ ಭರವಸೆಯನ್ನೂ ಇಟ್ಟುಕೊಳ್ಳದೆ, ಅದಕ್ಕಾಗಿ ಕಾಯದೆ, ಜನರೇ ಮುಂದಾಗಿ ಪ್ರೌಢಶಾಲೆಯನ್ನು ಕಟ್ಟಿದ ಸ್ಫೂರ್ತಿಯ ಕತೆಯೊಂದು ಇಲ್ಲಿದೆ.
ಛತ್ತೀಸ್ ಗಢದ ನವಾಬ್ರಿ, ಲಿಲ್ವ ಫಾಡ್ ಮತ್ತು ಕಿಶನ್ಪುರಿ ಎಂಬ ಮೂರು ಗ್ರಾಮಗಳಲ್ಲಿ ಯಾವುದೇ ಶಾಲೆಯಿರಲಿಲ್ಲ. ಅದಕ್ಕಾಗಿ ಇಲ್ಲಿನ ಮಕ್ಕಳು ವಿದ್ಯೆಯಿಲ್ಲದೆ, ಸುಮ್ಮನೆ ಹರಟುತ್ತಾ, ಕೂಲಿ ಕೆಲಸ ಮಾಡುತ್ತ ಕಾಲ ಕಳೆಯುತ್ತಿದ್ದರು.

ಒಂದಿಬ್ಬರು ಅಕ್ಷರ ಕಲಿಯುವ ಬಗ್ಗೆ ತೀರಾ ಆಸಕ್ತಿ ಇರುವವರು ಹತ್ತಾರು ಕಿ.ಮೀ.ದೂರದ ಶಾಲೆಗೆ ಹೋಗುತ್ತಿದ್ದರು. ಈ ಸಂಕಷ್ಟ ತಪ್ಪಿಸುವ ಸಲುವಾಗಿ ಇಲ್ಲಿನ ಜನರೇ ಒಂಮದಾಗಿ ಹಣ ಸಂಗ್ರಹಿಸಿ ಶಾಲೆಯೊಂದನ್ನು ಕಟ್ಟುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.
ಇನ್ನೂ ಅಚ್ಚರಿಯ ವಿಷಯ ಎಂದರೆ ಈ ಶಾಲೆ ಕಟ್ಟುವುದಕ್ಕೆ ಊರಿನ ಜನ ಯಾವುದೇ ಕಾರ್ಮಿಕರನ್ನೂ ಕರೆದಿಲ್ಲ. ಸ್ವತಃ ಅವರೇ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. 5 ಲಕ್ಷ ರೂಪಾಯಿಗಳನ್ನು ತಮ್ಮದೇ ಜೇಬಿನಿಂದ ಖರ್ಚು ಮಾಡಿ ಕಟ್ಟಡ ಕಟ್ಟಿದ್ದಾರೆ.
ಇದೀಗ ಶಾಲೆ ಆರಂಭವಾಗಿದೆ. ಊರಿನಲ್ಲಿರುವ ಮಕ್ಕಳೆಲ್ಲ ಸಂತಸದಿಂದ ಶಾಲೆಗೆ ಹೋಗುತ್ತಿದ್ದಾರೆ. ಶಿಕ್ಷಕರು ಬಂದಿದ್ದಾರೆ. ಸ್ವಾರ್ಥ ಮರೆತು ಈ ಊರಿನ ಜನರು ಮಾಡಿದ ಈ ಆದರ್ಶ ಕಾರ್ಯದಿಂದಾಗಿ ಮಕ್ಕಳ ಬದುಕಲ್ಲಿ ಹೊಸ ಬೆಳಕು ಮೂಡಿದೆ..












Click it and Unblock the Notifications