ಝೆನ್ ಕಥೆ: ನನ್ನ ಹಾಗೆ ಮಾಡಲು ನಿನ್ನಿಂದಾಗದು...
ಟೊಸೊಯಿ ತನ್ನ ಕಾಲದ ಪ್ರಸಿದ್ಧ ಝೆನ್ ಗುರುಗಳಲ್ಲಿ ಒಬ್ಬ. ಆತ ಒಂದೇ ಕಡೆ ನೆಲೆಸುತ್ತಿರಲಿಲ್ಲ. ಬೇರೆ ಬೇರೆ ಪ್ರದೇಶಗಳ ದೇವಾಲಯಗಳಲ್ಲಿ ನೆಲೆಸಿ ಝೆನ್ ಬೋಧಿಸುತ್ತಿದ್ದ. ಅವನು ಬೋಧಿಸಿದ ಕೊನೆಯ ದೇವಾಲಯದಲ್ಲಿ ಅಪಾರ ಅನುಯಾಯಿಗಳು ನೆರೆದಿದ್ದರು.
'ಇದೇ ನನ್ನ ಕೊನೆಯ ಉಪದೇಶ. ಬಳಿಕ ಈ ಬೋಧನೆಯ ಕೆಲಸವನ್ನು ನಾನು ಬಿಡುತ್ತೇನೆ' ಎಂದು ಟೊಸೊಯಿ ಹೇಳಿದ. ತನ್ನ ಎಲ್ಲ ಅನುಯಾಯಿಗಳಿಗೂ ಅಲ್ಲಿ೦ದ ತೆರಳುವಂತೆ ಸೂಚಿಸಿ ಯಾರು ಎಲ್ಲಿಗೆ ಬೇಕಾದರೂ ಇನ್ನು ಹೋಗಬಹುದು ಎ೦ದ. ಆ ನ೦ತರ ಟೊಸೊಯಿಯನ್ನು ಯಾರೂ ಕಾಣಲಿಲ್ಲ.
ಆತನ ಶಿಷ್ಯಂದಿರಲ್ಲಿ ಒಬ್ಬನಾದ ಕ್ಯೂಟೊ, ಮೂರು ವರ್ಷಗಳ ನ೦ತರ ಟೊಸೊಯಿಯನ್ನು ಸೇತುವೆಯೊಂದರ ಅಡಿಯಲ್ಲಿದ್ದ ಭಿಕ್ಷುಕರ ಗು೦ಪಿನಲ್ಲಿ ಕ೦ಡ. ತಕ್ಷಣವೇ ಆತನ ಬಳಿಗೆ ಹೋಗಿ ತನಗೆ ಧರ್ಮೋಪದೇಶ ಮಾಡಬೇಕೆ೦ದು ಕೋರಿಕೊ೦ಡ.

'ಒ೦ದೆರಡು ದಿನದ ಮಟ್ಟಿಗಾದರೂ ನಾನು ಇಲ್ಲಿ ಮಾಡಿದ ಹಾಗೆ ನೀನು ಕೂಡ ಮಾಡಬಲ್ಲೆಯಾದರೆ, ನಾ ನಿನಗೆ ಬೋಧಿಸಬಹುದು' ಎಂದು ಟೊಸೊಯಿ ಹೇಳಿದ.
ಅದರ೦ತೆಯೇ ಶಿಷ್ಯ ಕ್ಯೂಟೊ ಭಿಕ್ಷುಕನ೦ತೆ ವೇಷ ಧರಿಸಿ ಟೊಸೊಯಿಯೊ೦ದಿಗೆ ಒಂದು ದಿನ ಕಳೆದ. ಮರುದಿನ ಆ ಗುಂಪಿನಲ್ಲಿದ್ದ ಒಬ್ಬ ಭಿಕ್ಷುಕ ಮೃತಪಟ್ಟ. ಟೊಸೊಯಿ ಮತ್ತು ಆತನ ಶಿಷ್ಯ ಮಧ್ಯರಾತ್ರಿ ಆ ಭಿಕ್ಷುಕನ ಶವವನ್ನು ಹೊತ್ತುಕೊಂಡು ಹೋಗಿ ಬೆಟ್ಟದ ಪಕ್ಕದ ಜಾಗದಲ್ಲಿ ಹೂತು ಪುನಃ ಸೇತುವೆಯ ಜಾಗಕ್ಕೆ ಮರಳಿದರು.
ಟೊಸೊಯಿ ಉಳಿದ ಸಮಯದಲ್ಲಿ ನೆಮ್ಮದಿಯಿ೦ದ ನಿದ್ರಿಸಿದ. ಆದರೆ ಶಿಷ್ಯನಿಗೆ ನಿದ್ದೆ ಹತ್ತಲಿಲ್ಲ. ಬೆಳಿಗ್ಗೆಯಾದಾಗ ಟೊಸೊಯಿ ಹೇಳಿದ; 'ಈ ದಿನ ನಾವು ಭಿಕ್ಷೆ ಬೇಡುವ ಅಗತ್ಯವಿಲ್ಲ. ಸತ್ತ ಆ ನಮ್ಮ ಸ್ನೇಹಿತ ಸ್ವಲ್ಪ ಉಳಿಸಿ ಹೋಗಿದ್ದಾನೆ.'
ಆದರೆ ಕ್ಯೂಟೊನಿಗೆ ಸತ್ತ ಭಿಕ್ಷುಕ ಉಳಿಸಿದ್ದ ಆಹಾರದ ಒ೦ದು ಚೂರನ್ನೂ ತಿನ್ನಲು ಸಾಧ್ಯವಾಗಲಿಲ್ಲ.
'ಅದಕ್ಕಾಗಿಯೇ ನಾನು ಹೇಳಿದ್ದು, ಇದನ್ನು ನೀನು ನನ್ನ ಹಾಗೆ ಮಾಡಲು ಸಾಧ್ಯವಿಲ್ಲವೆ೦ದು' ಎಂದ ಟೊಸೊಯಿ, ಆ ತ೦ಗಳು ಆಹಾರವನ್ನು ಖಾಲಿ ಮಾಡುತ್ತಾ ಶಿಷ್ಯನತ್ತ ಗುಡುಗಿ, 'ತೊಲಗು ಇಲ್ಲಿ೦ದ. ಮತ್ತೆ೦ದೂ ನನ್ನನ್ನು ಕಾಡಬೇಡ.'
(ಸಂಗ್ರಹ)












Click it and Unblock the Notifications