ಝೆನ್ ಕಥೆಗಳು: ಬದುಕು ಅರ್ಥವಾಗುವುದು ಹೇಗೆ ಗೊತ್ತೇ?
ಶಿಷ್ಯನೊಬ್ಬ ಗುರುವಿನ ಬಳಿ ಹೋಗಿ, "ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಧ್ಯಾನ ಮಾಡಲಾಗುತ್ತಿಲ್ಲ. ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಅಳಲು ತೋಡಿಕೊಂಡ.
ಆಗ ಗುರು, "ಅದಕ್ಕೆಲ್ಲ ಚಿಂತಿಸಬೇಡ. ಒಮ್ಮೊಮ್ಮೆ ಹಾಗೆಲ್ಲ ಅನಿಸುತ್ತದೆ. ಈ ಬಗ್ಗೆ ಗಮನ ಕೊಡಬೇಡ" ಎಂದು ಸಮಾಧಾನದಿಂದ ನುಡಿದ.
ಸ್ವಲ್ಪ ದಿನಗಳ ನಂತರ ಆ ಶಿಷ್ಯ ಮತ್ತೆ ಗುರುವಿನ ಬಳಿ ಹೋದ. "ಗುರುಗಳೆ, ನನ್ನ ಧ್ಯಾನ ಸಫಲವಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ ಅನ್ನಿಸುತ್ತಿದೆ" ಎಂದು ಖುಷಿ ಹಂಚಿಕೊಂಡ.

ಆಗ ಗುರು, "ಅದಕ್ಕೆಲ್ಲ ಚಿಂತಿಸಬೇಡ. ಒಮ್ಮೊಮ್ಮೆ ಹಾಗೆಲ್ಲ ಅನಿಸುತ್ತದೆ. ಈ ಬಗ್ಗೆ ಗಮನ ಕೊಡಬೇಡ" ಎಂದು ಅದೇ ದಾಟಿಯಲ್ಲಿ ಹೇಳಿದ.
***
ಒಬ್ಬ ಗುರುವಿನ ಬಳಿಯಲ್ಲಿ ಶಿಷ್ಯನೊಬ್ಬ ಸಮಸ್ಯೆ ಹೇಳಿಕೊಂಡ, "ನನಗೆ ಝೆನ್ ಎಂದರೇನು ಎಂದೇ ಅರ್ಥವಾಗುತ್ತಿಲ್ಲ."
"ಅದು ಅರ್ಥವಾಗುವಂಥದ್ದಲ್ಲ!" ಎಂದ ಗುರು.
"ಅರ್ಥ ಮಾಡಿಸುವಿರಾ?" ಎಂದು ಶಿಷ್ಯ ಕೇಳಿದ.
"ಈ ಜಗತ್ತಿನಲ್ಲಿ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಿನ್ನ ತಾಯಿಯ ಪ್ರೀತಿ ನಿನಗೆ ಅರ್ಥವಾಗಿದೆಯೆ?" ಎಂದು ಗುರು ಕೇಳಿದ. ಶಿಷ್ಯನಲ್ಲಿ ಉತ್ತರವಿರಲಿಲ್ಲ. ಸುಮ್ಮನಾದ.
ಈ ಎರಡೂ ಝೆನ್ ಕಥೆಗಳು ನಾವು ಬದುಕನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಸೂಚ್ಯವಾಗಿ ಹೇಳುತ್ತವೆ. ನಾವು ಯಾವುದನ್ನೂ ಅತಿಯಾಗಿ ಯೋಚಿಸಬಾರದು. ನಮಗೆ ಏನೂ ತಿಳಿಯುತ್ತಿಲ್ಲ ಎನ್ನುವುದು ಮತ್ತು ಎಲ್ಲವೂ ತಿಳಿಯುತ್ತಿದೆ ಎನ್ನುವುದು ನಮ್ಮ ಕಲ್ಪನೆ ಮಾತ್ರ.
(ಸಂಗ್ರಹ)












Click it and Unblock the Notifications