ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 2)
(ಕಥೆಯ ಮುಂದಿನ ಭಾಗ) ಕಾಲೇಜಿನ ಸಭಾಂಗಣ ಯುವಕ-ಯುವತಿಯರಿಂದ ಕಿಕ್ಕಿರಿದಿದೆ. ಕಾಲೇಜಿನ ಸಾಂಸ್ಕೃತಿಕ ಉತ್ಸವದಲ್ಲಿ ಭಾವಗೀತೆ, ಚಿತ್ರಗೀತೆ, ಮಿಮಿಕ್ರಿ, ಡಬಲ್ ಮೀನಿಂಗ್ ಸಂಭಾಷಣೆಯ ನಾಟಕ, ಎಲ್ಲಾ ಮುಗಿದಿದೆ. ಕೊನೆಯಲ್ಲಿ ಉಳಿದಿರುವುದು ಫೈನಲ್ ಇಯರ್ ಹುಡುಗಿಯರ ಡಾನ್ಸ್ ಮಾತ್ರ. ಇದರ ಘೋಷಣೆಯಾಗುತ್ತಿದ್ದಂತೆಯೇ ಪಡ್ಡೆ ಹುಡುಗರೆಲ್ಲಾ ಹುಚ್ಚೆದ್ದು ಸೀಟಿ ಹೊಡೆಯಲು ಶುರು ಮಾಡಿದರು. ಕತ್ತಲು ಆವರಿಸಿದ ವೇದಿಕೆಯನ್ನು ಆತುರದಿಂದ ನೋಡುತ್ತಾ, ಸಭಾಂಗಣದ ಹಿಂಭಾಗದಲ್ಲಿ ನಿಂತಿದ್ದ ಕರ್ಣ, ಒಂದು ಮುಖಕ್ಕಾಗಿಯೇ ಕಾಯುತ್ತಿದ್ದಾನೆ. ದೈತ್ಯಾಕಾರದ ಸ್ಪೀಕರ್ಗಳಲ್ಲಿ "ಕ್ರೇಜಿ ಕಿಯಾ ರೆ" ಹಾಡು ಅಬ್ಬರಿಸಲು ಶುರುವಾಗುತ್ತದೆ. ಬೆಳಕು ಮೂಡಿದ ವೇದಿಕೆಯ ಮೇಲೆ ಐದು ಹುಡುಗಿಯರು ಮನ ಬಿಚ್ಚಿ ಸ್ಟೆಪ್ ಹಾಕಲಾರಂಭಿಸುತ್ತಾರೆ.
ಮಧ್ಯ ಹುಡುಗಿಯನ್ನು ನೋಡಿ ಕರ್ಣನ ಎದೆಬಡಿತ ತಾಳ ತಪ್ಪುತ್ತದೆ: ತನ್ನ ಹಂಸಿನಿ! ಕಪ್ಪು ಡ್ರೆಸ್ ಅಲ್ಲಿ ಮುದ್ದಾಗಿ ಕಾಣುತ್ತಿದ್ದಾಳೆ. ಒಂದಾದ ಮೇಲೊಂದು ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ತನ್ನ ಅಪ್ಸರೆಯನ್ನು ನೋಡಿ ಕರ್ಣ ಪ್ರೇಮಲೋಕದಲ್ಲಿ ತೇಲಾಡತೊಡಗುತ್ತಾನೆ. ತೇಲಾಡುತ್ತಾ ತೇಲಾಡುತ್ತಾ ನೃತ್ಯ ಮುಗಿದ್ದದ್ದೆ ಅವನಿಗೆ ಗೊತ್ತಾಗುವುದಿಲ್ಲ. ಪಮ್ಮಿ ಒಂದೆರಡು ಸಲ ಕರ್ಣನನ್ನು ಅಲ್ಲಾಡಿಸಿ, "ಎಕ್ಸ್ ಕ್ಯೂಸ್ ಮಿ ಸಾರ್. ಆಯ್ತು ಡ್ಯಾನ್ಸು. ವಾಪಸ್ ಬನ್ನಿ ಭೂಲೋಕಕ್ಕೆ" ಎಂದನು. "ಹಾ?" ಕರ್ಣನ ಕಣ್ಣು ಸುತ್ತಮುತ್ತಲಿನ ವಾತಾವರಣವನ್ನು ನೋಡ ತೊಡಗಿತು. ಉತ್ಸವ ಮುಗಿದ ಕಾರಣ ಎಲ್ಲರೂ ಹೊರದ್ವಾರಗಳ ಕಡೆ ನಡೆಯುತ್ತಿದ್ದಾರೆ.

ಕರ್ಣ ತನ್ನ ಹಂಸಿನಿಯನ್ನು ಈ ಸಲ ಸ್ವಲ್ಪ ಬುದ್ಧಿವಂತನಂತೆ ಮಾತಾಡಿಸೋಣ ಎಂದು ಪಮ್ಮಿಯ ಜೊತೆ ವೇದಿಕೆಯ ಬಳಿ ಹೋದನು. ಅವನ ಆಶ್ಚರ್ಯಕ್ಕೆ ಹಂಸಿನಿ ವೇದಿಕೆಯ ಹತ್ತಿರವೇ ಇದ್ದಾಳೆ. ಅಲ್ಲೇ ನಿಂತು ಒಬ್ಬ ಎತ್ತರದ ಹುಡುಗನ ಜೊತೆ ಮಾತಾಡುತ್ತಿದ್ದಾಳೆ. ಆ ಹುಡುಗ ನೋಡುವುದಕ್ಕೆ ಅಪಾ ಪೋಲಿ: ಕಿವಿಗೆ ಓಲೆ, ಜಾರಿಕೊಳ್ಳುತ್ತಿರುವ ಜೀನ್ಸ್ ಪ್ಯಾಂಟು, ಪೋನಿಟೇಲು. ಕರ್ಣನಿಗೆ ಮನದಲ್ಲೇನೋ ಕಿರಿಕಿರಿಯಾಗಿ ಸ್ವಲ್ಪ ದೂರದಲ್ಲೇ ನಿಂತನು. ಇದನ್ನು ಅರ್ಥ ಮಾಡಿಕೊಂಡು ಪಮ್ಮಿ ಏನೂ ಮಾತಾಡಲಿಲ್ಲ. ನಂತರ ಕರ್ಣ ತನ್ನ ಕನಸಿನಲ್ಲೂ ಊಹಿಸಲಾಗದ ಒಂದು ಘಟನೆ ನಡೆದು ಹೋಯಿತು. ಹಂಸಿನಿ ಇನ್ನೂ ಆ ಹುಡುಗನ ಜೊತೆ ಮಾತಾಡುತ್ತಿರುವಾಗಲೇ, ಅವನು ಬಗ್ಗಿ ಅವಳನ್ನು ಅಪ್ಪಿಕೊಂಡು ಬಿಟ್ಟ. ನಂತರ, "ಓಕೆ ಹಂಸ, ಬಾಯ್" ಎಂದು ವಿದಾಯ ಹೇಳಿ, ಜಾರಿಕೊಳ್ಳುತ್ತಿದ್ದ ಪ್ಯಾಂಟ್ ಅನ್ನು ಮೇಲೆ ಎಳೆದುಕೊಂಡು, ಹೊರ ಬಾಗಿಲ ಕಡೆ ನಡೆದ. ಪಮ್ಮಿ ಕರ್ಣನ ಕೈಯನ್ನು ಹಿಡಿದುಕೊಂಡ. ಎರಡು ಕ್ಷಣ ಸಮಯ ನಿಂತಂತಾಯಿತು.
ಕರ್ಣ ಮಸ್ತ್ ಹಿಡಿದ ಕಾಡಾನೆಯಂತೆ ಹುಚ್ಚೆದ್ದು ಸ್ಫೋಟಗೊಂಡ: "ಅಪ್ಕೊಬೇಕೆನೋ ಬೋಳಿಮಗ್ನೆ! ಇಲ್ಬಾರೋ, ಬ್ರಹ್ಮಾಂಡ ತೋರಿಸ್ತೀನಿ ಬಾರೋ!" ಇವನು ಉದ್ವೇಗದಿಂದ ಸ್ಫೋಟಗೊಂಡ ರೀತಿಯನ್ನು ನೋಡಿ ಸುತ್ತಮುತ್ತಲಿನವರೆಲ್ಲಾ ಬೆರಗಾದರೂ, ಗಾಬರಿಯೂ ಆದರೂ. ಇನ್ನೇನು ಕೊಲೆಯೇ ನಡೆದುಬಿಡುತ್ತದೇನೋ ಎಂದುಕೊಂಡು ಮೂರ್ನಾಲ್ಕು ಜನ ಪಮ್ಮಿಯ ಜೊತೆ ಸೇರಿಕೊಂಡು ಕರ್ಣನನ್ನು ನಿಯಂತ್ರಿಸಿದರು. ರಗ್ಬಿ ಕ್ರೀಡೆಯಲ್ಲಿ ಆಟಗಾರರು ಒಬ್ಬರ ಮೇಲೊಬ್ಬರು ದಬದಬ ಬೀಳುವಂತೆ ಪಮ್ಮಿ ಮತ್ತು ಅವನ ಸಹಾಯಕರು ಕರ್ಣನನ್ನು ನೆಲಕ್ಕುರುಳಿಸಿದರು. ಇವೇನನ್ನೂ ಗಮನಿಸದ ಅಪ್ಪಿರಾಯ, ಜನ ಸಮೂಹದ ಜೊತೆ ಹೊರಗೆ ಹೊರಟು ಹೋಗಿದ್ದ. ಇದ್ದಕ್ಕಿದ್ದಂತೆ ಏನೋ ಗಲಾಟೆಯಾದದ್ದನ್ನು ಕೇಳಿ ಎಚ್ಚೆತ್ತುಕೊಂಡ ಹಂಸಿನಿ, ಕರ್ಣನ ದಿಕ್ಕಿನಲ್ಲಿ ನೋಡ ತೊಡಗಿದಳು. ಇಬ್ಬರ ಕಣ್ಣುಗಳು ಒಂದು ಕ್ಷಣ ಭೇಟಿಯಾದವು. ಅವಳ ಗೊಂದಲ ಮುಖಭಾವದ ಒಳಗಿನ ನಿಗೂಢ ಮುಗ್ಧತೆಯನ್ನು ಗಮನಿಸುತ್ತಾ, ನೆಲದ ಮೇಲೆ ಕೂತಿದ್ದ ಕರ್ಣ ಶಾಂತನಾದನು.












Click it and Unblock the Notifications