• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 1)

By ಮಾಧವ ವೆಂಕಟೇಶ್
|

ಕರ್ಣ ಸ್ವಲ್ಪ ಹಿಂದೆ ಸರಿದುಕೊಂಡ. ಅವಳು ಅವನನ್ನು ನೋಡಿದಳೋ ಇಲ್ಲವೋ ತಿಳಿಯಲಿಲ್ಲ. ಅವಳ ಜೊತೆ ಇದ್ದ ಇಬ್ಬರು ಗೆಳತಿಯರು, "ಹಂಸ ನೋಡೇ ಅಲ್ಲಿ" ಎಂದು ಹೇಳಿ ಕಿಲಿಕಿಲಿ ನಕ್ಕರು. " ‘ಅಲ್ಲಿ' ಅಂದರೆ ನನ್ನ ಕಡೆ ನಾ?", ಕರ್ಣನಿಗೆ ಸಂದೇಹ ಶುರುವಾಯಿತು. ತಾನು ಅವಸಿಕೊಂಡಿದ್ದ ಕಾಲೇಜು ಕಟ್ಟಡದ ಕಂಬದ ಬದಿಯಿಂದ ಇಣುಕಿ ಹುಡುಗಿಯ ಕಡೆ ನೋಡಿದ. ಅವಳು ಅವನ ಕಡೆಯೇ ನೋಡುತ್ತಿದ್ದಳು. ಕರ್ಣನಿಗೆ ಎದೆಬಡಿತ ಹೆಚ್ಚಾಯಿತು. ಸರಕ್ಕನೆ ತನ್ನ ಬ್ಯಾಗ್ ಅನ್ನು ಹಿಡಿದು, ಹಿಂದೆ ತಿರುಗಿಕೊಂಡು ಓಡಲು ಮುಂದಾದ. ಬ್ಯಾಗಿನ ಒಂದು ಭಾಗ ಕಾಲಿಗೆ ಸಿಕ್ಕಿಹಾಕಿಕೊಂಡಿತು. ದಬ್ಬನೆ ಎಡವಿ ಬಿದ್ದ. ಇದನ್ನೆಲ್ಲಾ ಗಮನಿಸುತ್ತಿದ್ದ ಅವಳು ಮುಗುಳ್ನಕ್ಕಳು. ಕರ್ಣನಿಗೆ ಮುಖ ಕೆಂಪಾಯಿತು. ಮೆಲ್ಲನೆ ಕಣ್ಣೆತ್ತಿ ಅವಳ ನಗುಮುಖವನ್ನು ನೋಡಿದ.

ಮುಂದೆ ಲೆಕ್ಚರರ್ ಎಲೆಕ್ಟ್ರಿಕ್ ಸಿಗ್ನಲ್ಸ್ ಪಾಠ ಮಾಡುತ್ತಿದ್ದಾರೆ. ಆದರೆ ಕರ್ಣನ ಮೆದುಳು ಬೇರ್ಯಾವೋ ಸಿಗ್ನಲ್ ಗಳಿಂದ ಆವರಿಸಿದೆ. ಇವತ್ತು ಅವಳು ಶಾರ್ಟ್ ಕುರ್ತಾ ಧರಿಸಿದ್ದಾಳೆ. ತುಂಬಾ ಗಂಭೀರವಾಗಿ ನೋಟ್ಸ್ ಬರೆದುಕೊಳ್ಳುತ್ತಿದ್ದಾಳೆ. ಬರೆಯುತ್ತಾ ಬರೆಯುತ್ತಾ ಮುಂಗುರುಳು ಕಣ್ಣಿನ ಮುಂದೆ ಬಂದಿತು. ಅದನ್ನು ತನ್ನ ಸೂಕ್ಷ್ಮ ಕೈಗಳಿಂದ ಹಿಂದೆ ಮಾಡಿಕೊಂಡಳು. ಅದೆಂಥಾ ಸುಂದರ ಮುಖ, ಎಂಥಾ ಸೌಮ್ಯ ಮುಖಭಾವ! ಕರ್ಣನಿಗೆ ಯಾಕೋ ಅವಳ ಮುಖದಿಂದ ಕಣ್ಣು ಸೆಳೆಯಲು ಸಾಧ್ಯವೇ ಆಗುತ್ತಿಲ್ಲ. ಇದ್ದಕ್ಕಿದ್ದಂತೆ ಇಡೀ ಕ್ಲಾಸ್ ಅವನ ಕಡೆ ನೋಡ ತೊಡಗಿತು. ಕರ್ಣ ಎಚ್ಚೆತ್ತುಕೊಂಡ. ಸ್ವಲ್ಪ ಗೊಂದಲದಿಂದ ಮುಂದೆ ನೋಡಿದ. ಲೆಕ್ಚರರ್ ಪಾಠ ನಿಲ್ಲಿಸಿ ಅವನನ್ನು ಮೌನವಾಗಿ ನೋಡುತ್ತಿದ್ದರು. ಹುಡುಗರೆಲ್ಲಾ ಝಳ್ ಎಂದು ನಕ್ಕರು. ಕರ್ಣ ತನ್ನ ಬ್ಯಾಗ್ ಅನ್ನು ತೆಗೆದುಕೊಂಡು ಬಾಗಿಲ ಹತ್ತಿರ ನಡೆದ. ದಾರಿಯಲ್ಲಿ ಒಮ್ಮೆ ಅವಳ ಕಡೆ ನೋಡಿದ. ಅವಳು ಗೆಳತಿಯರ ಜೊತೆ ಮಾತಾಡಿಕೊಂಡು, ಅವನ ಕಡೆ ನೋಡುತ್ತಾ ನಗುತ್ತಿದ್ದಳು. ಸಾರ್ಥಕವಾಯಿತು ಎಂದುಕೊಂಡು ಕರ್ಣ ಕ್ಲಾಸಿನ ಹೊರಗೆ ನಡೆದ.

ಕರ್ಣ ಮತ್ತು ಪಮ್ಮಿ ಇಬ್ಬರೂ ಪಾರ್ಕಿಂಗ್ ಲಾಟ್ ಅಲ್ಲಿ ಎರಡು ಬೈಕಿನ ಮೇಲೆ ಕೂತಿದ್ದಾರೆ. ಅವಳು ಬರುವುದು ಇವತ್ತು ಯಾಕೋ ತಡವಾಗಿದೆ. ಕರ್ಣ ನಿರೀಕ್ಷೆಯಿಂದ ನೋಡತೊಡಗಿದ. "ಇವತ್ ಬರಲ್ಲಾ ಅನ್ಸತ್ತೆ", ಪಮ್ಮಿ ನುಡಿದ. "ಇಲ್ಲ ಇಲ್ಲ. ಇವತ್ ಪ್ರಾಕ್ಟಿಕಲ್ಸ್ ಇದೆ ಅವಳ್ಗೆ. ಬಂದೇ ಬರ್ತಾಳೆ", ಎಂದ ಹಠವಾದಿ ಕರ್ಣ. ನೂರು ವರ್ಷ ಆಯಸ್ಸು ಎಂಬಂತೆ ಅವಳ ಹೋಂಡಾ ಆಕ್ಟಿವ ಪಾರ್ಕಿಂಗ್ ಲಾಟ್ ಬಳಿ ಬಂದಿತು. ಗಾಡಿಯನ್ನು ಅಲ್ಲೇ ಒಂದು ಕಡೆ ನಿಲ್ಲಿಸಿದಳು. ಯಾವುದೋ ಅತೀಂದ್ರಿಯ ಶಕ್ತಿ ತನ್ನನ್ನು ಪ್ರೇರೇಪಿಸಿದಂತೆ, ಕರ್ಣ ಹಠಾತ್ತನೆ ಎದ್ದು ಅವಳೆಡೆಗೆ ನಡೆಯಲು ಆರಂಭಿಸಿದ. ಪಮ್ಮಿ ಅವನನ್ನು ತಡೆಯಲು ಪ್ರಯತ್ನಿಸಿದ, "ಏನ್ ಮಾಡ್ತಿದ್ಯ?" ಕರ್ಣ ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ನೇರನೆ ಹೋಗಿ ಅವಳ ಗಾಡಿಯ ಹಿಂದೆಯೇ ನಿಂತ. ಅವಳು ಸೈಡ್ ಸ್ಟಾಂಡ್ ಹಾಕಿ ಹಿಂದೆ ತಿರುಗಿದಳು. ಮುಂದೆಯೇ ನಿಂತ ಕರ್ಣನನ್ನು ನೋಡಿ ಬೆಚ್ಬಿದ್ದಳು.

ಕರ್ಣನಿಗೆ ಕೆಲವು ಕ್ಷಣಗಳ ಹಿಂದೆ ಪ್ರೇರೇಪಿಸಿದ ಶಕ್ತಿ ಈಗ ಕೈಕೊಟ್ಟಿತು. ಯಾವ ಪದವೂ ಹೊರ ಬರಲಿಲ್ಲ. ಇಬ್ಬರೂ ಎರಡು ಕ್ಷಣ ಸುಮ್ಮನೆ ನಿಂತರು. ಸ್ವಲ್ಪ ಚೇತರಿಸಿಕೊಂಡು ಕರ್ಣ ಕೊನೆಗೆ ಕೀರಲು ಧ್ವನಿಯಲ್ಲಿ, "ಹಾಯ್" ಎಂದನು. ಅವಳು ಮುಸುಮುಸು ನಗುತ್ತಾ ಹಾಯ್ ಎಂದಳು. ಕರ್ಣ, "ನಿಮ್ಮ ಹೆಸರು - ಹಂಸಿನಿ - ಇದರ ಅರ್ಥ ಏನು?" ಎಂದು ಕೇಳಿದ. ಕೇಳಿ ತನ್ನಲ್ಲೇ ಯೋಚಿಸಿದ, "ಭೇಷ್ ಭೇಷ್. ಎಂತಾ ಪ್ರಶ್ನೆ ಗುರು? ಇದಕ್ಕಿಂತ ಮೂರ್ಖ ಮುನ್ನುಡಿ ಸಾಧ್ಯವಾ?" ಆದರೆ ಅವಳು ಹರ್ಷದಿಂದಲೇ ಉತ್ತರಿಸಿದಳು, "ಹಂಸಿನಿ ಅಂದ್ರೆ ಹಂಸದ ಮೇಲೆ ಸವಾರಿ ಮಾಡುವವಳು ಎಂದು. ಪರೋಕ್ಷವಾಗಿ ದೇವಿ ಸರಸ್ವತಿಯ ಹೆಸರು". ಅವಳು ಕರ್ಣನ್ನನ್ನೇ ದಿಟ್ಟಿಸಿ ನೋಡಿದಳು. ಅವಳ ಅಗಲ ಕಣ್ಣುಗಳು ಹವಳದಂತೆ ಹೊಳೆಯುತ್ತಿದ್ದವು. ಕರ್ಣ ತನ್ನ ಕಣ್ಣುಗಳನ್ನು ನೆಲೆದ ಕಡೆ ಸೆಳೆದುಕೊಂಡು, "ಆಯ್ತು ಥ್ಯಾಂಕ್ಸ್" ಎಂದು ಹೇಳಿ, ಪಮ್ಮಿ ಕೂತಿದ್ದ ಜಾಗಕ್ಕೆ ಓಡಿ ಹೋದನು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karna was madly in love with most beautiful Hasmsini. One fine day he proposed her too. Did she accept his proposal? Did he get what he wanted? Who was that monk who changed the direction of Karna? Long story by Madhava Venkatesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more