ಏನಂತೀರಿ ರಸಿಕರು ನೀವಲ್ಲವೇ?

ನುಣ್ಣನೆಯ ಚರ್ಮವನು ಹಿಡಿದು ಮುಚ್ಚಿದೆಯೇಕೆ?
ರೇಶಿಮೆಯ ಸೀರೆಯು ಸುತ್ತಿ ಸುತ್ತಿ ಮುಚ್ಚಿಹಾಕಿದೆ
ಬಳುಕುತಿಹ ದೇಹವನು ಅಪ್ಪುತಲಿ ಎಲ್ಲೆಲ್ಲೂ ಸವರುತಿದೆ
ಬಣ್ಣ ಬಣ್ಣದ ಬಳೆಗಳು ಎರಡೂ ಕೈಯ ಮೇಲೆ
ಝಣ ಝಣ ಸುರಸಂತೂರ ಸಂಗೀತವನೇ ಹೇಳೆ
ಕಾಲುಂಗರದ ಗೆಜ್ಜೆಗಳು ಹಾಕುತಿವೆ ನಾಟ್ಯದ ತಾಳ
ಕಾಲೆರಡೂ ಕುಣಿದು ಶಾಂತಲೆಗೆ ನಟುವಂಗದ ಮೇಳ
ಸೊಂಟವನು ಸುತ್ತಿ ಅಪ್ಪಟ ಚಿನ್ನ ಡಾಬು ಬಿಗಿದಪ್ಪಿದೆ
ಹೊಕ್ಕಳಿನ ಕೆಳಗೆ ಮುತ್ತಿನ ಗೊಂಚಲು ವಿರಾಜಿಸುತಿದೆ
ದಟ್ಟ ಜಡೆಯ ತೊಡೆಯುದ್ದದ ಕುಚ್ಚು ಚಿಮ್ಮುತಿದೆ
ಬಳುಕುವ ನಡುಗೆಯ ಚೆಂಡುಗಳ ಆಟವನೇ ಆಡುತಿದೆ
ಮಲ್ಲಿಗೆಯ ದಂಡೆಯು ಮುತ್ತಿಡುತಿದೆ ಎರಡೂ ಕೆನ್ನೆಗೆ
ಅತ್ತಿತ್ತ ಜಡೆಯು ಚಿಮ್ಮುತಲಿ ಬೀಸುತಾ ಇರುವಾಗ
ರವಿಕೆಯ ಪುಣ್ಯವೆಲ್ಲವೂ ಈಗಲೇ ನನದಾಗಲೇ?
ಸೀರೆಯಂತೆ ಅವಳ ಮೈಯೆಲ್ಲ ಸುತ್ತಿ ಅಪ್ಪಿಕೊಳ್ಳಲೇ?
ಜಡೆಯು ನಾನಾಗಲೇ, ಕುಣಿದು ಕುಪ್ಪಳಿಸಿ ಮುತ್ತಿಡಲೇ?
ಮಲ್ಲಿಗೆಯ ದಂಡೆಯ ಜೊತೆಗೆ ಸುಗಂಧ ಹೀರಿ ಬಿಡಲೇ?
ಏನಂತೀರಿ ನೀವೆಲ್ಲ? ರಸಿಕ ಕವಿ ಜನ ನೀವಲ್ಲವೇ?
ಒಂದೇಕೆ, ಎರಡೇಕೆ, ಎಲ್ಲವೂ ನಾನೇ ಆಗಬಹುದಲ್ಲವೇ!












Click it and Unblock the Notifications