ಪ್ರೇಮಿಗಳ ದಿನ, ಮತ್ತೆ ಪುನರ್ಮಿಲನ

ನ್ಯಾಯಾಲಯದಲ್ಲಿ ಕೋರಿದ್ದನವ ನಮ್ಮ ವಿಚ್ಚೇದನ
ನಾನು ಅವನು ಈ ನ್ಯಾಯಾಲಯದ ಮೆಟ್ಟಿಲೇರುತ್ತ
ಜಾರಿದ್ದು ತಿಳಿಯಲಿಲ್ಲ ಮದುವೆಯಾಗಿ ವರ್ಷಗಳಿಪ್ಪತ್ತು
ಅದೇ ಬಾಗಿಲು ಅದೇ ಕೋಣೆ ಅದೇ ಕುರುಡು ದೇವತೆ
ಅದೇ ಬೆಂಚು ಅದೇ ಸಾಕ್ಷಿದಾರರ ಕಟಕಟೆ
ಆಗಾಗ ಬದಲಾಗುವ ನ್ಯಾಯಮೂರ್ತಿಗಳ ಮುಂದೆ
ಅಗ್ನಿಸಾಕ್ಷಿಯಾಗಿ ಹಸೆಮಣೆ ಮೇಲೆ ನಿಂತಂತೆ ಹಿಂದೆ
ಈಗಲೂ ನಿಲ್ಲುತ್ತೇವೆ ಅಕ್ಕಪಕ್ಕ ಹತ್ತಿರ ಹತ್ತಿರ
ಪ್ರತಿ ಭೇಟಿಯಲ್ಲಿ ಸರಿಯುತ್ತ ಒಳಗೆ ದೂರ ದೂರ
ಯೌವನದ ಕಾವಿನಲಿ ಪ್ರೀತಿಯನು ಹುರಿ
ದವಗೆ ವಿಚ್ಛೇದನ ಪಡೆಯುವುದೊಂದೇ ಗುರಿ
ನನಗೆ ಬೆಳೆದ ಮಕ್ಕಳೊಂದಿಗಿರುವುದೊಂದೇ ದಾರಿ
ನನಗೆ ಅವಗೆ ನ್ಯಾಯ ದೊರಿಕಿಸುವ ವಕೀಲರು ಅವರೆ
ಪ್ರತಿಸಲ ಅವರ ವಾದಗಳು ಗತ್ತುಗಳು ಬೇರೆಬೇರೆ
ವಾದಿ ಪ್ರತಿವಾದಿಗಳಲೊಬ್ಬ ಬರದಿರುವುದು ಮಮೂಲು
ಹಾಜರಿದ್ದಿವ ಪ್ರಾರ್ಥಿಸುವ ಮುದ್ದತು ಮುಂದೂಡಲು
ಮತ್ತೆರಡು ತಿಂಗಳ ನಂತರ ನಮ್ಮ ಪುನರ್ಮಿಲನ
ಅದು ತೀರದ ತೀರ್ಪು ಇದು ಬಿಡದ ಬ್ರಹ್ಮ ಬಂಧನ
ಬಾಳ ಚಳಿಯಲಿ ಹೀಗೆ ಸಾಗಿದೆ ಈ ವಿವಾಹ ಸಂಧಾನ












Click it and Unblock the Notifications