ಪಿಆರ್ ತಿಪ್ಪೇಸ್ವಾಮಿ : ಸದಾ ಇವರು ಹೀಗೆಯೇ

* ಜಾನಕೀಸುತ
ಸದಾ ಇವರು ಹೀಗೇಯೇ,
ತಮ್ಮ ತುಸು ದಢೂತಿ ದೇಹವನ್ನು
ಜುಬ್ಬಾ ಪೈಜಾಮದೊಳಗೆ ತೂರಿಸಿ
ತಮ್ಮ ಬಕ್ಕ ತಲೆಯ
ಅಳೆದುಳಿದ ಪಳೆಯುಳಿಕೆಗಳ ಮೇಲೆ
ಬಾಚಣಿಗೆಯಾಡಿಸಿ
ಕಣ್ಣಿಗೆ ಚಶ್ಮ ಏರಿಸಿ
ಕಾಲಿಗೊಂದು ಜೊತೆ ಚಪ್ಪಲಿ ಜೋಡಿಸಿ
ಮಹಡಿ ಮೇಲಿನ ತಮ್ಮ
ವಾಸದ ಕೋಣೆಯಿಂದ ಮೆಟ್ಟಿಲಿಳಿದು
ದಾಪುಗಾಲಿಕ್ಕಿ ಹೊರಟರೆ
ಹಳ್ಳಿಗಾಡಿನ ಪಟೇಲುಗಾರಿಕೆಯೊಂದು
ಮೈಸೂರು ನಗರಕ್ಕೆ ಬಂದ ಅನುಭವ
ಇವರು ಹೀಗೇಯೇ
ರಮಾವಿಲಾಸ ರಸ್ತೆಯುದ್ದ ಸಾಗಿ
ತಮ್ಮ ಅನುಭವ ಮಾಗಿದ ಕಣ್ಣುಗಳಲ್ಲೂ
ಸುಕ್ಕುಗಟ್ಟಿದ ಮುಖದಲ್ಲೂ
ಚಿರನೂತನ ಸುಪ್ರಸನ್ನತೆ ಸೂಸಿ
ಎದುರು ಸಿಕ್ಕವರಲ್ಲಿ
ನಮಸ್ಕಾರ ಪ್ರತಿವಿನಿಮಯಿಸಿ
ಉಭಯ ಕುಶಲೋಪಚಾರಿಸಿ
ಮುಂದೆ ಹೊರಟು
ಜಗನ್ಮೋಹನ ಅರಮನೆ ರಸ್ತೆಗೆ
ತಿರುಗಿ, ಈ ಇಳಿವಯಸ್ಸಿನಲ್ಲೂ
ದಾಪುಗಾಲಿಕ್ಕಿದರೆಂದರೆ
ಅವರ ಸಮ ಹೆಜ್ಜೆ ಹಾಕುತಿರುವವರು
ಅವರ ಹಿಂದೆ ಓಡಬೇಕು
ಹಾಗೆ ಮಾಡಿಬಿಡುತ್ತಾರೆ
ಹೀಗೇಯೇ,
ಜಗನ್ಮೋಹನ ಅರಮನೆ ಮುಂದಿನಿಂದ
ಸಂತೆಪೇಟೆ ಗಲ್ಲಿಗೆ ತಿರುಗಿ
ಲ್ಯಾನ್ಸ್‌ಡೌನ್ ಬಿಲ್ಡಿಂಗ್‌ನ ಮುಂದೆ ಹಾದು
ಸಯ್ಯಾಜಿರಾವ್ ರಸ್ತೆಗೆ ಸೇರಿ
ಬ್ಯಾಂಕು, ಫೋಸ್ಟಾಫೀಸು
ಆ ಆಫೀಸು, ಈ ಆಫೀಸು
ಅವರ ಮನೆ, ಇವರ ಮನೆ
ಹೀಗೆ
ಕೆಲಸವಿಲ್ಲದವರ ಹಾಗೆ
ಹಚ್ಚಿಕೊಂಡ ಅವರಿವರ
ನೂರೆಂಟು ಕೆಲಸ
ತರಲೆ, ತಾಪತ್ರಾಯ
ಎಲ್ಲಾ ಮುಗಿಸಿಕೊಂಡು
ಮತ್ತೆ
ಅದದೇ ರಸ್ತೆಗುಂಟ ಹಾದು
ತಮ್ಮ ವಠಾರ ಹೊಕ್ಕು
ಈ ಇಳೀ ವಯಸ್ಸಿನಲ್ಲೂ
ಮೆಟ್ಟಿಲುಗಳನ್ನು
ನಿರಾಯಾಸವಾಗಿ ಏರುತ್ತಾ
ನೋಡುವವರಲ್ಲಿ ಅಚ್ಚರಿ
ಮೂಡಿಸಿ ಮೇಲೇರುವರು
ತಮ್ಮ ಜೀವನದ ರೀತಿಯಂತೆ
ಸರಳತೆಯ, ಸದಭಿರುಚಿಯ ಖ್ಯಾತಿಯಂತೆ;
ನಾವೆಂದು ಏರದ ಎತ್ತರಕ್ಕೆ!
ಪಿ.ಆರ್. ತಿಪ್ಪೇಸ್ವಾಮಿಯವರು ರಚಿಸಿದ ಅಪರೂಪದ ಜಲವರ್ಣ ಚಿತ್ರಗಳು
ಆರ್ಕುಟ್‌ನಲ್ಲಿರುವ ಅವರ ಹೆಸರಿನ ಕಮ್ಯೂನಿಟಿಯ ಸದಸ್ಯರಾಗಿ












Click it and Unblock the Notifications