ಕವನ:ಪ್ರೆಸ್ಸಿನಲಿ ಮೊಳೆ ಜೋಡಿಸುವ ಹುಡುಗಿ
*ನಾಗರಾಜ್ ಅಪಗಾಲ್, ಹೊನ್ನಾವರ
ಈ ಬೆಡಗಿ
ಪ್ರೆಸ್ಸಿನಲಿ ಮೊಳೆ ಜೋಡಿಸುವ
ಹುಡುಗಿ
ಹೆಕ್ಕಿ ಹೆಕ್ಕಿ ನಾಲ್ಕಕ್ಷರವ ಕಲಿತು
ಈಗ ನಿತ್ಯವೂ ನೂರಾರು ಅಕ್ಷರಗಳ
ಹೆಕ್ಕಿ ಹೆಕ್ಕಿ ಜೋಡಿಸುವೀಕೆ
ಥೇಟ್ ಗೂಡು ಹೆಣೆಯುವ
ಗುಬ್ಬಚ್ಚಿ
ಕೈಯೊಳಗೋ
ಸದಾ ಯಾರ್ಯಾರದೋ ಹಸ್ತಪ್ರತಿ;
ತೆಗೆಯುತ್ತಾಳೆ ನಿತ್ಯ
ಯಥಾಪ್ರತಿ
ಮೂಲದಲಿ
ತಿರುವು-ಮುರುವಾಗಿ
ಅರ್ಥ ಆಕಾರವೊಂದು ಇರದ
ಈ ಮೊಳೆಗಳು ಅಕ್ಷರದ ಅಚ್ಚುಗಳಾಗಿ
ಒಂದಕೊಂದು ಸುಸಂಭದ್ದವಾಗಿ ಸೇರಿ ಶಬ್ಧವಾಗಿ
ಸಾವಿರ(ದ) ಸದ್ದಾಗಿ, ಸಾಲು ಸಾಲಾಗಿ
ಗಿಡ್ಡ ಸಾಲಿನ ಕವಿತೆಯಾಗಿ
ದೊಡ್ಡ ಸಾಲಿನ ಕತೆಯೋ ಕಾದಂಬರಿಯೋ ಆಗಿ
ನಾ-ನಾ ಆಕೃತಿಯಾಗಿ
ನವಿರಾದ ಕೃತಿಯಾಗಿ
"ನಾದದ ನವನೀತ"ವಾಗಿ
ಪ್ರಶಸ್ತಿ-ಪುರಸ್ಕಾರ; ಹಾರ-ತುರಾಯಿ...
ಎಂದೆಲ್ಲ ಹಾರಾಡಿ
ಮನೆ ಮನೆಯ ಮಾತಾಗಿ ಹೋಗುವ ಪರಿಗೆ
ಈಕೆಗೆ ಎಲ್ಲಿಲ್ಲದ ಬೆರಗು
ಇದ್ದಿಲು ವಜ್ರವಾಗುವಂತೆ...
ಥಟ್ಟನೆ ಎನೋ ಹೊಳೆದಂತೆ...
ಅಂದುಕೊಳ್ಳುತ್ತಾಳೆ:
ಓಹ್, ಈ ಜಗದ ಅಣು ಅಣುವಿನ
ಸುಸಂಗತ ಜೋಡಣೆ, ಬರೀ ಜೋಡಣೆಯಲ್ಲ;
ಅದು ಹೊಸ-ಹೊಸ ಹುಟ್ಟಿನ
"ಜೀವಧಾರಣೆ" ಎಂದು.
(ನಾಗರಾಜ್ ಅಪಗಾಲ್ ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು)











Click it and Unblock the Notifications