ಸನಾತನಿಯ ಜೊತೆ ಸಂಭಾಷಣೆ

ಗಂಡಸರೆಂದರೆ ಅತೀ ತಕರಾರಿನವರು
ಸಂಪ್ರದಾಯಸ್ತಳಾದರೂ ಆಧುನಿಕಳಾದರೂ
ಸೀರೆ ಉಟ್ಟರೂ ಪ್ಯಾಂಟು ತೊಟ್ಟರೂ
ಮಾತಾಡಿದರೂ ಆಡದಿದ್ದರೂ
ನಕ್ಕರೂ ನಗದಿದ್ದರೂ
ಮುಟ್ಟಿದರೂ ಮುಟ್ಟದಿದ್ದರೂ
ಮುತ್ತು ಕೊಟ್ಟರೂ ದೂರ ನಿಂತರೂ
ಬರೆದರೂ ಬರೆಯದಿದ್ದರೂ
ಹೆದರಿದರೂ ಹೆದರದಿದ್ದರೂ
ಏನೇ ಮಾಡಿದರೂ ಅದಕ್ಕೊಂದು
ತಪ್ಪದ ರಗಳೆ.
ನನಗೆ ನನ್ನದೇ ಸಾವಿರ ಚಿಂತೆಗಳು
ಈಗೇನು ಬೇಗ ಹೇಳು ಮುಸ್ಲಿಮಳಾದರೆ ಬುರ್ಖಾ
ಹಿಂದೂ ಆದರೆ ರಾಮನಾಮ ಕ್ರಿಶ್ಚಿಯನ್ ಆದರೆ
ಚರ್ಚು ಅನ್ನಬೇಕು ತಾನೇ?
ಅನ್ನುತ್ತೇನೆ ಹೋಗು ಸುಮ್ಮನೆ
ಹೆಪ್ಪಿಗೆ ಬಂದವರು ಹಸುವಿನ ಬೆಲೆ ಕೇಳಬಾರದು
ತಪ್ಪಿಗೆ ತಡಕುವವರು ಮೊಲೆ ನೋಡಬಾರದು
-2-
ಸನಾತನಿಯ ಜೊತೆ ಸಂವಾದ
ಸುಂದರ ಪದ್ಯ ಬರೆಯಬೇಕೆಂದು ನಿರ್ಧಸಿದ ದಿನವೇ
ಮಸೀದಿ ಉರುಳಿಸಿ ಬುಡನ್ ಸಾಹೇಬರ ದರ್ಗಾಗೆ
ಕೇಸರಿ ಹೊದಿಸಿ ವೈಕುಂಠ ಏಕಾದಶಿಯ ದಿನ
ಹೆಚ್ಚಿನ ಪೊಲೀಸ್ ಬಂದೋಬಸ್ತ್ ಎಲ್ಲ ನಡೆದು
ಸಾಯಂಕಾಲದ ಹೊತ್ತಿಗೆ ಬೇಸರದಲ್ಲಿ ಬಿಯರ್ ಕುಡಿದು
ರಾತ್ರಿ ಕೇಳಿಗೆ ಕರೆದರೆ ಹೇಳುತ್ತಿದ್ದೀಯಾ
ರಾಹುಕಾಲದಲ್ಲಿ ಏನನ್ನೂ ಮಾಡಬಾರದು
ಮೈಲಿಗೆಯಲ್ಲಿ ಮಾತನ್ನೂ ಆಡಬಾರದು











Click it and Unblock the Notifications