ಶಿಶುಗೀತ :ಚಂದಿರನೇತಕೆ ಓಡುವನಮ್ಮ?
ಲಕ್ಷಾಂತರ ಕನ್ನಡಿಗರು ಶಾಲೆಗಳಲ್ಲಿ ಓದಿ, ಅಂಗಳದಲ್ಲಿ ಹಾಡಿ ನಲಿದ ಈ ಶಿಶುಗೀತವನ್ನು ಇಂದು ಪುನರಪಿ ಹಾಡಲು ನಮ್ಮ ಅಂತರ್ ಜಾಲ ತಾಣ ಸಂತೋಷಡುತ್ತದೆ. ನಿಮ್ಮ ಮಗುವಿಗೆ ಈ ಪದ್ಯದ ಬಾಯಿಪಾಠ ಮಾಡಿಸುವಿರೇನು! ಯಾವತ್ತೂ ಮರೆಯದ ಸುಭಗಶೈಲಿಯ ಪದ್ಯವನ್ನು ಕೊಟ್ಟ ಕವಿಗೆ ಅನಂತ ನಮಸ್ಕಾರಗಳು-ದಟ್ಸ್ ಕನ್ನಡ
ಕವಿ : ನೀ. ರೆ. ಹೀರೇಮಠ
ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೆ?
ಹಿಂಜಿದ ಅರಳೆಯು ಗಾಳಿಗೆ ಹಾರಿ
ಮೋಡಗಳಾಗಿಹವೇ?
ಅರಳೆಯು ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗಿಯುವವೇ?
ಮಂಜಿನಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು ಹರಿಯುತ
ಬಾನಲಿ ತೇಲುವನು
ಚಂದಿರನೆನ್ನಯ ಗೆಳೆಯನು ಅಮ್ಮಾ
ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ












Click it and Unblock the Notifications