ಅವ್ವ ನೀ ಮತ್ತ್ಯಾವ ಹೆಣ್ಣಲ್ಲಿ ಸಿಗುತ್ತಿ?
ಕಪ್ಪು ಮಸಿ ಬಣ್ಣದ ತೊಲೆಯ ಮೇಲೆ
ನಿಂತ ಕಟ್ಟಿಗೆಯ ಓರೆ ಸೂರು
ಸಗಣಿ ಸಾರಿದ ಘಮ್ಮೆನ್ನುವ ಅಂಕು
ಡೊಂಕು ನೆಲದ ಮೇಲೆ ಕೂರು
ಅಪ್ಪನ ಸಿಟ್ಟಿನಂತೆ ಧಗಧಗಿಸುವ ಕಟ್ಟಿಗೆಯ ಒಲೆ
ಹೊಗೆ ತುಂಬಿ ಸಿಟ್ಟು ಬಿಟ್ಟು ಹೋದ ಕಣ್ಣೀರ ಕಲೆ
ಅಮ್ಮನ ಸುಟ್ಟು ಸುಕ್ಕುಗಟ್ಟಿದ ಕೆನ್ನೆಯ ಚರ್ಮದ ಮೇಲೆ
ದೂರದ ಹಳ್ಳದ ತೊರೆಯಿಂದ ತಂದ ಕುಡಿಯುವ ನೀರು
ಶಾಂತ ಮುಖದ ಹಣೆಯ ಮೇಲೆ ಮೂರು ಚಿಂತೆಯ ಗೀರು
ಏನೂ ಕೊಟ್ಟಿಲ್ಲ ಆ ದೇವ ಅವಳಿಗೆ
ಕೊಟ್ಟಷ್ಟೂ ಅವಳು ಕೊಟ್ಟಿದ್ದಾಳೆ ತನ್ನ ಮಕ್ಕಳಿಗೆ
ಆಕ್ಷೇಪ ಆಸೆಗಳಿಲ್ಲ ಬದುಕಿನೊಂದಿಗೆ ತನ್ನ ಬಗ್ಗೆ
ಎಂದೂ ಬತ್ತದ ಮಮತೆಯ ಚಿಲುಮೆ ಆ ಬುಗ್ಗೆ
ಮಗನ ತೋಳ್ಗಳಲಿ ತನ್ನ ಬಲ ಕಂಡಳು
ಮಗಳ ಮೂಗುತಿಯಲಿ ತನ್ನ ಸೌಂದರ್ಯ ಪಡೆದಳು
ಏನೂ ಕೊಡದಿದ್ದರೂ ಪಡೆದಷ್ಟಕ್ಕೇ ಧನ್ಯಳು ತನ್ನ ಗಂಡನಿಗೆ
ಬಿಸಿಲು ಮಳೆ ಚಳಿ ಎನ್ನದೇ ಬಡಿಸುವಳು ರುಚಿ ರುಚಿ ಅಡುಗೆ
ಇದ್ದ ಅಲ್ಪ ಮೃಷ್ಟಾನ್ನ ಹಂಚಿ ನಮ್ಮನು ಉಣಿಸಿ ಪಡೆವಳು ತೃಪ್ತಿ
ತಣ್ಣೀರು ಕುಡಿದು ಬರೀ ನೆಲದ ಮೇಲೆ ಮಲಗಿ ನೂರ್ಕಾಲ
ಬಾಳಿದ ನನ್ನ ತಾಯಿ ಬಹು ಗಟ್ಟಿಗಿತ್ತಿ
ಎಂದೆಲ್ಲ ಹೇಳಿದಾಗ ಮೂತಿ ಸೊಟ್ಟ ಮಾಡಿಕೊಂಡು
ಹಾರಿ ಹೋಗಿತ್ತು ನನ್ನ ಪಾತರಗಿತ್ತಿ!
ಅವ್ವ ನೀ ಮತ್ತ್ಯಾವ ಹೆಣ್ಣಲ್ಲಿ ಸಿಗುತ್ತಿ ?












Click it and Unblock the Notifications